ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಸಭೆ ದಿಢೀರ್ ರದ್ದು
ಈ ಮೊದಲು ಬಿಜೆಪಿ ಪಕ್ಷದ ಶಾಸಕಾಂಗ ಸಭೆಯನ್ನು ನಡೆಸಲು ಸಿಎಂ ಯಡಿಯೂರಪ್ಪ ಉದ್ದೇಶಿಸಿದ್ದರು. ಈಗ ಕುತೂಹಲಕಾರಿ ಬೆಳವಣಿಗೆಯಲ್ಲಿ ಶಾಸಕಾಂಗ ಸಭೆ ರದ್ದಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಸಭೆಯನ್ನು ದಿಢೀರ್ ರದ್ದುಗೊಳಿಸಲಾಗಿದೆ. ಜುಲೈ 25ರ ಬೆಳಗ್ಗೆ 11.30ಕ್ಕೆ ನಿಗದಿಪಡಿಸಿದ್ದ ಸಭೆ ರದ್ದು ಮಾಡಲಾಗಿದೆ. ಆದರೆ, ಜುಲೈ 25ರ ರಾತ್ರಿ ಭೋಜನಕೂಟ ನಿಗದಿ ಮಾಡಲಾಗಿದೆ. ಬಿಜೆಪಿ ಎಮ್ಎಲ್ಎಗಳು ಹಾಗೂ ಎಮ್ಎಲ್ಸಿಗಳಿಗೆ ಭೋಜನಕೂಟ ಏರ್ಪಡಿಸಲಾಗಿದೆ.
ಅಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭೋಜನಕೂಟ ನಡೆಯಲಿದೆ. ಸರ್ಕಾರ 2 ವರ್ಷ ಪೂರ್ಣಗೊಳಿಸಿದ್ದಕ್ಕೆ ಊಟದ ಪಾರ್ಟಿ ಆಯೋಜಿಸಲಾಗಿದೆ. ಜುಲೈ 25ರಂದು ಸಂಜೆ 7.30ಕ್ಕೆ ಶಾಸಕರಿಗೆ ಭೋಜನ ಕೂಟ ಏರ್ಪಡಿಸಲಾಗಿದೆ. ಈ ಮೊದಲು ಬಿಜೆಪಿ ಪಕ್ಷದ ಶಾಸಕಾಂಗ ಸಭೆಯನ್ನು ನಡೆಸಲು ಸಿಎಂ ಯಡಿಯೂರಪ್ಪ ಉದ್ದೇಶಿಸಿದ್ದರು. ಈಗ ಕುತೂಹಲಕಾರಿ ಬೆಳವಣಿಗೆಯಲ್ಲಿ ಶಾಸಕಾಂಗ ಸಭೆ ರದ್ದಾಗಿದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ; ಸಚಿವರ ಪ್ರತಿಕ್ರಿಯೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ನಮ್ಮ ನಾಯಕರು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಸುಮ್ಮನೇ ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕಾಂಗ್ರೆಸ್‌ನವರು ಅನುಕಂಪದ ಹೇಳಿಕೆ ನೀಡುವ ಅಗತ್ಯವಿಲ್ಲ. ಇದು ಬಿಜೆಪಿಯ ಆಂತರಿಕ ವಿಚಾರ ಎಂದು ಆರ್. ಅಶೋಕ್ ಹೇಳಿದ್ದಾರೆ.
ಮತ್ತೊಂದೆಡೆ, ಸಿಎಂ ಯಡಿಯೂರಪ್ಪ ಬದಲಾವಣೆ ಕೇವಲ ವದಂತಿ ಎಂದು ವಿಕಾಸಸೌಧದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ನಮ್ಮದು ಯಾವುದೇ ರೀತಿಯ ಮಿತ್ರಮಂಡಳಿ ಇಲ್ಲ. ಮಿತ್ರಮಂಡಳಿ ಎಂಬುದು ಹಳೇ ಪದ ಎಂದು ಅವರು ತಿಳಿಸಿದ್ದಾರೆ.
ಶಾಸಕರಾದವರಿಗೆ ಸಿಎಂ ಆಗಬೇಕೆಂಬುದು ಇರುತ್ತದೆ. ಎಲ್ಲವೂ ಪಕ್ಷದ ಕೈಯಲ್ಲಿರುತ್ತೆ. ನಾವು ಊಟ ಮಾಡಿದ್ರೆ, ಸಭೆ ಅಂದುಕೊಳ್ಳೋದು ತಪ್ಪು. ನಾವು ಸೇರಿರೋದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಜಾಹೀರಾತಿನಲ್ಲಿ ಸಿಎಂ ಯಡಿಯೂರಪ್ಪನವರ ಫೋಟೊ ಮಿಸ್ ಆಗಿರುವುದು ನನಗೂ ನೋವು ತಂದಿದೆ; ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟೀಕರಣ
ವಿಧಾನಸೌಧ ಕಾರಿಡಾರ್ನಲ್ಲಿ ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
Published On - 9:14 pm, Tue, 20 July 21