ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿಯದ್ದು ಏನೂ ನಡೆಯಲ್ಲ, ಅವರದ್ದೇನಿದ್ದರೂ ಮಂಡ್ಯ, ಹಾಸನ ಎಂದ ಶಾಸಕ ಯತ್ನಾಳ್
ಪಂಚರತ್ನ ಯಾತ್ರೆಯ ವೇಳೆ ವಿಜಯಪುರ ನಗರದಲ್ಲಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಮುರುಗೇಶ್ ನಿರಾಣಿ ವಾಗ್ವಾದದ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರದ್ದು ಉತ್ತರ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದಿದ್ದಾರೆ.
ವಿಜಯಪುರ: ಕುಮಾರಸ್ವಾಮಿ ಅವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರದ್ದು ಉತ್ತರ ಕರ್ನಾಟಕದಲ್ಲಿ ಏನೂ ನಡೆಯುವುದಿಲ್ಲ. ಅವರದ್ದೇನಿದ್ದರೂ ಮಂಡ್ಯ, ಬಂಗಳೂರು ಗ್ರಾಮಾಂತರ ಮತ್ತು ಹಾಸನದಲ್ಲಿ ಮಾತ್ರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ. ಪಂಚರತ್ನ ಯಾತ್ರೆಯ ವೇಳೆ ವಿಜಯಪುರ ನಗರದಲ್ಲಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಮುರುಗೇಶ್ ನಿರಾಣಿ (Murugesh Nirani) ವಾಗ್ವಾದದ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (H.D.Kumaraswamy) ಟೀಕಿಸಿದ್ದರು. ಇನ್ನು ರಾಜ್ಯಕ್ಕೆ ಪದೇಪದೇ ಪ್ರಧಾನ ಮಂತ್ರಿ ಮೋದಿ (Narendra Modi) ಭೇಟಿ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಯತ್ನಾಳ್, ಮೋದಿ ಅವರು ರಾಜ್ಯಕ್ಕೆ ಏಕೆ ಬರಬಾರದೆಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಕ್ಷೇತ್ರ ಸಿಗದೇ ಅಲ್ಲಲ್ಲಿ ಓಡಾಡುತ್ತಿದ್ದಾರೆಂದು ಆರೋಪ ಸಂಬಂಧ ಪ್ರತಿಕ್ರಿಯಿಸಿದ ಯತ್ನಾಳ್, ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹಿರಿಯ ನಾಯಕ ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಒದ್ದಾಡುತ್ತಿದ್ದಾರೆ. ಒಮ್ಮೆ ಕೋಲಾರ ಎನ್ನುತ್ತಾರೆ ಒಮ್ಮೆ ಅವರ ಮಗನ ಕ್ಷೇತ್ರ ಎನ್ನುತ್ತಾರೆ. ಕ್ಷೇತ್ರ ಕುರಿತು ಅವರಿಗೆ ನೆಲೆಯಿಲ್ಲ, ಹೀಗಿದ್ದಾಗ ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಉಳಿದಿಲ್ಲ ಎಂದರು.
ಇದನ್ನೂ ಓದಿ: Karnataka Politics: ಭವಾನಿ ರೇವಣ್ಣಗೆ ಹಾಸನ ಟಿಕೆಟ್ ವಿಚಾರ: ಕುಮಾರಸ್ವಾಮಿ ವ್ಯಂಗ್ಯದ ಪ್ರತಿಕ್ರಿಯೆ
ಮೊದಲು ನಿಮ್ಮ ಚುನಾವಣಾ ಕ್ಷೇತ್ರವನ್ನ ಗಟ್ಟಿ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದ ಯತ್ನಾಳ್, ನಿಮ್ಮನ್ನ ಚುನಾವಣೆಯಲ್ಲಿ ಸೋಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಂಪನಿ ಸಿದ್ದವಾಗಿ ಕುಳಿತಿದೆ. ಇದಕ್ಕೆ ಕಾರಣ ಮುಖ್ಯಮಂತ್ರಿಯಾಗಲು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಜಿದ್ದಾಜಿದ್ದಿ ಇದೆ. ತಮ್ಮ ತಟ್ಟೆಯಲ್ಲಿ ದೊಡ್ಡ ಕತ್ತೆ ಬಿದ್ದಿದೆ. ಅದರಾಚೆ ಪ್ರಧಾನ ಮಂತ್ರಿಗಳ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿನ ಯಾರಿಗೂ ಇಲ್ಲ ಎಂದರು.
ಬಿಜೆಪಿಯಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ
ಬಿಜೆಪಿಯಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ, ಈ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. ಬಿಜೆಪಿಯ 70 ಶಾಸಕರು ಸಹಿ ಮಾಡಿಕೊಟ್ಟಿದ್ದಾರೆ ಎಂಬುದು ಸುಳ್ಳು. ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವ ಬಗ್ಗೆ ಯಾವುದೇ ಶಾಸಕರ ತಕಾರರು ಇಲ್ಲ. ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ನಾಯಕತ್ವ ಬದಲಾವಣೆ ಇಲ್ಲ. ನಮ್ಮ ಕೇಂದ್ರ ನಾಯಕರ ಅಣತಿಯಂತೆ ಸಾಮೂಹಿಕ ನಾಯಕತ್ವ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ ಎಂದರು.
ರಾಜ್ಯ ಸಮಿತಿಯಿಂದ ಏನು ರೆಫರ್ ಮಾಡಿದ್ದಾರೆ ಗೊತ್ತಿಲ್ಲ
ಸಚಿವ ಮುರುಗೇಶ್ ನಿರಾಣಿ ವಿರುದ್ಧದ ಟೀಕೆ ಹಿನ್ನಲೆ ತಮ್ಮ ವಿರುದ್ಧ ಕ್ರಮಕ್ಕೆ ಕೇಂದ್ರ ಶಿಸ್ತು ಸಮಿತಿಗೆ ರಾಜ್ಯದಿಂದ ಶಿಫಾರಸ್ಸು ನೀಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ರಾಜ್ಯ ಸಮಿತಿಯಿಂದ ಏನು ರೆಫರ್ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ಅದರ ನೋಟಿಸ್ ನಿಮ್ಮ ಬಳಿ ಇದ್ದರೆ ಅದನ್ನು ತೋರಿಸಿ, ಅದು ಹೇಗಿದೆ ಎಂದು ನಾನು ನೋಡುತ್ತೇನೆ ಎಂದು ಹೇಳಿದರು.
ಶಿಫಾರಸ್ಸಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾಧ್ಯಕ್ಷ ಕಟೀಲ್ ಆ ರೀತಿ ಹೇಳಿಲ್ಲ, ಕೇಂದ್ರ ಶಿಸ್ತು ಸಮಿತಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ. ನಿಮಗೆ ಬೇಕಾದಂತೆ ಟ್ವಿಸ್ಟ್ ಮಾಡಿದರೆ ನಾವೇನು ಮಾಡೋಕಾಗುತ್ತೆ ಅಂತ ಮಾದ್ಯಮಗಳ ಬಗ್ಗೆ ಆರೋಪಿಸಿದರು. ಶಾಸಕರ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸಿಸ್ತು ಸಮಿತಿಗೆ ಅಧಿಕಾರ ಇರಲ್ಲ. ನನ್ನ ಮೇಲೆ ಕ್ರಮ ಕೈಗೊಳ್ಳಬೇಕಾದರೆ ಕೇಂದ್ರ ಶಿಸ್ತು ಸಮಿತಿ ತೆಗೆದುಕೊಳ್ಳಬಹುದು, ಆದರೆ ರಾಜ್ಯ ಶಿಸ್ತು ಸಮಿತಿಗೆ ಕ್ರಮ ತೆಗೆದುಕೊಳ್ಳಲು ಬರಲ್ಲ. ನನಗೆ ಯಾವುದೇ ನೋಟೀಸ್ ಬಂದಿಲ್ಲ, ನನ್ನ ಬಗ್ಗೆ ಬಹಳ ಪ್ರೀತಿ ಗೌರವ ಪಕ್ಷದಲ್ಲಿದೆ ಎಂದರು.
ನನಗೆ ಕೇಂದ್ರ ನಾಯಕರ ಆಶೀರ್ವಾದವಿದೆ. ಇಲ್ಲಿನ ಚಿಲ್ಲರೆ ಪಲ್ಲರೆ ಜನರಿಗೆ ಉತ್ತರ ಕೊಡಬೇಡ ಎಂದು ಕೇಂದ್ರದ ನಾಯಕರು ಹೇಳಿದ್ದಾರೆ. ನಿನ್ನದೇ ಆದ ಗೌರವವಿದೆ ನಿನ್ನ ಬಗ್ಗೆ ನಮ್ಮ ಗಮನದಲ್ಲಿದೆ ಎಂದು ಹೇಳಿದ್ದಾರೆ. ಒಳ್ಳೆಯ ಕೆಲಸವಾಗುತ್ತದೆ. ಬಿ.ಎಸ್.ಯಡಿಯೂರಪ್ಪ ಅವರು ಹಿರಿಯರಿದ್ದಾರೆ, ಅವರ ಬಗ್ಗೆ ಮಾತನಾಡಬೇಡ ಎಂದು ಹೇಳಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೇನೆ. ಹೀಗಾಗಿ ಇನ್ನು ಮುಂದೆ ಯಡಿಯೂರಪ್ಪನವರ ಬಗ್ಗೆ ನನಗೆ ಪ್ರಶ್ನೆ ಮಾಡಬೇಡಿ, ನನಗೆ ಅವರ ಮೇಲೆ ಅಪಾರ ಗೌರವವಿದೆ, ಅವರ ಬಗ್ಗೆ ನಾನೇನು ಹೇಳಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Thu, 26 January 23