
ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ರಾಜ್ಯದಾದ್ಯಂತ ಜೋರಾಗಿ ನಡೆದಿದೆ. ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ, ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ, ಜೆಡಿಎಸ್ನ ಪಂಚರತ್ನ ಯಾತ್ರೆ ಭರ್ಜರಿಯಾಗಿ ಸಾಗುತ್ತಿವೆ. ಈ ಮಧ್ಯೆ ಎಎಪಿ ಕೂಡ ರಾಜ್ಯದಲ್ಲಿ ಖಾತೆ ತೆರೆಯಬೇಕೆಂಬ ಹಂಬಲ ಹೊಂದಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಸದ್ಯ ರಾಜ್ಯದಾದ್ಯಂತ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಜಾಧ್ವನಿ ಸಮಾವೇಶದಲ್ಲಿ ವ್ಯಸ್ತರಾಗಿದ್ದರೆ ಅತ್ತ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಕೂಡ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ ರಾಜಕೀಯ ವಿದ್ಯಮಾನಗಳ ಲೈವ್ ಅಪ್ಡೇಟ್ಸ್ ಇಲ್ಲಿವೆ.
ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ಮಾರ್ಚ್ 4 ರಂದು ದಾವಣಗೆರೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭೇಟಿ ನೀಡಲಿದ್ದಾರೆ. ಆಮ್ ಆದ್ಮಿ ಪಾರ್ಟಿಯಿಂದ ಆಯೋಜಿಸಲಿರುವ ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಕೇಜ್ರಿವಾಲ್ ಭಾಷಣ ಮಾಡಲಿದ್ದಾರೆ.
ಬಾಗಲಕೋಟೆ: ಮೋದಿ, ಅಮಿತ್ ಶಾರನ್ನು ಯಾಕೆ ಕರೆಸುತ್ತಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ನಾಯಕರಿಗೆ ಮುಖವಿಲ್ಲ. ರಾಜ್ಯದ ಜನರ ಮುಂದೆ ಹೋಗಲು ಬಿಜೆಪಿಯವರಿಗೆ ಭಯ. ಹೀಗಾಗಿ ಮೋದಿ, ಶಾರನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರು: ಬಿಜೆಪಿ ಸೇರಿದವರನ್ನು ಯಾವತ್ತೂ ಕೈಬಿಡಲ್ಲ ಎಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲು ಹೇಳಿದರು. ಕಾಂಗ್ರೆಸ್ ವಿಚಾರಧಾರೆಗಳಿಗೆ ಬೇಸತ್ತು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಪರಿವಾರಧಾರೆಯಿಂದ ಸಂಘಟನಾಧಾರೆ ಕಡೆಗೆ ನೀವೆಲ್ಲಾ ಬಂದಿದ್ದೀರಿ. ಸುಧಾಕರ್, ಮುನಿರತ್ನ, ಲಕ್ಷ್ಮೀನಾರಾಯಣ್ ಎಷ್ಟು ಖುಷಿಯಾಗಿದ್ದಾರೆ ನೋಡಿ
ಒಂದು ವರ್ಷವಾದ ಮೇಲೆ ನೀವು ಇದೇ ರೀತಿ ಇರುತ್ತೀರಿ ಎಂದು ಹೇಳಿದರು.
ಬಾಗಲಕೋಟೆ: ಸಿದ್ದರಾಮಯ್ಯರನ್ನು ಮುಗಿಸಿ ಬಿಡಿ ಅಂತಾ ಒಬ್ಬ ಸಚಿವ ಹೇಳುತ್ತಾನೆ. ನನ್ನನ್ನು ಮುಗಿಸಲು ನಿಮ್ಮೆಲ್ಲರ ಒಪ್ಪಿಗೆ ಇದೆಯಾ ಎಂದ ಸಿದ್ದರಾಮಯ್ಯ ಕೇಳಿದರು. ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಂತ್ರಿ ಆಗುವುದಕ್ಕೆ ನಾಲಾಯಕ್. ನೀವು ಹೊಡೆದು ಹಾಕುವುದಾದ್ರೆ ತಯಾರಾಗಿದ್ದೀನಿ, ಹೊಡೆದುಹಾಕಿ. ಆದರೆ ರಾಜ್ಯದ ರೈತರು, ಬಡವರು, ದಲಿತರು ಹಾಗೂ ಶ್ರಮಿಕರು ಇವರ ಪರ ಕೆಲಸ ಮಾಡುವುದನ್ನು ಪ್ರಾಣ ಹೋದರೂ ಬಿಡೋದಿಲ್ಲ ಎಂದು ಹೇಳಿದರು.
ಬಾಗಲಕೋಟೆ: ನಾವು ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಬೇಡಿಕೆ ಈಡೇರಿಸುತ್ತೇವೆ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕೊಟ್ಟ ಮಾತಿಗೆ ನಡೆಯದಿದ್ರೆ 1 ಸೆಕೆಂಡ್ ಸಹ ಅಧಿಕಾರದಲ್ಲಿ ಇರಲ್ಲ. 165 ಭರವಸೆ ನೀಡಿದ್ದೆವು, ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ಹೇಳಿದರು.
ಕಲಬುರಗಿ: BJP ಶಾಸಕ ಸಿ.ಟಿ.ರವಿ ಹೇಳಿಕೆ ಬಗ್ಗೆ ನಾವು ಗಮನ ಕೊಡುವುದಿಲ್ಲ. ಸಿ.ಟಿ.ರವಿಗೆ ಯಾವುದಾದರೂ ವಿಷಯದಲ್ಲಿ ಕಾಣುವ ಹವ್ಯಾಸವಿದೆ. ಬಿಜೆಪಿ ತಮ್ಮ ಪಕ್ಷದ ಮುಖಂಡರನ್ನೆ ಅವಮಾನ ಮಾಡ್ತಾ ಬರುತ್ತಿದೆ. ಮೋದಿ ತಮ್ಮ ಗುರು ಪಟೇಲ್ರನ್ನೇ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು. ಇಲ್ಲಿ ಬಿಎಸ್ವೈರನ್ನು ಸಿಎಂ ಸ್ಥಾನದಿಂದ ತೆಗೆದು ಅವಮಾನ ಮಾಡಿದ್ರು. ಇದು ಬಿಜೆಪಿಯವರ ಸಂಸ್ಕ್ರತಿಯನ್ನು ತೋರಿಸುತ್ತದೆ ಎಂದು ಸುರ್ಜೇವಾಲ ವಾಗ್ದಾಳಿ ಮಾಡಿದರು.
ಕಲಬುರಗಿ: ಬಿಜೆಪಿಯವರು ಸಿದ್ದರಾಮಯ್ಯರನ್ನು ಕೊಲ್ಲೋದಾಗಿ ಹೇಳ್ತಿದ್ದಾರೆ. ಅವರಿಗೆ ಧಮ್ ಇದ್ರೆ, ಸ್ಥಳ ಮತ್ತು ಸಮಯ ಹೇಳಲಿ ನಾನೇ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ರನ್ನು ಕರೆದುಕೊಂಡು ಬರ್ತೇನೆ. ಕೊಲ್ಲುವದಾದ್ರೆ ಕೊಲ್ಲಲಿ. ಎಷ್ಟು ಜನರನ್ನು ಸಾಯಿಸುತ್ತೀರೋ ಸಾಯಿಸಿ. ಲಕ್ಷಾಂತರ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ ಎಂದು ನಗರದಲ್ಲಿ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಬೆಂಗಳೂರು: ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಮತ್ತೆ ಆರಂಭ. ಬಜೆಟ್ ಮೇಲಿನ ಚರ್ಚೆಯನ್ನು ನಾಮ ನಿರ್ದೇಶಿತ ಸದಸ್ಯೆ ವಿನಿಶಾ ನೀರೋ ಮುಂದುವರಿಸಿದರು.
ಮಂಡ್ಯ: ಬಿಜೆಪಿ ಇರುವ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಆಗಿದೆ. ಅದೇ ಥರಾ ಕರ್ನಾಟಕದಲ್ಲೂ ಹಿಂದೆಂದೂ ಆಗದ ಅಭಿವೃದ್ಧಿ ಕೆಲಸ ಐದು ವರ್ಷದಲ್ಲಿ ಆಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು. ರೈಲು, ಹೈವೇ ಸೇರಿದಂತೆ ಅನೇಕ ಕೆಲಸಗಳು ಕಾಂಗ್ರೆಸ್ ಕಾಲದಲ್ಲಿ ಆಗದಿರುವ ಕಾರ್ಯಗಳು ನರೇಂದ್ರ ಮೋದಿ ಸರ್ಕಾರದಲ್ಲಿ ಆಗಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರ ವ್ಯಕ್ತಿತ್ವ ದೊಡ್ಡದು. ಅವರಿಂದ ಎಲ್ಲ ಪಕ್ಷದವರೂ ಕಲಿಯಬೇಕಾದ ವಿಚಾರಗಳು ಬಹಳಷ್ಟಿವೆ ಎಂದು ವಿಧಾನಸಭೆ ಉಪನಾಯಕ ಯು.ಟಿ. ಖಾದರ್ ಹೇಳಿದರು. ವಿಧಾನಸಭೆಯಲ್ಲಿದು ತನ್ನ ಕೊನೆಯ ಭಾಷಣ ಎಂದು ಬಿಎಸ್ವೈ ಹೇಳಿದ ಬಳಿಕ ಖಾದರ್ ಅವರು ಬಿಜೆಪಿಯ ಹಿರಿಯ ನಾಯಕನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಯಡಿಯೂರಪ್ಪನವರು ಇಲ್ಲಿ ಅತ್ಯಂತ ಹಿರಿಯರು. ಅವರು ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದಾರೆ. ಅವರು ಕೇವಲ ಬಿಜೆಪಿಯ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕ ಮಾತ್ರ ಅಲ್ಲ. ನಾನು ಸೇರಿದಂತೆ ಎಲ್ಲಾ ಪಕ್ಷದವರು ಅವರಿಂದ ಕಲಿಯಲು ಸಾಕಷ್ಟು ವಿಚಾರಗಳು ಇವೆ. ಅಂತಹ ದೊಡ್ಡ ವ್ಯಕ್ತಿತ್ವ ಯಡಿಯೂರಪ್ಪ ಅವರದು. ಹೈಕಮಾಂಡ್ ಎಷ್ಟೇ ನೋವು ಕೊಟ್ಟರೂ ಸಹ ಅವರು ಪಕ್ಷ ನಿಷ್ಠೆಯನ್ನು ಬಿಡಲಿಲ್ಲ. ಅವಮಾನ, ನೋವು ಆಗಿದ್ದರೂ ಅದೆಲ್ಲವನ್ನೂ ಸಹಿಸಿಕೊಂಡರು. ಅವರ ಪಕ್ಷನಿಷ್ಠೆಯನ್ನು ನಾವು ಎಲ್ಲರೂ ಕಲಿಯಬೇಕು ಎಂದು ಖಾದರ್ ಹೇಳಿದರು.
ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಟ್ ಅಧಿವೇಶನದ ಚರ್ಚೆಯಲ್ಲಿ ಮಾತನಾಡಿದರು. ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಅವರು, ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸದನ ಪ್ರವೇಶಿಸುವುದಿಲ್ಲ ಎಂದು ಭಾವುಕರಾಗಿ ನುಡಿದರು.
ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ ಎಂದು ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂಬ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಹೇಳಿಕೆಗೆ ತಿರುಗೇಟು ನೀಡಿದರು. ನನ್ನ ವಿರುದ್ಧ ಆ ರೀತಿಯ ಮಾತು ಹೇಳಲು ಸುರ್ಜೇವಾಲ ಅವರಿಗೆ ನಾಚಿಕೆಯಾಗಬೇಕು. ಅವರಿಗೆ ಮೋದಿ ಮುಖ ಬಿಟ್ಟರೆ ಮತ್ತೇನು ಕಾಣಲು ಸಾಧ್ಯ. ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ ಎಂದು ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ವಿಧಾನಸಭೆಯಲ್ಲಿ ಪಕ್ಷದ ವರಿಷ್ಠರು ಹೇಳಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಂಡ್ಯ, ವರುಣಾ ಅಥವಾ ಶಿಕಾರಿಪುರ ಅಂತ ಏನೂ ಇಲ್ಲ. ವರಿಷ್ಠರ ತೀರ್ಮಾನವೇ ಅಂತಿಮ ಎಂದು ಬಿಜೆಪಿ ಸಂಸದ ಬಿವೈ ವಿಜಯೇಂದ್ರ ಮಂಡ್ಯದಲ್ಲಿ ಟಿವಿ9ಗೆ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ‘ರಾಜಕಾರಣಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ’ ಎಂಬ ಫಲಕಗಳನ್ನು ಹಾಕಲಾಗಿದೆ. ಹಳ್ಳಕ್ಕೆ ತೂಗು ಸೇತುವೆ ನಿರ್ಮಿಸಿಕೊಡುವಂತೆ ಮಾಡಿದ ಮನವಿಗೆ ಸ್ಪಂದಿಸದ್ದಕ್ಕೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದು, ತೂಗು ಸೇತುವೆ ನಿರ್ಮಿಸಿಕೊಡುವವರೆಗೆ ಮತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
ವಿಧಾನಸಭೆ ಪ್ರಶ್ನೋತ್ತರ ಕಲಾಪ ಆರಂಭವಾಗಿದೆ.
ರಾಜ್ಯದ ಜನರ ಬಳಿ ಪ್ರಣಾಳಿಕೆಗೆ ಸಲಹೆ ಪಡೆಯುತ್ತೇವೆ. ರಾಜ್ಯದ ಮೂಲೆ ಮೂಲೆಗೆ ತೆರಳಿ ಸಲಹೆ ಪಡೆಯುತ್ತೇವೆ. ರಾಜ್ಯದ 8 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಸಲಹಾ ಸಂಗ್ರಹ ಪೆಟ್ಟಿಗೆ ಇಡುತ್ತೇವೆ. ಕಾಂಗ್ರೆಸ್ ಕೃಷಿ ಬಗ್ಗೆ ಮಾತಾಡ್ತಾರೆ ಅಷ್ಟೇ. ಆದ್ರೆ ಕಾಂಗ್ರೆಸ್ ನವರು ರೈತರಿಗೆ ಒಂದು ನಿರ್ದಿಷ್ಟವಾದ ಕಾರ್ಯಕ್ರಮ ಕೊಟ್ಟಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆಗೆ ಸಲಹೆಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ಕೊಡುತ್ತಿದ್ದೇವೆ ಎಂದು ಸಚಿವರಾದ ಡಾ. ಸುಧಾಕರ್ ಮತ್ತು ಬಿ.ಸಿ. ನಾಗೇಶ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಮಂಡ್ಯದಲ್ಲಿ ಇಂದು ಬಿಜೆಪಿ ಬೃಹತ್ ಯುವ ಮೋರ್ಚಾ ಸಮಾವೇಶ ನಡೆಯಲಿದೆ. ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ, ಸಿಟಿ ರವಿ, ನಾರಾಯಣಗೌಡ ಭಾಗವಹಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಹುನಗುಂದದಲ್ಲಿ ಇಂದು ಪ್ರಜಾಧ್ವನಿ ಸಮಾವೇಶ ನಡೆಯಲಿದೆ.
Published On - 10:28 am, Wed, 22 February 23