ಬೆಳಗಾವಿ, ಅಕ್ಟೋಬರ್ 17: ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ (Congress Government) ಪದೇ ಪದೇ ಶಾಸಕರು, ಸಚಿವರಿಂದ ಒಂದಲ್ಲ ಒಂದು ರೀತಿಯಲ್ಲಿ ಭಿನ್ನಮತದ ಬಿಸಿ ತಟ್ಟುತ್ತಲೇ ಇದೆ. ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಸಮಾಧಾನ ತಣಿಸಿದ ಸಮಾಧಾನದಲ್ಲಿ ಅತ್ತ ಕಾಂಗ್ರೆಸ್ ಹೈಕಮಾಂಡ್ ಇದ್ದರೆ, ಇತ್ತ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಧ್ಯೆ ಇದೀಗ ಫೈಟ್ ಶುರುವಾಗಿದೆ. ಈ ಹಿಂದೆ ರಮೇಶ್ ಜಾರಕಿಹೊಳಿ ಜತೆ ಜಟಾಪಟಿ ಮಾಡಿಕೊಂಡಿದ್ದ ಹೆಬ್ಬಾಳ್ಕರ್ ಇದೀಗ ಸ್ವಪಕ್ಷದ ಸತೀಶ್ ಜಾರಕಿಹೊಳಿ ಜತೆಗೇ ಮುಸುಕಿನ ಗುದ್ದಾಟ ಆರಂಭಿಸಿದ್ದಾರೆ.
ಬೆಳಗಾವಿಯಲ್ಲಿ ಸಚಿವರ ಮುಸುಕಿನ ಗುದ್ದಾಟ ಜೋರಾಗಿದೆ. ಅಧಿಕಾರಿಗಳ ವರ್ಗಾವಣೆ ಜಟಾಪಟಿ ಬೆನ್ನಲ್ಲೇ ಇದೀಗ ಬೂಡಾ, ಕಾಡಾ ಅಧ್ಯಕ್ಷರ ನೇಮಕಾತಿಯಲ್ಲೂ ಫೈಟ್ ಶುರುವಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಜಟಾಪಟಿ ನಡೆಯುತ್ತಿದೆ. ಈ ಬೆಳವಣಿಗೆಗಳ ಮಧ್ಯೆಯೇ ಬುಧವಾರ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಶೀತಲ ಸಮರ ನಡೀತಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿ, ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟ ಪ್ರದೇಶ ಅಭಿವೃದ್ಧಿ ಅಧ್ಯಕ್ಷರ ಸ್ಥಾನಕ್ಕೆ ಆಪ್ತರನ್ನ ನೇಮಕ ಮಾಡಲು ಪೈಪೋಟಿಗೆ ಇಳಿದಿದ್ದಾರೆ. ಆಪ್ತರನ್ನ ಬುಡಾ ಅಧ್ಯಕ್ಷ ಸ್ಥಾನಕ್ಕೆ ತರಲು ಹೆಬ್ಬಾಳ್ಕರ್ ಪ್ಲ್ಯಾನ್ ಮಾಡಿದ್ದು, ಸತೀಶ್ ಜಾರಕಿಹೊಳಿ ಕೂಡ ಆಪ್ತನನ್ನ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ತಂತ್ರ ರೂಪಿಸಿದ್ದಾರೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?
ಸರ್ಕಾರ ಬಂದು 4 ತಿಂಗಳಾದ್ರೂ ಅಧ್ಯಕ್ಷರ ನೇಮಕ ಆಗ್ತಿಲ್ಲ. ಇಬ್ಬರು ಸಚಿವರ ಪ್ರತಿಷ್ಠೆಯಿಂದ ಸರ್ಕಾರಕ್ಕೂ ತಲೆ ಬಿಸಿಯಾಗಿದೆ. ಆಪ್ತರನ್ನೇ ಅಧ್ಯಕ್ಷರನ್ನಾಗಿ ಮಾಡಲು ಇಬ್ಬರು ಸಚಿವರು ಜಿದ್ದಿಗೆ ಬಿದ್ದಿದ್ದು, ಈ ಕಾರಣಕ್ಕೆ ಅಧ್ಯಕ್ಷರ ನೇಮಕಾತಿಯನ್ನು ಸರ್ಕಾರ ಮುಂದೂಡ್ತಿದೆ ಅಂತ ಹೇಳಲಾಗಿದೆ. ಹಿಂದೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆಯ್ಕೆ ವಿಚಾರದಲ್ಲೂ ಕಿತ್ತಾಟ ನಡೆದಿತ್ತು. ಇಬ್ಬರ ಜಗಳದಲ್ಲಿ ರಮೇಶ್ ಜಾರಕಿಹೊಳಿ ಮಧ್ಯೆ ಬಂದಿದ್ರು. ಅದೇ ಪಿಎಲ್ಡಿ ಸಮರ ಸಮ್ಮಿಶ್ರ ಸರ್ಕಾರ ಪತನಕ್ಕೂ ಪರೋಕ್ಷವಾಗಿ ಕಾರಣವಾಗಿತ್ತು. ಈ ಹಿಂದೆ ಸತೀಶ್ ವರ್ಗಾವಣೆ ಮಾಡಿಸಿದ್ದ ಅಧಿಕಾರಿಯನ್ನೇ ಸಚಿವೆ ಮತ್ತೆ ನೇಮಿಸಿದ್ರು. ಈ ವಿಚಾರವಾಗಿ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ