ಗ್ಯಾರಂಟಿಗೆ ಮತ ನೀಡಿ, ಅಕ್ಷತೆಗಲ್ಲ ಎಂಬುದು ನಮ್ಮ ಉದ್ದೇಶ: ಹೇಳಿಕೆ ಸಮರ್ಥಿಸಿಕೊಂಡ ಹೆಚ್​​ಸಿ ಬಾಲಕೃಷ್ಣ

Magadi MLA HC Balakrishna: ಗ್ಯಾರಂಟಿ ವಿಚಾರವಾಗಿ ಬಾಲಕೃಷ್ಣ ನೀಡಿದ್ದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿಕೆಯನ್ನು ಖಂಡಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಹ ಸ್ಪಷ್ಟನೆ ನೀಡಿ, ಗ್ಯಾರಂಟಿ ಐದು ವರ್ಷ ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಬಾಲಕೃಷ್ಣ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಗ್ಯಾರಂಟಿಗೆ ಮತ ನೀಡಿ, ಅಕ್ಷತೆಗಲ್ಲ ಎಂಬುದು ನಮ್ಮ ಉದ್ದೇಶ: ಹೇಳಿಕೆ ಸಮರ್ಥಿಸಿಕೊಂಡ ಹೆಚ್​​ಸಿ ಬಾಲಕೃಷ್ಣ
ಹೆಚ್​​ಸಿ ಬಾಲಕೃಷ್ಣ
Follow us
| Updated By: ಗಣಪತಿ ಶರ್ಮ

Updated on: Jan 31, 2024 | 2:08 PM

ಮಾಗಡಿ, ಜನವರಿ 31: ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳಿಗೆ ಮತ ನೀಡಬೇಕೇ ಹೊರತು ಬಿಜೆಪಿಯವರ ಅಕ್ಷತೆಗಲ್ಲ ಎಂಬುದಷ್ಟೇ ನಮ್ಮ ಉದ್ದೇಶ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ. ಈ ಮೂಲಕ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ಹೆಚ್ಚು ಮತ ನೀಡದಿದ್ದರೆ ಗ್ಯಾರಂಟಿ ಯೋಜನೆಗಳು ರದ್ದಾಗಬಹುದು ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಾಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮತ ಹಾಕಲೇಬೇಕು, ಗ್ಯಾರಂಟಿ ಯೋಜನೆ ರದ್ದುಮಾಡಿಯೇ ಬಿಡುತ್ತೇವೆ ಎಂದು ಹೇಳಿಲ್ಲ. ನಮ್ಮದು ಬ್ಲ್ಯಾಕ್​​ಮೇಲ್ ಸಂಸ್ಕೃತಿ ಅಲ್ಲ. ನಾವು ಕೆಲಸ ಮಾಡಿದ್ದೇವೆ, ನಮಗೆ ಮತ ನೀಡಿ ಎಂದು ಕೇಳುತ್ತಿದ್ದೇವಷ್ಟೆ ಎಂದರು.

ನಾವು ವಾಸ್ತವಾಂಶವನ್ನು ಜನರ ಮುಂದೆ ಇಡುತ್ತಿದ್ದೇವೆ. ನಮ್ಮ ವಿರೋಧಿಗಳು ವಿರೋಧಿಸುತ್ತಿದ್ದಾರೆ. ಅವರು ವಿರೋಧ ಮಾಡಲಿ. ಹಿಂದೆ ಜನಧನ್ ಖಾತೆ ಮಾಡಿ ಏನಾಯ್ತು? ಕಳ್ಳರನ್ನು ಹಿಡಿಯುತ್ತೇವೆ, ಸ್ವಿಸ್ ಬ್ಯಾಂಕಿನ ಹಣ ತಂದು ಹದನೈದು ಲಕ್ಷ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದಿದ್ದರು. ಹಾಕಿದರಾ? ಅವರು ಹೇಳಿಯೂ ಮಾಡುವುದಿಲ್ಲ. ನಾವು ಹೇಳಿದ್ದನ್ನು ಮಾಡಿದ್ದೇವೆ, ಅದಕ್ಕೆ ಮತ ಕೊಡಿ ಎಂದು ಕೇಳಿದ್ದೇವೆ ಎಂದು ಬಾಲಕೃಷ್ಣ ಹೇಳಿದ್ದಾರೆ.

ಗ್ಯಾರಂಟಿ ರದ್ದು ಕುರಿತು ನೀಡಿದ ಹೇಳಿಕೆ ನನ್ನ ವೈಯಕ್ತಿಕ ವಿಚಾರ. ಆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಗ್ಯಾರಂಟಿ ವಿಚಾರವಾಗಿ ಮುಖ್ಯಮಂತ್ರಿ ಬಳಿ ಚರ್ಚೆ ಮಾಡುತ್ತೇನೆ. ಅದರ ಮೂಲಕ 60 ಸಾವಿರ ಕೋಟಿ ರೂಪಾಯಿ ನಾವು ಜನಗಳಿಗೆ ಕೊಟ್ಟಿದ್ದೇವೆ. ಗ್ಯಾರಂಟಿ ನಿಲ್ಲಸಿಬಿಟ್ಟರೆ ಸಿಗುವ ಹಣದಲ್ಲಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡಬಹುದು. ಗ್ಯಾರಂಟಿ ರೂಪದಲ್ಲಿ ಅಷ್ಟೆಲ್ಲಾ ಕೊಟ್ಟೂ ಕೂಡ ಅಭಿವೃದ್ಧಿ ಕಾಮಾಗಾರಿ ಮಾಡುತ್ತಾ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಪ್ರಸ್ತಾಪ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಯಾಕೆ ಮತ ನೀಡುತ್ತೀರಿ? ದೇವಸ್ಥಾನ ಕಟ್ಟಿದ್ದಕ್ಕೆ ಮತ ನೀಡುತ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಬೆಂಬಲ ನೀಡುವ ಬದಲು ನಮಗೆ ಶಕ್ತಿ ತುಂಬಿದರೆ ಇನ್ನೂ ಹಲವಾರ ಯೋಜನೆಗಳನ್ನು ಕೊಡುತ್ತೇವೆ ಎಂದು ಬಾಲಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಮತ ಹಾಕದಿದ್ದರೆ ಗ್ಯಾರಂಟಿಗಳು ರದ್ದು: ಮಾಗಡಿ ಶಾಸಕ ಬಾಲಕೃಷ್ಣ ಎಚ್ಚರಿಕೆಗೆ ವಿಜಯೇಂದ್ರ ತಿರುಗೇಟು

ಗ್ಯಾರಂಟಿ ವಿಚಾರವಾಗಿ ಬಾಲಕೃಷ್ಣ ಮಂಗಳವಾರ ಶ್ರೀಗಿರಿಪುರದಲ್ಲಿ ನೀಡಿದ್ದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ ಹಾಗೂ ಇತರ ಅನೇಕ ನಾಯಕರು ಬಾಲಕೃಷ್ಣ ಹೇಳಿಕೆಯನ್ನು ಖಂಡಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಹ ಸ್ಪಷ್ಟನೆ ನೀಡಿದ್ದು, ಗ್ಯಾರಂಟಿ ಯೋಜನೆಗಳು ಐದು ವರ್ಷ ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಬಾಲಕೃಷ್ಣ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ