BS Yediyurappa: ವಿಧಾನಸಭೆಯಲ್ಲಿದು ನನ್ನ ಕೊನೆಯ ಭಾಷಣ ಎಂದು ಭಾವುಕರಾದ ಯಡಿಯೂರಪ್ಪ; ಚುನಾವಣೆ ಸ್ಪರ್ಧಿಸಿ ಎಂದ ಪ್ರತಿಪಕ್ಷ ನಾಯಕರು

ವಿಧಾನಸಭೆಯಲ್ಲಿದು ನನ್ನ ಕೊನೆಯ ಭಾಷಣ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನೆಂದೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭಾವುಕರಾಗಿ ನುಡಿದರು.

Follow us
Ganapathi Sharma
|

Updated on:Feb 22, 2023 | 3:12 PM

ಬೆಂಗಳೂರು: ವಿಧಾನಸಭೆಯಲ್ಲಿದು ನನ್ನ ಕೊನೆಯ ಭಾಷಣ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನೆಂದೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಬಿಜೆಪಿ (BJP) ಶಾಸಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಭಾವುಕರಾಗಿ ನುಡಿದರು. ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಮತ್ತೆ ನಾನು ಸದನದ ಒಳಗೆ ಬರುವ ಪ್ರಶ್ನೆಯೇ ಇಲ್ಲ ಎಂದು ದೃಢವಾಗಿ ಹೇಳಿದರು. ಈ ವೇಳೆ ಯಡಿಯೂರಪ್ಪ ತುಸು ಭಾವುಕರಾಗಿರುವುದು ಕಂಡುಬಂತು. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿದು ಕೊನೆಯ ಭಾಷಣ ಎಂದು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಅವರ ಮನವೊಲಿಸುವಂತೆ ಮಾತನಾಡಿದರು. ನೀವು ಹಿರಿಯ ನಾಯಕರು, ಮತ್ತೆ ಸದನ ಪ್ರವೇಶಿಸಬೇಕು ಎಂದರು.

ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್​​​ ಮತ್ತೆ ವಿಪಕ್ಷ ಸ್ಥಾನದಲ್ಲೇ ಇರಬೇಕಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 7ನೇ ವೇತನ ಆಯೋಗ ಜಾರಿ ಬಗ್ಗೆ ಘೋಷಣೆ ಮಾಡಬೇಕು. ಸರ್ಕಾರಿ ನೌಕರರು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.

ಬೊಮ್ಮಾಯಿ ಬಜೆಟ್ ಅನ್ನು ಶ್ಲಾಘಿಸಿದ ಬಿಎಸ್​​ವೈ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅ​​ನ್ನು ಸ್ವಾಗತಿಸುತ್ತೇನೆ. ಅವರು ಉತ್ತಮ ಬಜೆಟ್​ ಮಂಡಿಸಿದ್ದಾರೆ. ನಾನೂ ಸಹ ಹಣಕಾಸು ಸಚಿವನಾಗಿ ಹಲವು ಬಜೆಟ್ ಮಂಡಿಸಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ, ಸಂಪನ್ಮೂಲ ಕ್ರೋಢೀಕರಣ, ಜನರ ನಿರೀಕ್ಷೆ, ಪ್ರಾದೇಶಿಕವಾರು ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಬಜೆಟ್ ವಿಶ್ಲೇಷಣೆ ವೇಳೆ ಇವೆಲ್ಲವನ್ನೂ ಗಮನಿಸಿ ಮಾತಾಡಬೇಕು ಎಂದು ಅವರು ಹೇಳಿದರು.

ಸಂಪನ್ಮೂಲಕ ಕ್ರೋಢೀಕರಣದಲ್ಲಿ ಶೇಕಡಾ 17ರಷ್ಟು ಬೆಳವಣಿಗೆ ಆಗಿದೆ. ಬಜೆಟ್ ನೋಡಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಸ್ತವಾಂಶ ಹೇಳುತ್ತಾರೆ ಅಂದುಕೊಂಡಿದ್ದೆ. ಆದರೆ ಅವರು ಹಾಗೆ ಹೇಳಲಿಲ್ಲ, ಇದು ನನಗೆ ನೋವು ತಂದಿದೆ. ಬಜೆಟ್​​ನಲ್ಲಿ ದೂರಗಾಮಿ ಆಲೋಚನೆ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Karnataka News Live Updates: ಯಡಿಯೂರಪ್ಪ ವ್ಯಕ್ತಿತ್ವ ದೊಡ್ಡದು; ಯುಟಿ ಖಾದರ್

ಕೋವಿಡ್​​ನಿಂದ ಆದ ಆರ್ಥಿಕ ಹಿಂಜರಿತ ಬಳಿಕ ಮುಖ್ಯಮಂತ್ರಿಗಳು ಆರ್ಥಿಕ ಸ್ಥಿತಿ ಉತ್ತಮವಾಗಿ ಸುಧಾರಿಸಿದ್ದಾರೆ. ಸಂಪನ್ಮೂಲಗಳ ಕ್ರೋಢೀಕರಣ ಅನುಕರಣನೀಯ. ಸಂಪನ್ಮೂಲಗಳ ಕ್ರೋಢೀಕರಣದಲ್ಲಿ 17% ಬೆಳವಣಿಗೆ ಆಗಿದೆ. ಕೋವಿಡ್​​ನಿಂದಾದ ಆರ್ಥಿಕ ಹೊಡೆತ ಸರಿಯಾಗಲು ಮೂರ್ನಾಲ್ಕು ವರ್ಷ ಬೇಕು ಅಂತ ತಜ್ಞರು ಹೇಳಿದ್ದರು. ಆದರೆ, ಬೊಮ್ಮಾಯಿಯವರು ಉಳಿತಾಯ ಬಜೆಟ್ ಕೊಟ್ಟಿದ್ದಾರೆ, ಸೋರಿಕೆ ತಡೆದಿದ್ದಾರೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ವಿಶ್ವಗುರು, ದೇಶ ಸದೃಢ

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಗುರು ಆಗಿದ್ದಾರೆ. ಅವರ ನಾಯಕತ್ವದಲ್ಲಿ ದೇಶ ಸದೃಢವಾಗಿದೆ. ಕೋವಿಡ್ ಸಾಂಕ್ರಾಮಿಕವನ್ನು ದೇಶ ಸಮರ್ಥವಾಗಿ ಎದುರಿಸಿತು. ಮೋದಿಯವರ ಮಾರ್ಗದರ್ಶನದಡಿ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ಸಂಕೋಚ ಪಡುವ ಅಗತ್ಯ ಇಲ್ಲ. ಇದನ್ನು ನಮ್ಮ ವಿಪಕ್ಷ ನಾಯಕರು ಮಾಡಬೇಕಿತ್ತು. ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ. ನಮ್ಮ ಆಡಳಿತದಲ್ಲಿ ರಾಜ್ಯ ವಿಕಾಸ ಹೊಂದಿದೆ. ಇದರಲ್ಲಿ ಯಾರೂ‌ ಅನುಮಾನ ಪಡುವ ಹಾಗಿಲ್ಲ. ಆರ್​ಎಸ್​ಎಸ್ ಚಿಂತನೆಗಳನ್ನು ವಿರೋಧಿಸಿದರೆ ಜನ ನಮ್ಮನ್ನು ಗುರುತಿಸುತ್ತಾರೆ ಅಂತ ವಿಪಕ್ಷದವರು ಭ್ರಮೆಯಲ್ಲಿದ್ದಾರೆ ಎಂದು ಅವರು ಹೇಳಿದರು.

ಯಡಿಯೂರಪ್ಪ ವ್ಯಕ್ತಿತ್ವ ದೊಡ್ಡದು; ಯುಟಿ ಖಾದರ್

ಯಡಿಯೂರಪ್ಪ ಅವರ ವ್ಯಕ್ತಿತ್ವ ದೊಡ್ಡದು. ಅವರಿಂದ ಎಲ್ಲ ಪಕ್ಷದವರೂ ಕಲಿಯಬೇಕಾದ ವಿಚಾರಗಳು ಬಹಳಷ್ಟಿವೆ ಎಂದು ವಿಧಾನಸಭೆ ಉಪನಾಯಕ ಯು.ಟಿ. ಖಾದರ್ ಹೇಳಿದರು. ಯಡಿಯೂರಪ್ಪನವರು ಇಲ್ಲಿ ಅತ್ಯಂತ ಹಿರಿಯರು. ಅವರು ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದಾರೆ. ಅವರು ಕೇವಲ ಬಿಜೆಪಿಯ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕ ಮಾತ್ರ ಅಲ್ಲ. ನಾನು ಸೇರಿದಂತೆ ಎಲ್ಲಾ ಪಕ್ಷದವರು ಅವರಿಂದ ಕಲಿಯಲು ಸಾಕಷ್ಟು ವಿಚಾರಗಳು ಇವೆ. ಅಂತಹ ದೊಡ್ಡ ವ್ಯಕ್ತಿತ್ವ ಯಡಿಯೂರಪ್ಪ ಅವರದು. ಹೈಕಮಾಂಡ್ ಎಷ್ಟೇ ನೋವು ಕೊಟ್ಟರೂ ಸಹ ಅವರು ಪಕ್ಷ ನಿಷ್ಠೆಯನ್ನು ಬಿಡಲಿಲ್ಲ. ಅವಮಾನ, ನೋವು ಆಗಿದ್ದರೂ ಅದೆಲ್ಲವನ್ನೂ ಸಹಿಸಿಕೊಂಡರು. ಅವರ ಪಕ್ಷನಿಷ್ಠೆಯನ್ನು ನಾವು ಎಲ್ಲರೂ ಕಲಿಯಬೇಕು ಎಂದು ಖಾದರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Wed, 22 February 23