ಕಾಂಗ್ರೆಸ್ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲ; ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ
ಲೋಕಸಭೆ ಚುನಾವಣೆಯಲ್ಲಿ ಸೋತರೆ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸಲಾಗುವುದು ಎಂಬ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆಗೆ ಈಗ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಸೇರಿದಂತೆ ಇನ್ನಿತರ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನೇರವಾಗಿ ಜನರಿಗೆ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವು ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.

ಬೆಂಗಳೂರು, (ಜನವರಿ 31): ಲೋಕಸಭೆ ಚುನಾವಣೆಯಲ್ಲಿ (Loksbaha Elections 2024) ಸೋತರೆ ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ರದ್ದುಪಡಿಸಲಾಗುವುದು ಎಂಬ ಕಾಂಗ್ರೆಸ್ ಶಾಸಕ ಬಾಲಕೃಷ್ಣ (Balakrishna) ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನು ಇದಕ್ಕೆ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದು, ನೇರವಾಗಿ ಜನರಿಗೆ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವು ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳುವುದನ್ನು ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಇದೀಗ ಚುನಾವಣಾ ಸಮಯದಲ್ಲಿ ಆಶ್ವಾಸನೆ ನೀಡಿದ ಗ್ಯಾರಂಟಿಗಳನ್ನೂ ಈಡೇರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿಗೆ ಮತ ನೀಡಿ, ಅಕ್ಷತೆಗಲ್ಲ ಎಂಬುದು ನಮ್ಮ ಉದ್ದೇಶ: ಹೇಳಿಕೆ ಸಮರ್ಥಿಸಿಕೊಂಡ ಹೆಚ್ಸಿ ಬಾಲಕೃಷ್ಣ
ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್, ತನ್ನ ಚುನಾವಣಾ ಗ್ಯಾರಂಟೀಗಳನ್ನೂ ಈಡೇರಿಸುತ್ತಿಲ್ಲ. ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಜನತೆ ಕೈ ಗೆ “ಕೈ” ಕೊಡಲಿದ್ದಾರೆ ಎಂದಿದ್ದಾರೆ.
ಬಾಲಕೃಷ್ಣ ಹೇಳಿದ್ದೇನು?
ಮಂಗಳವಾರ ಮಾಗಡಿ ತಾಲೂಕು ಕುದೂರು ಹೋಬಳಿಯ ಶ್ರೀಗಿರಿಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ್ದ ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ, ಬಿಜೆಪಿಯವರು ಮಂದಿರದ ಹೆಸರಿನಲ್ಲಿ ಅಕ್ಷತೆ ನೀಡಿ ಮತ ಕೇಳುತ್ತಿದ್ದಾರೆ. ನಾವು ಐದು ಉಚಿತ ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ದೊರೆಯುವಂತೆ ಮಾಡದಿದ್ದರೆ ಗ್ಯಾರಂಟಿಗಳ ಬಗ್ಗೆ ಜನರಿಗೆ ಒಲವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದರು.
ಅಲ್ಲದೆ, ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದರೆ ಗ್ಯಾರಂಟಿ ಯೋಜನೆಗಳು ರದ್ದಾಗಬಹುದು ಎಂದೂ ಅವರು ಹೇಳಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ