ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ (ಮುಖ್ಯಮಂತ್ರಿಗಳ ಸಚಿವಾಲಯ) ನಿಯೋಜನೆ, ಒಪ್ಪಂದ ಹಾಗೂ ಗುತ್ತಿಗೆ ಆಧಾರದ ಮೆಲೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಕಾರ್ಯಮುಕ್ತಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಂತೇಶ್ ಆದೇಶ ಹೊರಡಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಸೇರಿದಂತೆ ಒಟ್ಟು 19 ಅಧಿಕಾರಿಗಳನ್ನು ಕರ್ತವ್ಯಮುಕ್ತಗೊಳಿಸಲಾಗಿದೆ. ನಿಯೋಜನೆ / ಒಪ್ಪಂದದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಮಾತೃ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಎ.ಲೋಕೇಶ್, ಎಚ್.ಎಸ್.ಸತೀಶ್, ಟಿ.ಎಂ.ಸುರೇಶ್, ಅರುಣ್ ಕುಮಾರ್ ಹಡಗಲಿ, ಅರುಣ್ ಪುರ್ಟಾಡೋ, ಕೆ.ಎಸ್.ಕಿರಣ್ಕುಮಾರ್, ಕೆ.ರಾಜಪ್ಪ, ಆರ್.ಕೆ.ಮಹೇಶ್, ಎಸ್.ನಾಗರಾಜಯ್ಯ, ಎಸ್.ರಮೇಶ್, ಎಸ್.ಶಾಂತಾರಾಮ್, ಗಣೇಶ್ ಯಾಜಿ, ಎಸ್.ಎ.ಅಂಗಡಿ, ಎ.ಆರ್.ರವಿ, ಕೆ.ಗಂಗಯ್ಯ, ಜಿ.ಎಸ್.ಸುನಿಲ್. ಪ್ರೊ.ಕೆ.ಜಿ.ಲೋಕೇಶ್, ಡಾ.ಆರ್.ಎಂ.ರಂಗನಾಥ್ ಅವರನ್ನು ಕಾರ್ಯಮುಕ್ತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದಿಢೀರ್ ದೆಹಲಿಗೆ ಮುಖ್ಯಮಂತ್ರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ದಿಢೀರ್ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್‌ನಿಂದ ಬುಲಾವ್ ಹಿನ್ನೆಲೆಯಲ್ಲಿ ಸಿಎಂ ಇಂದು (ಆಗಸ್ಟ್ 1) ಸಂಜೆ 5.40ರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಕರ್ನಾಟಕ ಸಚಿವ ಸಂಪುಟ ಅಂತಿಮಗೊಳಿಸುತ್ತೇವೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ನೂತನ ಸಚಿವರ ಪಟ್ಟಿ ಕೈಯಲ್ಲಿ ಹಿಡಿದೇ ತೆರಳಿದ್ದಾರೆ. ವರಿಷ್ಠರಿಂದ ಒಪ್ಪಿಗೆ ಪಡೆದು ನಾಳೆಯೇ ಸಿಎಂ ವಾಪಸ್ ಆಗಲಿದ್ದಾರೆ. ಮಂಗಳವಾರ ಅಥವಾ ಬುಧವಾರ ಸಂಪುಟ ರಚನೆ ಸಾಧ್ಯತೆ ಎಂಬ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಒಂದೆಡೆ, ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಬಸವರಾಜ ಬೊಮ್ಮಾಯಿ ಸಿದ್ಧಪಡಿಸಿದ್ದಾರೆ. ಮತ್ತೊಂದೆಡೆ, ಪಕ್ಷದ ವತಿಯಿಂದ ಸಚಿವ ಸ್ಥಾನಕ್ಕೆ ಅರ್ಹ ಶಾಸಕರ ಪಟ್ಟಿ ಸಿದ್ಧವಾಗಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಿದೆ.
(Karnataka govt removes bs Yediyurappa team from chief ministers office)
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ಬೆಂಬಲ ನೀಡುತ್ತೇವೆ: ಮಾಜಿ ಪ್ರಧಾನಿ ದೇವೇಗೌಡ ಅಭಯ
ಇದನ್ನೂ ಓದಿ: ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರಿಂದ ನೂತನ ಸಿಎಂಗೆ ಸನ್ಮಾನ