
ಗದಗ: ರಸ್ತೆ ಸರಿಯಿಲ್ಲದ ಹಿನ್ನಲೆ ಹೀಗಾಗಿ ನಾವು ತಡವಾಗಿ ಬಂದಿದ್ದೇವೆ ಕ್ಷಮಿಸಬೇಕು. ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲೇ ರಸ್ತೆ ಸರಿಯಿಲ್ಲ. 40 ಕಿಲೋ ಮೀಟರ್ ದೂರ ಪ್ರಯಾಣಿಸಲು 2 ಗಂಟೆ ಬೇಕಾಯಿತು. ಇನ್ನು ರಾಜ್ಯದ ರಸ್ತೆಗಳು ಯಾವ ರೀತಿ ಇರಬಹುದು ನೀವೇ ಊಹಿಸಿ ಎಂದು ಹೇಳುವ ಮೂಲಕ ಸಿ.ಸಿ.ಪಾಟೀಲ್ (CC Patil) ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟೀಕಿಸಿದರು. ಪಾಟೀಲ್ ಕ್ಷೇತ್ರವಾಗಿರುವ ನರಗುಂದದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ (Praja Dhwani Yatra) ಮಾತನಾಡಿದ ಅವರು, ನಿಮ್ಮ ಕ್ಷೇತ್ರದ ರಸ್ತೆ ಸರಿಮಾಡಿಕೊಳ್ಳಿ ಎಂದು ಸಿ.ಸಿ.ಪಾಟೀಲ್ಗೆ ಹೇಳಿದ್ದೆ. ಆದರೆ ಸಚಿವರು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಚುನಾವಣೆ ಬಂದಿರುವುದರಿಂದ ಈಗ ರಸ್ತೆ ಕಾಮಗಾರಿ ಆರಂಭ ಮಾಡಿದ್ದಾರೆ. ಸಿ.ಸಿ.ಪಾಟೀಲ್ ತಮ್ಮ ಕಾರ್ಯಕರ್ತರಿಗೆ ಕಾಮಗಾರಿ ಗುತ್ತಿಗೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು, ಎಂದಿನಂತೆ 40% ಕಮಿಷನ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕಳೆದ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರವೆಂದು ಆರೋಪಿಸಿದ್ದರು. ಆದರೆ, ಈಗ ರಾಜ್ಯದಲ್ಲಿರುವುದು 40 ಪರ್ಸೆಂಟ್ ಕಮಿಷನ್ ಸರ್ಕಾರ. ರಾಜ್ಯದಲ್ಲಿರುವುದು ಆಲಿಬಾಬಾ ಮತ್ತು 40 ಕಳ್ಳರ ಸರ್ಕಾರ. ಅದರಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಕೂಡ ಒಬ್ಬರು ಎಂದರು.
2018ರ ಚುನಾವಣೆ ವೇಳೆ ಅಪಪ್ರಚಾರ ಮಾಡಿ ನಮ್ಮನ್ನ ಸೋಲಿಸಿದ್ದರು. ಆದರೆ ಈ ಬಾರಿ ಈ ಬಾರಿ ಅಪಪ್ರಚಾರಕ್ಕೆ ಒಳಗಾಗಬೇಡಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ 8 ಗಂಟೆ ತ್ರೀಫೇಸ್ ವಿದ್ಯುತ್ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಇದನ್ನೂ ಓದಿ: Gadag: ಹಣೆಗೆ ಇಟ್ಟಿದ್ದ ತಿಲಕ ಅಳಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ರೋಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಜಿ.ಎಸ್.ಪಾಟೀಲ್ಗೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜಿ.ಎಸ್.ಪಾಟೀಲ್ ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ. 50,000 ಮತಗಳ ಅಂತರದಲ್ಲಿ ಜಿ.ಎಸ್.ಪಾಟೀಲ್ ಗೆಲ್ಲಿಸುವಂತೆ ಮನವಿ ಮಾಡಿದರು. ಅಲ್ಲದೆ, ಕ್ಷೇತ್ರದಲ್ಲಿ ಕುರುಬ ಸಮುದಾಯದ ವೋಟ್ ಒಡೆಯಲು ಯತ್ನ ಆಗುತ್ತಿದೆ. ಅದಕ್ಕೆ ಅವಕಾಶ ನೀಡದೆ ಜಿ.ಎಸ್.ಪಾಟೀಲ್ ಅವರನ್ನು ಗೆಲ್ಲಿಸಬೇಕು. ಯಾರೋ ದೊಡ್ಡಯ್ಯ ಪಡ್ಡಯ್ಯಗೆ ಮತ ಹಾಕಬೇಡಿ. ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳನ್ನ ಗೆಲ್ಲಿಸಿಕೊಡಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Tue, 28 February 23