ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ: ಸಿಟಿ ರವಿ ವ್ಯಂಗ್ಯ

ಪಂಚರಾಜ್ಯಗಳ ಚುನಾವಣೆಗೆ ಇಲ್ಲಿನ ಸರ್ಕಾರವನ್ನ ಎಟಿಎಂ ಮಾಡಿಕೊಂಡಿದ್ದಾರೆ. ಅಂಬಿಕಾಪತಿ, ಬಿಲ್ಡರ್ ಸಂತೋಷ್ ಕೃಷ್ಣಪ್ಪ ಅವರ ಮನೆಯಲ್ಲಿ ಸಿಕ್ಕ ಹಣವೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಸಿಟಿ ರವಿ ಹೇಳಿದ್ದಾರೆ. ಅಲ್ಲದೆ, ಕೆಪಿಸಿಸಿಯನ್ನು ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ: ಸಿಟಿ ರವಿ ವ್ಯಂಗ್ಯ
ಸಿ.ಟಿ. ರವಿ
Follow us
| Updated By: Rakesh Nayak Manchi

Updated on:Oct 15, 2023 | 12:38 PM

ಬೆಂಗಳೂರು, ಅ.15: ಪಂಚರಾಜ್ಯಗಳ ಚುನಾವಣೆಗೆ ಇಲ್ಲಿನ ಸರ್ಕಾರವನ್ನ ಎಟಿಎಂ ಮಾಡಿಕೊಂಡಿದ್ದಾರೆ. ಅಂಬಿಕಾಪತಿ, ಬಿಲ್ಡರ್ ಸಂತೋಷ್ ಕೃಷ್ಣಪ್ಪ ಅವರ ಮನೆಯಲ್ಲಿ ಸಿಕ್ಕ ಹಣವೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಸಿಟಿ ರವಿ (C.T.Ravi) ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ಭ್ರಷ್ಟಾಚಾರ ಮುಕ್ತವಾದ ಸರ್ಕಾರ ಅಂತಾರೆ. ಆದರೆ ಅವರ ಮೂಗಿನ ಕೆಳಗೆ ಈ ರೀತಿ ಘಟನೆ ನಡೆದಿದೆ. ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ ಅಂತ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಎಎಲ್​ಸಿ ಛಲವಾದಿ ನಾರಾಯಣಸ್ವಾಮಿ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಟಿ ರವಿ, ಪತ್ತೆಯಾದ ಹಣದ ಬಗ್ಗೆ ಸಿಬಿಐ ತನಿಖೆ ಆಗಲೇಬೇಕು. 98 ಜನ ಬೇನಾಮಿಯ ಹೆಸರು ಹೊರ ಬರಬೇಕು. ಎಂಪಿ‌ ಚುನಾವಣೆಗೆ 2 ಸಾವಿರ ಕೋಟಿ ಕೊಡುತ್ತೇನೆ ಅನ್ನೋದು ಚರ್ಚೆ ಆಗುತ್ತಿದೆ. ಬ್ರಾಂಡ್ ಬೆಂಗಳೂರು ಅಂದ್ರೆ ಭ್ರಷ್ಟ ಬೆಂಗಳೂರನ್ನ ಮಾಡಿಕೊಳ್ಳಲು ಹೋಗುತ್ತಿದ್ದಾರೆ ಎಂದರು.

ಬಿಲ್ಡಿಂಗ್ ಪ್ಲಾನ್​ಗೆ ಒಂದು‌ ಅಡಿ 100 ರೂ. ಕೊಡಬೇಕು. ಎಲ್​ಎನ್​ಟಿ ಅವರಿಗೆ ನೀರನ್ನೇ ಬಂದ್ ಮಾಡಿದ್ದಾರೆ. ತಮ್ಮ ಪ್ರಾಮಾಣಿಕತೆಯನ್ನ ಸಾಬೀತಪಡಿಸಿಕೊಳ್ಳಬೇಕು ಅಂದರೆ ಐಟಿ ದಾಳಿ ವೇಳೆ ಸಿಕ್ಕ ಹಣದ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದರು.

ಇದನ್ನೂ ಓದಿ: ಕಲಾವಿದರ ಬಳಿ ಕಮಿಷನ್ ಕೇಳಿದವರು ಲಕ್ವಾ ಹೊಡೆದು ಸಾಯುತ್ತಾರೆ: ಕೆಎಸ್ ಈಶ್ವರಪ್ಪ

ಗುತ್ತಿಗೆದಾರರ ಮನೆ ಮೇಲೆ ದಾಳಿ ಮಾಡಿದರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಜಕೀಯ ಅಂತಾರೆ. ಐಟಿ ದಾಳಿ ಬಗ್ಗೆ ಪ್ರಿಯಾಂಗ್ ಖರ್ಗೆ ಕೂಡ ಪ್ರಶ್ನೆ ಮಾಡುತ್ತಾರೆ. ಹಾಗಾದರೆ 40, 42 ಕೋಟಿ ರೂಪಾಯಿ ಒಬ್ಬೊಬ್ಬರ ಮನೆಯಲ್ಲೂ ಸಿಕ್ಕಿದೆ ಅಲ್ವ, ಇದಕ್ಕೆ ಏನ್ ಹೇಳುತ್ತೀರಿ? ಈ ಹಣಕ್ಕೂ ನಿಮಗೂ ಸಂಬಂಧ ಇಲ್ಲವೆಂದರೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಸವಾಲು ಹಾಕಿದರು.

ನಾಡಿಗೆ ಕಳಂಕ ತರುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಸಮಾಜಕ್ಕೆ ಯಾವುದು ದುಷ್ಟವಾಗಿ ಕಾಡ್ತಿದೆಯೋ ಅದು ದಮನವಾಗಲಿ. ಮೈಸೂರು ದಸರಾ ಕಾರ್ಯಕ್ರಮ ಆಯೋಜನೆಗೆ 5 ಲಕ್ಷ ಲಂಚ ಕೇಳುತ್ತಾರೆ. ರಾಜೀವ್ ತಾರನಾಥ್ ಕಾರ್ಯಕ್ರಮ ಆಯೋಜನೆಗೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿದೆ. ನಾಡಹಬ್ಬಕ್ಕೆ ಇದಕ್ಕಿಂತ ಕಳಂಕ ಮತ್ತೊಂದು ಇಲ್ಲ ಎಂದರು.

ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ

ಗುತ್ತಿಗೆದಾರರು, ಯೋಜನೆಗೆ ಮಾತ್ರ ಕಮಿಷನ್​ ದಂಧೆ ಸೀಮಿತವಾಗಿಲ್ಲ. ಕಲಾವಿದರ ಗೌರವಧನದವರೆಗೆ ಈ ದಂಧೆ ಮುಂದುವರೆದಿದೆ ಎಂದು ಹೇಳಿದ ಸಿಟಿ ರವಿ, ದಸರಾದಲ್ಲೂ ವಸೂಲಿಗೆ ಮುಂದಾಗಿರುವುದು ನಾಚಿಕೆಗೇಡಿನ‌ ಕೆಲಸ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಮುಕ್ತವಾದ ಸರ್ಕಾರ ಅಂತಾರೆ. ಸಿಎಂ ಸಿದ್ದರಾಮಯ್ಯ ಮೂಗಿನ ಕೆಳಗೆ ಈ ರೀತಿ ಘಟನೆ ನಡೆದಿದೆ. ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ. ಕಾಂಗ್ರೆಸ್ಸಿಗರು ಬೇನಾಮಿಗಳನ್ನು ರಾಜ್ಯಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಅಕ್ರಮ ಚಟುವಟಿಕೆ ನಡೆಸಲು ಬೇನಾಮಿಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಸಿಟಿ ರವಿ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಸಿಟಿ ರವಿ, ಶಕ್ತಿ ಯೋಜನೆ ಅಂತೆ, ಹಲವು ಕಡೆ ಬಸ್ ಮಾರ್ಗವೇ ಕ್ಯಾನ್ಸಲ್ ಆಗಿದೆ. ರೈತರಿಗೆ 2 ಗಂಟೆ ವಿದ್ಯುತ್ ಕೊಡಲು ಇವರಿಗೆ ಆಗುತ್ತಿಲ್ಲ. ಐದು ಗಂಟೆ ವಿದ್ಯುತ್ ಕೊಡುತ್ತೇನೆ ಅಂತ ಗೇಳಿ ಇನ್ನೂ ಕೊಟ್ಟಿಲ್ಲ. ಗೃಹಲಕ್ಷ್ಮಿ ಯೋಜನೆ ಅಂತೆ ಒಂದು ತಿಂಗಳು ಬಂತು, ಆಮೇಲೆ ಬರಲೇ ಇಲ್ಲ. ಯುವನಿಧಿ ಜಾರಿಯೇ ಆಗಿಲ್ಲ. ಇಷ್ಟೆಲ್ಲ ಇದ್ದರೂ ನುಡಿದಂತೆ ನಡೆದಿದ್ದೇನೆ ಅಂತಾರೆ. ಕಾಂಗ್ರೆಸ್ ಹೈಕಮಾಂಡ್​ಗೆ ಪ್ರತಿ ತಿಂಗಳು‌ ನಮ್ಮ ಕಪ್ಪಾವನ್ನ ಸಲ್ಲಿಸುತ್ತೇವೆ ಅನ್ನೋದರಲ್ಲಿ ಮಾತ್ರ ನುಡಿದಂತೆ ನಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗ: ಬಸವರಾಜ ಬೊಮ್ಮಾಯಿ

ಅ.21ಕ್ಕೆ ದೆಹಲಿಯಲ್ಲಿ ದೇವೇಗೌಡ ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಸೀಟು‌ ಹಂಚಿಕೆ ಮಾತುಕತೆ ನಡೆಯಲಿದೆ ಎಂಬ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸೀಟು ಹಂಚಿಕೆ ಮಾತುಕತೆ ಯಾವತ್ತಾದರೂ ಒಂದು ದಿನ ಆಗಲೇಬೇಕಾದ ವಿಚಾರ. ಪಂಚರಾಜ್ಯಗಳ ಚುನಾವಣೆಯಲ್ಲಿ ವರಿಷ್ಠರು ವ್ಯಸ್ತರಾಗಿದ್ದಾರೆ. ಪಂಚರಾಜ್ಯಗಳ ಚುನಾವಣೆಗೂ ಮುನ್ನ ಲೋಕಸಭೆ ಬಗ್ಗೆ ಚರ್ಚೆ ಆಗಲ್ಲ ಅನಿಸುತ್ತದೆ. ಈಗೇನೂ ಆತರ ಚರ್ಚೆ ಆಗುವ ಸಾಧ್ಯತೆ ಕಡಿಮೆ ಎಂದರು.

ರೇಣುಕಾಚಾರ್ಯ ಹೇಳಿಕೆಗೆ ಸಿಟಿ ರವಿ ತಿರುಗೇಟು

ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇಲ್ಲ ಎಂಬ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ, ರೇಣುಕಾಚಾರ್ಯ ಅಂಥೋರು ಇದ್ದ ಮೇಲೂ ಸಮರ್ಥ ನಾಯಕರಿಲ್ಲ ಅಂತ ಹೇಳಿ ಅವರನ್ನೇ ಅವರು ದುರ್ಬಲ ಅಂತ ಯಾಕೆ ಭಾವಿಸಿದ್ದಾರೆ? ರೇಣುಕಾಚಾರ್ಯ ಲೋಕಸಭೆ ಟಿಕೆಟ್ ಕೇಳುತ್ತಿದ್ದಾರೆ, ರಾಜ್ಯಾಧ್ಯಕ್ಷ ಸ್ಥಾನಕ್ಕೂ ಆಕಾಂಕ್ಷಿ ಇದ್ದಾರೆ. ಅವರನ್ನೇ ಅವರು ದುರ್ಬಲ ಅಂತ ಅಂದುಕೊಂಡರೆ ಅವರ ಮುಖದ ಮೇಲೆಯೇ ಅವರು ಉಗಿದುಕೊಂಡ ಹಾಗೆ. ಅವರನ್ನೆ ಅವರು ಸಣ್ಣವರು ಅಂತ ಭಾವಿಸಿದ ಹಾಗೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Sun, 15 October 23