ಬೆಂಗಳೂರು: ವಿಧಾನಪರಿಷತ್ನ ಮೂರು ಸ್ಥಾನಗಳಿಗೆ ಉಪ ಚುನಾವಣೆ (MLC By Election) ಘೋಷಣೆಯಾಗಿದೆ. ಜೂನ್ 30ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಮಂಗಳವಾರ ತಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 20 ಕೊನೆಯ ದಿನವಾಗಿದೆ. ವಿಧಾನಸಭೆಯಿಂದ ಪರಿಷತ್ಗೆ ನಡೆಯಲಿರುವ ಉಪ ಚುನಾವಣೆ ಇದಾಗಿದ್ದು, ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ರಾಜೀನಾಮೆಯಿಂದ 3 ಸ್ಥಾನಗಳು ತೆರವಾಗಿದ್ದವು.
ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ವಿಧಾನಸಭೆ ಚುನಾವಣೆಗೂ ಮುನ್ನ ಪರಿಷತ್ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಜೂನ್ 13 ರಂದು ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 20 ಕೊನೆಯ ದಿನವಾಗಿದೆ. ಜೂನ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಆಯೋಗ ತಿಳಿಸಿದೆ.
ಜೂನ್ 30 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶಾಸಕರು ಮತದಾನ ಮಾಡಲಿದ್ದಾರೆ. ಆ ನಂತರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
ಬಾಬುರಾವ್ ಚಿ೦ಚನಸೂರು ಅವರ ಪರಿಷತ್ ಸದಸ್ಯತ್ವ ಅವಧಿ 2024ರ ಜೂನ್ 17ಕ್ಕೆ, ಆರ್ ಶ೦ಕರ್ ಅವರ ಅವಧಿ 2026 ರ ಜೂನ್ 30ಕ್ಕೆ ಹಾಗೂ ಲಕ್ಷ್ಮಣ ಸವದಿ ಸದಸ್ಯತ್ವ ಅವಧಿ 2028ರ ಜೂನ್ 14ಕ್ಕೆ ಕೊನೆಗೊಳ್ಳುವುದರಲ್ಲಿತ್ತು. ಆದರೆ ಕಾಂಗ್ರೆಸ್ನಿ೦ದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಇವರು ಎ೦ಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 pm, Tue, 6 June 23