ಬಿಜೆಪಿ ಶಾಸಕರಿಗೆ ಫೋನ್ ಕಾಲ್ ಮಾಡುತ್ತಿರುವ ಡಿಕೆ ಶಿವಕುಮಾರ್: ಹೊಸ ಬಾಂಬ್ ಸಿಡಿಸಿದ ಸಿಎಂ ಬೊಮ್ಮಾಯಿ
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಕೂಡ ಆರಂಭಗೊಂಡಿದ್ದು, ಇದರ ಜೊತೆಗೆ ವಿರೋಧ ಪಕ್ಷಗಳ ನಾಯಕರಿಗೆ ಫೋನ್ ಕಾಲ್ ಮಾಡಿ ತಮ್ಮ ಪಕ್ಷಕ್ಕೆ ಕರೆಸುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಕೂಡ ಆರಂಭಗೊಂಡಿದ್ದು, ಇದರ ಜೊತೆಗೆ ವಿರೋಧ ಪಕ್ಷಗಳ ನಾಯಕರಿಗೆ ಫೋನ್ ಕಾಲ್ ಮಾಡಿ ತಮ್ಮ ಪಕ್ಷಕ್ಕೆ ಕರೆಸುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿಗಳಿಲ್ಲದ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರು ನಮ್ಮ ಶಾಸಕರಿಗೆ ಫೋನ್ ಕಾಲ್ ಮಾಡಿ ತಮ್ಮ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಟಿಕೆಟ್ ನೀಡುತ್ತೇವೆ ಅಂತಾ 2-3 ದಿನಗಳಿಂದ ಕರೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಅವರಿಗೆ ಸರಿಯಾದ ಕ್ಯಾಂಡಿಡೇಟ್ ಇಲ್ಲದಿರುವುದರಿಂದ ಹತಾಶರಾಗಿದ್ದಾರೆ, ಕಾಂಗ್ರೆಸ್ ಪಕ್ಷದ ವಸ್ತು ಸ್ಥಿತಿ ದಿವಾಳಿಯಾಗಿದೆ ಎಂದರು.
ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಇನ್ನು, ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗಲಿದೆ. ಈಗಾಗಲೇ ಚುನಾವಣೆಗೆ ಇಳಿಯುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಜೆಡಿಎಸ್, ಆಮ್ ಆದ್ಮಿ ಸೇರಿದಂತೆ ವಿವಿಧ ಪಕ್ಷಗಳೂ ಬಿಡುಗಡೆ ಮಾಡಿವೆ. ಆದರೆ ಬಿಜೆಪಿ ಮಾತ್ರ ಇದುವರೆಗೆ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗಬಹುದು ಎಂದಿದ್ದಾರೆ. ಅಲ್ಲದೆ, ಈ ಬಾರಿ ಬಿಜೆಪಿಗೆ ಪ್ರಬಲ ಪೈಪೋಟಿ ಇದೆ ಎಂಬ ಪ್ರಶ್ನೆಗೆ ಉತ್ತಿರಿಸಿದ ಅವರು, ಗೆಲ್ಲವಂತಹ ಪಕ್ಷಕ್ಕೆ ಎಲ್ಲಾ ಕಡೆ ಫೈಟ್ ಇದ್ದೇ ಇರುತ್ತೆ ಎಂದರು.
ರಾಜ್ಯ ಬಿಜೆಪಿಯಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮೂಡಿಸಿದೆ. ಪಕ್ಷದ ಯುವ ನಾಯಕರು ಉತ್ಸಾಹದಲ್ಲಿದ್ದು, ಹಿರಿಯರಿಗೆ ತಲೆಬಿಸಿ ಆರಂಭವಾಗಿದೆ. ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಹಾಗೂ ಕೋರ್ ಕಮಿಟಿ ಸಭೆ ನಡೆದಿದೆ. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದ್ದು, ಮಾರ್ಚ್ 31 ರಂದು ಕೋರ್ ಕಮಿಟಿ ಸದಸ್ಯರೊಂದಿಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮತ್ತಿತರರು ಪಾಲ್ಗೊಂಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Tue, 28 March 23