Lok Sabha Election: ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು 40 ಸಾವಿರ ಕಾರ್ಯಕರ್ತರನ್ನು ನಿಯೋಜಿಸಲಿದೆ ಬಿಜೆಪಿ

|

Updated on: Jan 24, 2024 | 8:26 AM

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ನಿಧಾನವಾಗಿ ಹೆಚ್ಚಾಗುತ್ತಿದೆ. ಒಂದಡೆ ಕಾಂಗ್ರೆಸ್​ ತನ್ನ ಐದು ಗ್ಯಾರೆಂಟಿ ಯೋಜನೆಗಳ ಮುಖಾಂತರ ಜನರ ಮುಂದೆ ಹೋಗಲು ನಿರ್ಧರಿಸಿದ್ದರೇ, ಇತ್ತ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಮನ-ಮನೆಗೆ ಮುಟ್ಟಿಸಲು ಹೊಸ ಕಾರ್ಯತಂತ್ರ ರೂಪಿಸಿದೆ. ಏನದು? ಇಲ್ಲಿದೆ ಓದಿ..

Lok Sabha Election: ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು 40 ಸಾವಿರ ಕಾರ್ಯಕರ್ತರನ್ನು ನಿಯೋಜಿಸಲಿದೆ ಬಿಜೆಪಿ
ಬಿಜೆಪಿ ನಾಯಕರು
Follow us on

ಬೆಂಗಳೂರು, ಜನವರಿ 24: ಲೋಕಸಭೆ ಚುನಾವಣೆಗೆ (Lok Sabha Election) ಇನ್ನೂ 3-4 ತಿಂಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ-ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಮಲಪಾಳಯವು ತನ್ನ 40 ಸಾವಿರ ಕಾರ್ಯಕರ್ತರನ್ನು ಫೀಲ್ಡ್​ಗೆ ಇಳಿಸಲು ನಿರ್ಧರಿಸಿದೆ.

ಮಂಗಳವಾರ (ಜ.23) ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ವಿ. ಸುನಿಲ್​ ಕುಮಾರ್​, ಕೇಂದ್ರ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮುಂದಿನ 100 ದಿನಗಳ ಕಾಲ 40,000 ಕ್ಕೂ ಹೆಚ್ಚು ಕಾರ್ಯಕರ್ತರು ರಾಜ್ಯದ ಪ್ರತಿ ಪಂಚಾಯಿತಿ ಮತ್ತು ವಾರ್ಡ್‌ಗಳ ಮನೆ ಮನೆಗಳಿಗೆ ತೆರಳಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಸಂಬಂಧ ಒಂದು ವಾರದಲ್ಲಿ ಕಾರ್ಯಕರ್ತರನ್ನು ನೇಮಿಸಲಾಗುವುದು. ಈ ಕಾರ್ಯಕರ್ತರು ಫಲಾನುಭವಿಗಳನ್ನು ಗುರುತಿಸುವುದು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭರವಸೆಗಳನ್ನು ಹೇಗೆ ಇಡೇರಿಸಿದ್ದಾರೆ ಎಂಬುವುದರ ಕುರಿತು ವಿವರಿಸಲು ಬೀದಿ, ಬೀದಿಗಳಲ್ಲಿ ಸಣ್ಣ ಸಭೆಗಳನ್ನು ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೇಂದ್ರ ನಾಯಕರು ಶೀಘ್ರದಲ್ಲೇ ರಾಜ್ಯದಲ್ಲಿ ಪ್ರಚಾರ ಆರಂಭಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಈ ಮೂಲಕ ರಾಜ್ಯದಲ್ಲಿ ಪ್ರಚಾರ ಕಾರ್ಯ ಚುರುಕುಗೊಳ್ಳಲಿದೆ ಎಂದರು.

ಇದನ್ನೂ ಓದಿ: Lok Sabha Election Date: ಏಪ್ರಿಲ್​​ 16ಕ್ಕೆ ಲೋಕಸಭೆ ಚುನಾವಣೆ? ಚುನಾವಣಾ ಆಯೋಗದ ಸ್ಪಷ್ಟನೆ ಇಲ್ಲಿದೆ

ಅಂತಿಮವಾಗಿ, ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲು ರಾಜ್ಯ ಬಿಜೆಪಿ ಚಿಂತಿಸುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿಲ್ಲ. ಆದರೆ ಧರಣಿ ಪ್ರತಿಭಟನೆಯ ಜೊತೆಗೆ ಪಾದಯಾತ್ರೆಯನ್ನು ಆಯೋಜಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ತಿಳಿಸಿದರು.

ಜನವರಿ 27 ರಂದು ನಗರದ ಅರಮನೆ ಮೈದಾನದಲ್ಲಿ ಒಂದು ದಿನದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹಾಗೂ ಇತರ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.

ಫೆಬ್ರವರಿ 9 ರಂದು ಮೈಸೂರಿನ ಸುತ್ತೂರು ಮಠದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:46 am, Wed, 24 January 24