ಶಾಸಕಾಂಗ ಸಭೆ ರದ್ದಾದರೆ ಯಡಿಯೂರಪ್ಪ ಪದಚ್ಯುತಿ ಸಲೀಸು; ಸಿಎಂ ಬೆಂಬಲಿಗರ ಬಾಯಿ ಮುಚ್ಚಿಸಲು ಮಾಸ್ಟರ್ ಪ್ಲ್ಯಾನ್?
ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳಲು ಬೇರೆಯವರು ಮಾಡಬಹುದಾದ ಪ್ರಯತ್ನಗಳಿಗೆ ಅವಕಾಶವನ್ನೇ ನೀಡದೆ, ಪರಿಸ್ಥಿತಿಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂಭವ ಹೆಚ್ಚಿದೆ ಎಂಬ ಮಾತು ಪಕ್ಷದ ಪಡಸಾಲೆಯಿಂದಲೇ ಕೇಳಿಬರುತ್ತಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಭಾರೀ ಕುತೂಹಲ ಕೆರಳಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S Yediyurappa) ಉದ್ದೇಶಿಸಿ ಜುಲೈ 25ರಂದು ನಡೆಸಬೇಕಾಗಿದ್ದ ಬಿಜೆಪಿ ಶಾಸಕಾಂಗ ಸಭೆಯನ್ನು ನಿನ್ನೆಯೇ ದಿಢೀರ್ ಎಂದು ರದ್ದುಗೊಳಿಸಲಾಗಿದೆ. ಆದರೆ, ಸರ್ಕಾರ 2 ವರ್ಷಗಳನ್ನು ಪೂರೈಸುತ್ತಿರುವ ನೆಪದಲ್ಲಿ ಜುಲೈ 25ರ ರಾತ್ರಿ ಭೋಜನಕೂಟ ನಿಗದಿ ಮಾಡಲಾಗಿದೆ. ಇದೀಗ ಶಾಸಕಾಂಗ ಸಭೆ ರದ್ದತಿ ಬಗ್ಗೆ ಪಕ್ಷದ ಆಪ್ತ ಮೂಲಗಳಿಂದಲೇ (Source) ಮಾಹಿತಿ ಸಿಕ್ಕಿದ್ದು, ಶಾಸಕಾಂಗ ಸಭೆಗೂ ಮುಖ್ಯಮಂತ್ರಿ (Karnataka Chief Minister) ಬದಲಾವಣೆಗೂ ಸಂಬಂಧ ಇಲ್ಲ. ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಶಾಸಕಾಂಗ ಸಭೆ ಅವಶ್ಯಕತೆ ಇದೆ. ಆದರೆ, ಅವರ ಸ್ಥಾನದಿಂದ ಕೆಳಗಿಸಲು ಶಾಸಕಾಂಗ ಸಭೆ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಪದಚ್ಯುತಿ ವಿಚಾರವನ್ನು ಕೈಬಿಟ್ಟಿಲ್ಲ ಎಂಬುದನ್ನು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಶಾಸಕಾಂಗ ಸಭೆ ಮಾಡಿ ಗೊಂದಲಕ್ಕಿಡಾಗುವುದು ಬೇಡ ಎಂಬ ನಿಲುವಿಗೆ ಪಕ್ಷದ ವರಿಷ್ಠರು ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಶಾಸಕಾಂಗ ಸಭೆ ರದ್ದು ಮಾಡಿದ ಹೈಕಮಾಂಡ್ ಭಾರೀ ಮುಂದಾಲೋಚನೆ ಮಾಡಿದ್ದು, ಶಾಸಕಾಂಗ ಸಭೆಯಲ್ಲಿ ಶಾಸಕರು ಬಿಎಸ್‌ವೈ ಪರವಾಗಿ ನಿಂತರೆ ಕಷ್ಟ ಎಂಬ ಕಾರಣಕ್ಕಾಗಿ ಸಭೆಯನ್ನು ರದ್ದುಪಡಿಸಲಾಗಿದೆ ಎನ್ನುವುದು ತಿಳಿದುಬಂದಿದೆ.
ಹೀಗಾಗಿ ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳಲು ಬೇರೆಯವರು ಮಾಡಬಹುದಾದ ಪ್ರಯತ್ನಗಳಿಗೆ ಅವಕಾಶವನ್ನೇ ನೀಡದೆ, ಪರಿಸ್ಥಿತಿಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂಭವ ಹೆಚ್ಚಿದೆ ಎಂಬ ಮಾತು ಪಕ್ಷದ ಪಡಸಾಲೆಯಿಂದಲೇ ಕೇಳಿಬರುತ್ತಿದೆ. ಜತೆಗೆ, ಶಾಸಕಾಂಗ ಸಭೆಗೂ ಸಿಎಂ ಬದಲಾವಣೆಗೂ ಸಂಬಂಧ ಇಲ್ಲ. ಸಿಎಂ ಸ್ಥಾನದಿಂದ ಕೆಳಗಿಸಲು ಶಾಸಕಾಂಗ ಸಭೆ ಅವಶ್ಯಕತೆ ಇಲ್ಲ ಎಂಬ ಮಾತು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಸದ್ಯ ಜುಲೈ 25ರ ರಾತ್ರಿ ಭೋಜನಕೂಟ ನಿಗದಿ ಮಾಡಲಾಗಿದ್ದು, ಬಿಜೆಪಿ ಎಮ್ಎಲ್ಎಗಳು ಹಾಗೂ ಎಮ್ಎಲ್ಸಿಗಳು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಡಿಯೂರಪ್ಪ ಬದಲಾದ್ರೆ ರೇಣುಕಾಚಾರ್ಯಗೆ ಸಂಕಷ್ಟ ಏತನ್ಮಧ್ಯೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ದೆಹಲಿಗೆ ಹಾರಿದ್ದಾರೆ. ಇಷ್ಟು ದಿನ ಯಡಿಯೂರಪ್ಪ ಅವರನ್ನ ಬೆಂಬಲಿಸುತ್ತಿದ್ದ ರೇಣುಕಾಚಾರ್ಯ ಇದೀಗ ಪೇಚಿಗೆ ಸಿಲುಕಿದ್ದು, ಅತಿಯಾಗಿ ಯಡಿಯೂರಪ್ಪರನ್ನ ಬೆಂಬಲಿಸಿದ್ದೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಡಿಯೂರಪ್ಪ ಅವರ ಪಕ್ಕಾ ಶಿಷ್ಯ ಎಂದು ಬಿಂಬಿಸಿಕೊಂಡಿದ್ದ ರೇಣುಕಾಚಾರ್ಯ, ಸಿಎಂ ಬದಲಾವಣೆ ಸುದ್ದಿಗೆ ಬೆಚ್ಚಿ ಬಿದ್ದಿದ್ದು, ಹೈಕಮಾಂಡ್ ಅವಕೃಪೆಗೆ ಒಳಗಾಗುವ ಭಯದಿಂದ ಕೇಂದ್ರ ಸಚಿವರ ಭೇಟಿಗೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆ ಮೂಲಕ ಆಗಿರುವ ಡ್ಯಾಮೇಜ್ ಸರಿಪಡಿಸಿಕೊಳ್ಳಲು ರೇಣುಕಾಚಾರ್ಯ ಪರದಾಡುತ್ತಿದ್ದು, ಒಂದುವೇಳೆ ಯಡಿಯೂರಪ್ಪ ನಾಯಕತ್ವ ಬದಲಾವಣೆಯಾದರೂ ತನ್ನನ್ನು ಕಡೆಗಣಿಸಬಾರದು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
(Karnataka CM BS Yediyurappa dismissal is nearing Here is the inner details of Master Plan by BJP) ಇದನ್ನೂ ಓದಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಸಭೆ ದಿಢೀರ್ ರದ್ದು
ಸಿಎಂ ಯಡಿಯೂರಪ್ಪ ಪರ ಪೇಜಾವರ ಶ್ರೀಗಳ ಬ್ಯಾಟಿಂಗ್; ಯಡಿಯೂರಪ್ಪರ ತಂಟೆಗೆ ಬರದಂತೆ ವಿವಿಧ ಮಠಾಧೀಶರಿಂದಲೂ ಎಚ್ಚರಿಕೆ