ಕರ್ನಾಟಕದಲ್ಲಿ ಭಾರತ್ ಜೋಡೋ: ರಾಹುಲ್​ ಗಾಂಧಿ ಯಾತ್ರೆಗೆ ಟಾಂಗ್ ನೀಡಲು ಬಿಜೆಪಿ ಪ್ಲ್ಯಾನ್ ರೆಡಿ

| Updated By: ರಮೇಶ್ ಬಿ. ಜವಳಗೇರಾ

Updated on: Sep 29, 2022 | 1:20 PM

ಕರ್ನಾಟಕದಲ್ಲಿ ಆರಂಭವಾಗಲಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಠಕ್ಕರ್ ಕೊಡಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.

ಕರ್ನಾಟಕದಲ್ಲಿ ಭಾರತ್ ಜೋಡೋ:  ರಾಹುಲ್​ ಗಾಂಧಿ ಯಾತ್ರೆಗೆ ಟಾಂಗ್ ನೀಡಲು ಬಿಜೆಪಿ ಪ್ಲ್ಯಾನ್ ರೆಡಿ
Bharat Jodo Yatra
Follow us on

ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಆರಂಭವಾಗಿರುವ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ನಾಳೆ (ಸೆಪ್ಟೆಂಬರ್ 30) ಕರ್ನಾಟಕವನ್ನು ಪ್ರವೇಶಿಸಲಿದೆ. ಕೇರಳದ ವೈನಾಡು ಮೂಲಕ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪುವ ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಕೈಪಡೆ ಪಾದಯಾತ್ರೆ ನಡೆಸಲಿದೆ. ಈ ಯಾತ್ರೆಯನ್ನು ಯಶಸ್ವಿಗೊಳಿಸಲು ಕರ್ನಾಟಕ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದೆಡೆ, ರಾಹುಲ್​ ಗಾಂಧಿ ಯಾತ್ರೆಗೆ ಟಾಂಗ್ ನೀಡಲು ಕರ್ನಾಟಕ ಬಿಜೆಪಿ ಪ್ಲ್ಯಾನ್ ಮಾಡಿದೆ.

ಹೌದು….ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕರ್ನಾಟಕ ಪ್ರವಾದ ವೇಳೆ 40 ಪರ್ಸೆಂಟೇಜ್ ಕಮಿಷನ್, ಅಚ್ಚೇದಿನ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ಮೂಲಕ ಮೋದಿ ಸ್ವಾಗತಕ್ಕೆ ಟಾಂಗ್ ಕೊಟ್ಟಿತ್ತು. ಇದೀಗ ಬಿಜೆಪಿ ಸಹ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಭಾರತ್ ಜೊಡೋ ಯಾತ್ರೆಗೆ ಠಕ್ಕರ್ ಕೊಡಲು ತಂತ್ರ ಹೆಣೆದಿದೆ.

ಇದನ್ನೂ ಓದಿ: Bharat Jodo Yatra: ಕರ್ನಾಟಕಕ್ಕೆ ನಾಳೆ ‘ಭಾರತ ಐಕ್ಯತಾ ಯಾತ್ರೆ’ ಪ್ರವೇಶ: ಜನರಿಗೆ ಪತ್ರ ಬರೆದು ಬೆಂಬಲ ಕೋರಿದ ಡಿಕೆ ಶಿವಕುಮಾರ್

ಭಾರತ್ ಜೋಡೋ ಯಾತ್ರೆ ವಿರುದ್ಧ ಸೋಷಿಯಲ್ ಮೀಡಿಯಾ ಮತ್ತು ಹೋರ್ಡಿಂಗ್ಸ್ ಗಳ ಮೂಲಕ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ. ಅಲ್ಲದೇ ಭಾರತ್ ಜೋಡೋ ಯಾತ್ರೆ ಎಷ್ಟು ಪ್ರಸ್ತುತ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಲು ಸಜ್ಜಾಗಿದೆ. ನಾಳೆ ಕರ್ನಾಟಕ ಪ್ರವೇಶದ ವೇಳೆ ರಾಹುಲ್ ಗಾಂಧಿಗೆ ಪ್ರಶ್ನಾವಳಿಗಳನ್ನು ಮುಂದಿಟ್ಟು ಉತ್ತರ ನೀಡುವಂತೆ ಆಗ್ರಹಿಸಲು ಕೂಡಾ ಬಿಜೆಪಿ ಪ್ಲ್ಯಾನ್‌ ಮಾಡಿಕೊಂಡಿದೆ.

ಈ ಬಗ್ಗೆ ಈಗಾಗಲೇ ಬಿಜೆಪಿ ಸೋಷಿಯಲ್ ಮೀಡಿಯಾ ವಿಭಾಗದ ರಾಜ್ಯ ವಿಶೇಷ ಸಭೆಯಲ್ಲಿ ಚರ್ಚೆ ನಡೆದಿದ್ದು, ಮತ್ತೊಂದೆಡೆ ರಾಹುಲ್ ಗಾಂಧಿ ಯಾತ್ರೆ ಸಾಗುವ ಮಾರ್ಗಗಳಲ್ಲಿ ಹೋರ್ಡಿಂಗ್ಸ್ ಅಳವಡಿಸಿ ತಿರುಗೇಟು ನೀಡುವ ಬಗ್ಗೆ ಕೂಡಾ ಬಿಜೆಪಿ ಚಿಂತನೆ ನಡೆಸಿದೆ.

ಭಾರತ್ ಜೋಡೋ ಯಾತ್ರೆಯ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳು

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಲಾಗಿದ್ದ ಭಾರತ್ ಜೋಡೋ ಯಾತ್ರೆ ಸ್ವಾಗತ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಹರಿದು ಹಾಕಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ: ಎಂಎಲ್​ಸಿಗಳಿಗೂ ಮಹತ್ವದ ಜವಾಬ್ದಾರಿ ನೀಡಿದ ಡಿಕೆಶಿ

ಗುಂಡ್ಲುಪೇಟೆಯ ಊಟಿ ಸರ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಅದರ ಎರಡು ಬದಿಯಲ್ಲಿ ಅಳವಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ನಾಯಕರ ಸುಮಾರು 40ಕ್ಕೂ ಅಧಿಕ ಫ್ಲೇಕ್ಸ್ ಗಳನ್ನು ಕಿಡಿಗೇಡಿಗಳು ಬ್ಲೇಡ್ ನಲ್ಲಿ ಹರಿದು ಹಾಕುವ ಮೂಲಕ ದುಷ್ಕೃತ್ಯ ಮೆರೆದಿದ್ದಾರೆ. ಇದು ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ ಪ್ರಸಾದ್ ಪ್ರತಿಕ್ರಿಯೆ ನೀಡಿ, ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆಯಿಂದ ಆರಂಭವಾಗುತ್ತಿರುವ ಕಾರಣ ಯಾತ್ರೆ ತಡೆಯಬೇಕು ಎಂಬ ಉದ್ದೇಶದಿಂದ ದುಷ್ಕರ್ಮಿಗಳು ರಾತ್ರೋ ರಾತ್ರಿ ಫ್ಲೇಕ್ಸ್ ಗಳನ್ನು ಹರಿದು ಹಾಕಿದ್ದಾರೆ. ಇದ್ಯಾವುದಕ್ಕೂ ನಾವು ಹೆದರುವುದಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಎಲ್ಲೆಲ್ಲಿ?

ಮೊದಲ ಹಂತದ ರೂಟ್ ಮ್ಯಾಪ್

ತಮಿಳುನಾಡು ರಾಜ್ಯದಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚಾರ ಮಾಡಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಲಾಗುತ್ತದೆ.

ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ ನಂತರ ಇಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರುಗೆ ಪಾದಯಾತ್ರೆ ತೆರಳಲಿದೆ. ಹಿರಿಯೂರಿನಿಂದ ಚಳ್ಳಕೇರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ಆಂಧ್ರ ಪ್ರವೇಶವನ್ನು ಪಾದಯಾತ್ರೆ ಪ್ರವೇಶಿಸಲಿದೆ.

ಎರಡನೇ ಹಂತದ ರೂಟ್ ಮ್ಯಾಪ್

ಹೀರೆಹಾಳ್‌ ನಿಂದ ಓಬಾಳಪುರ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಲಾಗುತ್ತದೆ. ಹಲಕುಂಡಿ, ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಆರಂಭಗೊಂಡು ಅಲ್ಲಿಂದ ಅಲುರ್ ಮೂಲಕ ಆಂಧ್ರ ಪ್ರವೇಶ ಮಾಡಲಿದೆ.

ಮೂರನೇ ಹಂತದ ರೂಟ್ ಮ್ಯಾಪ್

ಮಾಧವರಂ ಮೂಲಕ‌ ರಾಯಚೂರಿನ ಗಿಲ್ಲೆಸೂಗೂರು ಮೂಲಕ ಪಾದಯಾತ್ರೆ ತಂಡ ಪ್ರವೇಶ ಮಾಡಲಿದೆ. ಗಿಲ್ಲೆಸೂಗೂರು ನಿಂದ ಯರೇಗಾರಕ್ಕೆ ಪಾದಯಾತ್ರೆ ಸಂಚರಿಸಲಿದೆ. ಯರೇಗಾರ ಮೂಲಕ ರಾಯಚೂರು, ರಾಯಚೂರಿನಿಂದ ದೇವಸೂಗೂರುಗೆ ಭಾರತ್ ಜೋಡೋ ಯಾತ್ರೆ ತೆರಳಲಿದೆ. ದೇವಸೂಗೂರಿನಿಂದ ವಿಕಾರಬಾದ್ ಮೂಲಕ ತೆಲಂಗಾಣಕ್ಕೆ ಪ್ರವೇಶ ಮಾಡಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Thu, 29 September 22