ಇವರ ಮನೆ ಹಾಳಾಗ ಎಲ್ಲದಕ್ಕೂ ಜಿಎಸ್ಟಿ ವಿಧಿಸಿದ್ದಾರೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಹಾಸನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುತ್ತಾ ಅವರ ಮನೆ ಹಾಳಾಗ ಎಂದಿದ್ದರು. ಇದೀಗ ಜಿಎಸ್ಟಿ ವಿಚಾರ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಗೂ ಅದೇ ರೀತಿ ಟೀಕೆ ಮಾಡಿದ್ದಾರೆ.

ಚಾಮರಾಜನಗರ: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮನೆ ಹಾಳಾಗ ಎಂದು ಸಿದ್ದರಾಮಯ್ಯ ಅವರು ಈ ಹಿಂದೆ ಹಾಸನದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ (Congress Prajadhwavni Yatra, Bus Yatra) ಟೀಕಿಸಿದ್ದರು. ಇದೀಗ ಚಾಮರಾಜನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೂ ಇದೇ ರೀತಿಯ ಟೀಕೆ ಮಾಡಿದ್ದಾರೆ. “ಇವರ ಮನೆ ಹಾಳಾಗ ಎಲ್ಲದಕ್ಕೂ ಜಿಎಸ್ಟಿ ವಿಧಿಸಿದ್ದಾರೆ. ಎಲ್ಲಾ ವಸ್ತುಗಳ ಮೇಲೆ ಜಿಎಸ್ಟಿ ಹಾಕಿ ಬಡವರ ರಕ್ತ ಹೀರುತ್ತಿದ್ದಾರೆ” ಎಂದು ಮೋದಿ ಹಾಗೂ ಬಿಜೆಪಿ ವಿರುದ್ಧ ಸಿದ್ದರಾಮಯ್ಯ (Siddaramaiah) ಅವರು ವಾಗ್ದಾಳಿ ನಡೆಸಿದರು.
ಜನರು ನೆಮ್ಮದಿಯಿಂದ ಬದುಕುವುದು ಬಿಜೆಪಿಯವರಿಗೆ ಇಷ್ಟವಿಲ್ಲ. ಚೆನ್ನಾಗಿರುವ ಕಡೆಯೆಲ್ಲಾ ಬಿಜೆಪಿಯವರು ಬೆಂಕಿಹಾಕಿ ಬಿಡುತ್ತಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿಲ್ಲ. ಹನೂರಲ್ಲಿ ಒಬ್ಬ ಇದ್ದಾನೆ, ಆತ ಬೆಂಗಳೂರಿನಿಂದ ದುಡ್ಡು ತಂದಿದ್ದಾನೆ. ಅವನು ಒಂದು ಸಲ ಸೋತಿದ್ದಾನೆ, ಈಗ ಮತ್ತೆ ದುಡ್ಡು ತರುತ್ತಿದ್ದಾನೆ. ಅವನೇನಾದ್ರೂ ಗೆದ್ದರೆ ಹೆಚ್.ಡಿ.ಕುಮಾರಸ್ವಾಮಿಗೆ ಬೆಂಬಲ ಕೊಡುತ್ತಾನೆ. ಹನೂರಿನಲ್ಲಿ ನರೇಂದ್ರನನ್ನು ಗೆಲ್ಲಿಸಿದರೆ ನನಗೆ ಬೆಂಬಲ ಕೊಡುತ್ತಾನೆ. ಹನೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಾನು ಮತ್ತು ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಗೆದ್ದಂತೆ ಎಂದರು.S
ಇದನ್ನೂ ಓದಿ: ಸಿದ್ಧರಾಮಯ್ಯ ಹೇಳಿಕೆಗೆ ಆಕ್ರೋಶಭರಿತರಾಗಿ ಭಾವನಾತ್ಮಕರಾದ ಸಿಎಂ ಬೊಮ್ಮಾಯಿ
ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ತಲಾ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ ಬಿಜೆಪಿಯವರು 5 ಕೆಜಿಗೆ ಇಳಿಸಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ ಅವರು, 7 ಕೆಜಿ ಅಕ್ಕಿ ಕೊಟ್ಟಿದ್ದಿದ್ದರೆ ಅವರಪ್ಪನ ಮನೆ ಗಂಟೇನು ಹೋಗುತ್ತಿತ್ತು? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಮಾಡಿದ ಆರೋಪದ ಬಗ್ಗೆ ಯಾರೂ ಉತ್ತರಿಸಲ್ಲ: ಸಿದ್ದರಾಮಯ್ಯ
ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿದ್ದೆ. ಆರೋಪಗಳ ಬಗ್ಗೆ ತನಿಖೆ ಮಾಡಿಸಿ ಎಂದು ಸವಾಲು ಹಾಕಿದ್ದೆ. ಆದರೆ ಈವರೆಗೂ ಬೊಮ್ಮಾಯಿ ಅವರು ಉತ್ತರಿಸಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಸಚಿವ ಕೆ.ಸುಧಾಕರ್ ಮೂಲಕ ಮುಖ್ಯಮಂತ್ರಿ ಹೇಳಿಕೆ ಕೊಡಿಸುತ್ತಿದ್ದಾರೆ. ಕೆ.ಸುಧಾಕರ್ ಸುಳ್ಳಿನ ಸಾಮ್ರಾಟ. ಸುಳ್ಳಿನ ಸಾಮ್ರಾಟನಿಂದ ಬೊಮ್ಮಾಯಿ ಹೇಳಿಕೆ ಕೊಡಿಸುತ್ತಿದ್ದಾರೆ. ಸಚಿವ ಸುಧಾಕರ್ ನಮ್ಮಲ್ಲೇ ಇದ್ದ ಗಿರಾಕಿ ಎಂದರು.
ಆಕ್ಸಿಜನ್ ದುರಂತ ವೇಳೆ ಚಾಮರಾಜನಗರಕ್ಕೆ ಸುಧಾಕರ್ ಬಂದಿದ್ದ. ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತರೂ ಮೂವರು ಸತ್ತಿದ್ದಾರೆ ಎಂದಿದ್ದ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡಲಿಲ್ಲ. ಡಿ.ಕೆ.ಶಿವಕುಮಾರ್ ಮನೆಮನೆಗೆ ಹೋಗಿ ಪರಿಹಾರ ಕೊಟ್ಟು ಬಂದರು. ಸುಪ್ರೀಂಕೋರ್ಟ್ ಆದೇಶಿಸಿದ ನಂತರ ಕೆಲವರಿಗೆ ಪರಿಹಾರ ಕೊಟ್ಟರು ಎಂದರು.
ಬಿಜೆಪಿ ಸುಳ್ಳಿನ ಪಾರ್ಟಿ, ಸುಳ್ಳನ್ನು ತಯಾರು ಮಾಡುವ ಪಾರ್ಟಿ: ಸಿದ್ದರಾಮಯ್ಯ
ಬಿಜೆಪಿ ಸುಳ್ಳಿನ ಪಾರ್ಟಿ, ಸುಳ್ಳನ್ನು ತಯಾರು ಮಾಡುವ ಪಾರ್ಟಿಯಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಪ್ರಧಾನಿ ಮೋದಿ ಬಗ್ಗೆ ನನಗೆ ಗೌರವವಿದೆ, ಆದರೆ ಅವರು ಸುಳ್ಳು ಹೇಳಿದರು. ಎಲ್ಲರ ಬ್ಯಾಂಕ್ ಖಾತೆಗೂ 15 ಲಕ್ಷ ಕೊಡುತ್ತೇನೆ ಅಂತ ಹೇಳಿದ್ದರು. ಉದ್ಯೋಗ ಕೊಡಿ ಅಂದರೆ ಪಕೋಡ ಮಾರಿ ಎಂದು ಹೇಳಿದರು. ರೈತರ ಆದಾಯ ದ್ವಿಗುಣ ಮಾಡುತ್ತೇನೆ ಅಂದರು, ಆದರೆ ಗೊಬ್ಬರದ ಬೆಲೆ ಮೂರು ಪಟ್ಟು ಹೆಚ್ಚಾಯ್ತು. ಅಚ್ಚೇ ದಿನ್ ಬರುತ್ತೆ ಅಂದರು, ಎಲ್ಲಿದೆ? ಅಚ್ಚೆ ದಿನ್ ಪುಡಾರಿಗಳು ಮತ್ತು ಮಂತ್ರಿಗಳಿಗೆ ಬಂತು, ಬಡವರಿಗೆ ಬರಲಿಲ್ಲ. ಮೋದಿಯವರನ್ನು ವಾರಕ್ಕೊಂದು ದಿನ ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಚಾಮರಾಜನಗರಕ್ಕೂ ಬಂದರೂ ಬರಬಹುದು. ಈ ವೇಳೆ ಅಚ್ಚೆ ದಿನ್ ಎಲ್ಲಿ ಅಂತ ಕೇಳಿ ಎಂದರು.
ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್; ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರಬಲ ಟಿಕೆಟ್ ಆಕಾಂಕ್ಷಿ ಸ್ವರೂಪ್ ಏನ್ ಹೇಳಿದ್ರು ನೋಡಿ
ಸಿದ್ದರಾಮಯ್ಯ ಅಚ್ಚೇ ದಿನ್ ಪ್ರಶ್ನೆಗೆ ಸಿ.ಟಿ.ರವಿ ತಿರುಗೇಟು
ಅಚ್ಛೇ ದಿನ ಎಲ್ಲಿ ಎಂದು ಮೋದಿರನ್ನು ಕೇಳಿ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯಗೆ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಭಾರತವಿದೆ, ಇದು ಅಚ್ಛೆ ದಿನ್ ಅಲ್ವಾ? ಬಡವರ ಮನೆಗೆ ಶೌಚಾಲಯ ನಿರ್ಮಾಣ ಮಾಡಿದ್ದು ಅಚ್ಛೆ ದಿನ್ ಅಲ್ವಾ? ಬಡವರ ಕಷ್ಟ ನಿಮಗೆ ಹೇಗೆ ಗೊತ್ತಾಗಬೇಕು ಎಂದರು.
ನಾವು ನೀವು ಬದುಕಿದ್ದೇವೆ ಅಂದರೆ ಅದಕ್ಕೆ ಮೋದಿ ಕಾರಣ. ರಾಹುಲ್ ಗಾಂಧಿ ಅಮೆರಿಕದ ಫೈಸಲ್ ಇಂಜೆಕ್ಷನ್ ಬಗ್ಗೆ ಪ್ರಚಾರ ಮಾಡಿದರು, ಫೈಸಲ್ ಇಂಜೆಕ್ಷನ್ ತೆಗೆದುಕೊಂಡವರು ನಗೆದು ಬಿದ್ದರು. ಮೂರು ಕೊರೋನಾ ಲಸಿಕೆಗಳನ್ನು ದೇಶದಲ್ಲಿ ಕಂಡುಹಿಡಿಯಲು ನೆರವಾಗಿದ್ದು ಮೋದಿ. 216 ಕೋಟಿ ಜನರಿಗೆ 138 ಕೋಟಿ ಡೋಸೇಜ್ ಉಚಿತವಾಗಿ ನೀಡಿದ್ದು ಮೋದಿ, ಅವರನ್ನು ಹೊಗಳಲಲು ನಾವಿದ್ದೇವೆ ಎಂದರೆ ಅದಕ್ಕೆ ಮೋದಿ ಕಾರಣ, ಬೈಯೋಕೆ ನೀವಿದ್ದೀರಿ ಎಂದಾದರೆ ಅದಕ್ಕೆ ಮೋದಿನೇ ಕಾರಣ. ನಿಮಗೆ ಉಪಕಾರ ಅನ್ನುವುದು ನೆನಪಿಲ್ಲ, ನಿಮ್ಮಂತವರು ಮೋದಿಯನ್ನು ಬೈಯುತ್ತಾರೆ. ಉಪಕಾರ ನೆನಪಿದ್ದವರು ಮೋದಿಯನ್ನ ಹೊಗಳುತ್ತಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Thu, 26 January 23




