ಬೆಂಗಳೂರು, ಮೇ 15: ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಇದೀಗ ಜೆಡಿಎಸ್ (JDS), ಬಿಜೆಪಿ (BJP) ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದರೆ, ಇತ್ತ ತೆನೆ ನಾಯಕರು ನಮ್ಮ ಅಭ್ಯರ್ಥಿಯೇ ಕಣಕ್ಕಿಳಿಯುತ್ತಾರೆ ಎನ್ನುತ್ತಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ, ಜೆಡಿಎಸ್ ನಡುವೆ ಏರ್ಪಟ್ಟಿದ್ದ ಕಗ್ಗಂಟು ಇದೀಗ ಶಿಕ್ಷಕರ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲೂ ಮುಂದುವರಿದಿದೆ. ರಾಜ್ಯದಲ್ಲಿ ಜೂನ್ 3 ರಂದು ನಡೆಯಲಿರುವ ದಕ್ಷಿಣ, ವಾಯುವ್ಯ, ಈಶಾನ್ಯ ಸೇರಿದಂತೆ 6 ಕ್ಷೇತ್ರಗಳ ಪದವೀಧರ, ಶಿಕ್ಷಕರ ಕ್ಷೇತ್ರಗಳ ಪೈಕಿ ಈಗಾಗಲೇ ಬಿಜೆಪಿ 5 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿ ಘೋಷಣೆ ಮಾಡಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಈ.ಸಿ. ನಿಂಗರಾಜೇಗೌಡಗೆ ಟಿಕೆಟ್ ಫೈನಲ್ ಮಾಡಿ ಹೆಸರು ಘೋಷಣೆ ಮಾಡಲಾಗಿದೆ. ಆದರೆ, ಜೆಡಿಎಸ್ ಮಾತ್ರ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ನಮಗೆ ಬೇಕು ಎಂದು ಬೇಡಿಕೆ ಮುಂದಿಟ್ಟಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಸುಳಿವು ನೀಡಿರೋ ಮಾಜಿ ಶಾಸಕ ಸಾ.ರಾ. ಮಹೇಶ್ ಮೇ 15 ಕ್ಕೆ ಜೆಡಿಎಸ್ ದಕ್ಷಿಣ ಶಿಕ್ಷಕರ ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಲಿದ್ದಾರೆ. ಕೆ.ಟಿ.ಶ್ರೀಕಂಠೇಗೌಡ, ವಿವೇಕಾನಂದ ನಡುವೆ ಫೈಪೋಟಿ ಇದ್ದು ಶೀಘ್ರವೇ ಅಂತಿಮವಾಗಲಿದೆ. ಜೆಡಿಎಸ್‌ಗೆ ಈ ಕ್ಷೇತ್ರ ಬಿಟ್ಟುಕೊಡುವುದಾಗಿ ಬಿಜೆಪಿ ಹೈಕಮಾಂಡ್ ಸಮ್ಮತಿ ಸೂಚಿಸಿದೆ ಎಂದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನೊಂದೆಡೆ ಮೇ 16ಕ್ಕೆ ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ನಾಮಪತ್ರ ಸಲ್ಲಿಸಲು ಎಲ್ಲಾ ಸಿದ್ದತೆ ನಡೆಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಹಾಲಿ ಪರಿಷತ್ ಸದಸ್ಯ ಮರಿತಿಬ್ಬೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಖುದ್ದು ಸಿಎಂ ಸಿದ್ದರಾಮಯ್ಯ ಶಿಕ್ಷಣ ಸಚಿವ ಮಧುಬಂಗಾರಪ್ಪ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮೈಸೂರು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಜರಿದ್ದಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಕರಾವಳಿ ಬಿಜೆಪಿಯಲ್ಲಿ ಬಂಡಾಯ ಸ್ಫೋಟ, ತೊಡೆತಟ್ಟಿದ ಉಡುಪಿ, ಮಂಗಳೂರು ನಾಯಕರು
ಒಟ್ಟಿನಲ್ಲಿ ಬಿಜೆಪಿಯಿಂದ ಟಿಕೆಟ್ ಘೋಷಣೆ ಆಗಿದ್ದರೂ ಕೂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಜೆಡಿಎಸ್ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ವರವಾಗುತ್ತಾ? ಟಿಕೆಟ್ ಹಂಚಿಕೆ ವಿಚಾರ ಎಲ್ಲಿಗೆ ಬಂದು ನಿಲ್ಲುತ್ತದೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:13 am, Wed, 15 May 24