ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಡೂರಿಗೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ವಿಜಯಪುರದಲ್ಲಿ ಕಾಂಗ್ರೆಸ್ನ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸುತ್ತಿದ್ದಾರೆ. ಈ ಮಧ್ಯೆ, ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಹಾಗೂ ಬೆಳವಾಗಿವೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೈಕ್ ರ್ಯಾಲಿ, ರೋಡ್ ಶೋ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ರಾಣಿ ಚನ್ನಮ್ಮ ವೃತ್ತ ಇಲ್ಲವೇ ಸಂಭಾಜಿ ವೃತ್ತದಿಂದ ರೋಡ್ ಶೋಗೆ ಸಿದ್ಧತೆ ಮಾಡಲಾಗುತ್ತಿದೆ. ಒಟ್ಟಾರೆ ರಾಜ್ಯ ರಾಜಕೀಯ ವಿದ್ಯಮಾನಗಳ ಲೈವ್ ಅಪ್ಡೇಟ್ಸ್ ಇಲ್ಲಿವೆ.
ಬೆಂಗಳೂರು: ನಗರದ ಟೌನ್‌ಹಾಲ್‌ನಲ್ಲಿ ನಡೆಯುತ್ತಿರುವ ಪ್ರಬುದ್ಧರ ಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿದ್ದಾರೆ. ವಿವಿಧ ಕ್ಷೇತ್ರಗಳ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ವಿಜಯಪುರ: ಪ್ರಜಾಧ್ವನಿ, ಪ್ರಜೆಗಳ ಧ್ವನಿಯನ್ನು ಹೆಳುವ ಕೆಲಸ ಮಾಡುತ್ತಿದೆ. ಈಗಿನ ಸರ್ಕಾರದ ಭಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಶುರುವಾಗಿದೆ. ಸಿದ್ದರಾಮಯ್ಯ ನೇತ್ರತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಎಲ್ಲೆಲ್ಲಿ ಹೋಗಿದೆ ಅಲ್ಲೆಲ್ಲಾ ಕಾಂಗ್ರೆಸ್ಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ಭದ್ದತೆ, ಸಿದ್ದಾಂತವನ್ನು ನಾವೆಲ್ಲರೂ ಬಲ್ಲವರಾಗಿದ್ದೇವೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.
ಹಾಸನ: ಹಾಸನದಲ್ಲಿ ನಾನು ಎಂಎಲ್ಎ ಆಗಬೇಕು ಎನ್ನೋದಿಲ್ಲ. ನಮ್ಮ ಜನರಿಗೆ ಅನ್ಯಾಯ ಆಗೊದನ್ನ ತಡಿಬೇಕು. ನಮ್ಮ ಜನರು ಉಳಿಬೇಕು, ಅದೇನಾಗುತ್ತೊ ನೋಡೋಣ. ಪರೋಕ್ಷವಾಗಿ ಹಾಸನದಿಂದ ನಾನೇ ಅಭ್ಯರ್ಥಿ ಎಂಬಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ನಾನೇನು ಹಾಸನದಿಂದ ಶಾಸಕ ಆಗಬೇಕಿಲ್ಲ, ಜನರ ಕಷ್ಟಕ್ಕೆ ನೆರವಾಗಬೇಕು ಎನ್ನುತ್ತಲೇ ಹಾಸನದಿಂದ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದರು.
ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಬೊಮ್ಮಾಯಿ ಉತ್ತರ ನೀಡಿದ್ದು, ಕರ್ನಾಟಕ ಆರ್ಥಿಕ ನಿರ್ವಹಣೆ ಮತ್ತು ಶಿಸ್ತಿನಲ್ಲಿ ಬಜೆಟ್ ನಿರ್ವಹಣೆ ಮಾಡಲಾಗಿದೆ. ಕೊವಿಡ್ ಬಳಿಕ ತಕ್ಷಣವೇ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಬದುಕಿನಲ್ಲಿ ಮುಂದೆ ಬರಬೇಕೆಂಬ ಜನರ ಉತ್ಸಾಹವೇ ಕಾರಣ. ಜನರ ಉತ್ಸಾಹದಿಂದಾಗಿ ರಾಜ್ಯದ ಆರ್ಥಿಕತೆ ಸುಧಾರಣೆಯಾಗಿದೆ. ಆದಾಯ ಹೆಚ್ಚಾಯ್ತು ಎಂಬ ಸಿಎಂ ವಿವರಣೆಗೆ ಖಾದರ್ ಆಕ್ಷೇಪ ವ್ಯಕ್ತವಾಗಿದೆ. ಹೇಗೆ ಆದಾಯ ಹೆಚ್ಚಾಗಲು ಸಾಧ್ಯ ಅಂತಾ ಯು.ಟಿ.ಖಾದರ್ ಪ್ರಶ್ನೆ ಮಾಡಿದರು. ಕೃಷಿ ಮತ್ತು ಕೈಗಾರಿಕಾ ಬೆಳವಣಿಗೆ ಕುಸಿದಿದೆಯಲ್ಲಾ ಎಂದು ಖಾದರ್ ಹೇಳಿದರು. ಇಲ್ಲ ಕುಸಿದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಳ್ಳಾರಿ: ಮೋದಿ ಸರ್ಕಾರ ಬಂದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ. ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ನಾವು ತಕ್ಕ ಪಾಠ ಕಲಿಸಿದ್ದೇವೆ ಎಂದು ಅಮಿತ್ ಶಾ ಹೇಳಿದರು. ಗ್ಯಾಸ್ ಸಂಪರ್ಕ ಕಲ್ಪಿಸಿದ್ದೇವೆ, ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದೇವೆ. ವ್ಯಾಕ್ಸಿನ್ ನೀಡುವ ಮೂಲಕ ಕರ್ನಾಟಕ ಕೊವಿಡ್ ಮುಕ್ತ ಮಾಡಿದ್ದೇವೆ. ಪ್ರತಿ ರೈತರ ಖಾತೆಗೆ 6 ಸಾವಿರ ಹಣ ಹಾಕಲಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ತೆಗೆದುಹಾಕಿದ್ದೇವೆ. ವಿರೋಧ ಪಕ್ಷಗಳು ಆರ್ಟಿಕಲ್ 370 ತೆಗೆಯದಂತೆ ವಿರೋಧಿಸಿದ್ದರು. ಈ ಮೂಲಕ ವಿಪಕ್ಷಗಳು ಕಾಶ್ಮೀರ ಪ್ರತ್ಯೇಕವಾಗಿಡಲು ಯತ್ನಿಸುತ್ತಿದ್ದವು ಎಂದು ಹೇಳಿದರು.
ಬಳ್ಳಾರಿ: ಈ ಬಾರಿ ಪೂರ್ಣ ಬಹುಮತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅಮಿತ್ ಶಾ ಹೇಳಿದರು. ಸಂಡೂರಿನ ಕುಮಾರಸ್ವಾಮಿ ದೇವರಿಗೆ ನನ್ನ ನಮಸ್ಕಾರಗಳು. ಕಾರ್ಯಕ್ರಮಕ್ಕೆ ಬರುವುದು 2 ಗಂಟೆ ತಡವಾಗಿದ್ದಕ್ಕೆ ಕ್ಷಮೆಯಾಚಿಸುವೆ. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಪರಿವಾರವಾದಿ ಪಕ್ಷಗಳು. ಪರಿವಾರವಾದಿ ಪಕ್ಷಗಳಿಂದ ಬಡವರ ಕಲ್ಯಾಣ ಮಾಡುವುದಿಲ್ಲ. ಜೆಡಿಎಸ್ಗೆ ಮತ ಹಾಕಿದರೆ ಕಾಂಗ್ರೆಸ್ಗೆ ಮತ ಹಾಕಿದಂತೆ ಎಂದು ಹೇಳಿದರು.
ಬಳ್ಳಾರಿ: ಜಿಲ್ಲಾ ಬಿಜೆಪಿ ಘಟಕದಿಂದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸನ್ಮಾನ ಮಾಡಲಾಯಿತು. ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು ಅವರು ಸನ್ಮಾನಿಸಿ ಗೌರವಿಸಿದರು.
ಬಳ್ಳಾರಿ: ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರಿನ ಎಸ್ಆರ್ಎಸ್ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಸಂಡೂರಿನ ಕುಮಾರಸ್ವಾಮಿ ದೇವರಿಗೆ ನನ್ನ ನಮಸ್ಕಾರಗಳು. ಕಾರ್ಯಕ್ರಮಕ್ಕೆ ಬರಲು ನನ್ನಿಂದ ತಡವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದರು. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಕುಟುಂಬವಾದಿ ಪಕ್ಷಗಳಾಗಿವೆ. ಕುಟುಂಬವಾದಿ ಪಕ್ಷಗಳಿಂದ ಬಡವರ ಕಲ್ಯಾಣ ಮಾಡುವುದಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಹೈಕಮಾಂಡ್ಗೆ ಎಟಿಎಂ ಆಗಿತ್ತು. ಕರ್ನಾಟಕ ಕಾಂಗ್ರೆಸ್ ದೆಹಲಿ ಹೈಕಮಾಂಡ್ಗೆ ಎಟಿಎಂ ಆಗಿತ್ತು ಎಂದರು. ಕಾಂಗ್ರೆಸ್ ಸರ್ಕಾರದಲ್ಲಿ PFI ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದುಕೊಳ್ಳಲಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಆ ಸಂಘಟನೆಯನ್ನು ನಿಷೇಧ ಮಾಡಿದರು ಎಂದರು.
ಬಳ್ಳಾರಿ: ಹಲವು ಬಾರಿ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿಯಾದರೂ ಅಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಪ್ರತಿದಾಳಿ ನಡೆಸದೆ ಮೌನವಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ. ಆ ಮೂಲಕ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ನಾವು ತಕ್ಕ ಪಾಠ ಕಲಿಸಿದ್ದೇವೆ ಎಂದರು. ದೇಶದ ಪ್ರತಿ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಿದ್ದೇವೆ, ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದೇವೆ. ವ್ಯಾಕ್ಸಿನ್ ನೀಡುವ ಮೂಲಕ ಕರ್ನಾಟಕ ಕೋವಿಡ್ ಮುಕ್ತ ಮಾಡಿದ್ದೇವೆ, ಪ್ರತಿ ರೈತರ ಖಾತೆಗೆ 6 ಸಾವಿರ ಹಣ ಹಾಕಲಾಗಿದೆ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ವಿಶೇಷ ಕಾಯ್ದೆ ತೆಗೆದುಹಾಕಿದ್ದೇವೆ, ವಿರೋಧ ಪಕ್ಷಗಳು 370 ವಿಶೇಷ ಕಾಯ್ದೆ ರದ್ದುಡಿಸದಂತೆ ವಿರೋಧ ವ್ಯಕ್ತಪಡಿಸಿ ಕಾಶ್ಮೀರ ಪ್ರತ್ಯೇಕವಾಗಿಡಲು ಪ್ರಯತ್ನಿಸುತ್ತಿದ್ದರು. ಆದರೆ ನಾವು ವಿಶೇಷ ಸ್ಥಾನಮಾನ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಭಾರತದ ಎಂಬುದನ್ನು ಸಾಬೀತು ಮಾಡಿದ್ದೇವೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇಲ್ಲಿಂದ ಸಂಡೂರಿಗೆ ಹೆಲಿಕಾಪ್ಟರ್ನಲ್ಲಿ ತೆರಳಲಿರುವ ಅವರು, ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಬಳ್ಳಾರಿ ಜಿಲ್ಲೆಯಿಂದಲೇ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇದೆ ಎಂದು ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಹೇಳಿದ್ದಾರೆ. ನನ್ನ ಚುನಾವಣೆ ಸ್ಪರ್ಧೆ ವಿಚಾರದ ಬಗ್ಗೆ ವರಿಷ್ಠರಿಗೂ ತಿಳಿಸಿದ್ದೇನೆ. ಈ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಗುರಿಹೊಂದಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು. ಶೀಘ್ರದಲ್ಲೇ ರಾಜ್ಯದಲ್ಲಿ ಬಿಜೆಪಿ ಬಸ್ ಯಾತ್ರೆ ಆರಂಭವಾಗಲಿದೆ. ರಾಜ್ಯದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಎಲ್ಲಾ ತಯಾರಿ ನಡೆದಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆಗಿರುವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಭೆ ನಡೆಸಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಸಲಹೆ, ಸೂಚನೆ ನೀಡಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ನನ್ನ ಮೇಲೆ ಬಹಳ ಪ್ರೀತಿಯಿದೆ. ನನಗೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿಎಂ ಸ್ಥಾನದಿಂದ ಇಳಿಸಿದ ಮೇಲೆ ಅವರು ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸದ ವಿಚಾರವಾಗಿ ಯಡಿಯೂರಪ್ಪ ಬುಧವಾರ ವಿಧಾನಸಭೆಯಲ್ಲಿ ಉಲ್ಲೇಖಿಸಿದ್ದರು.
ವಿಧಾನಸಭೆ ಬಜೆಟ್ ಅಧಿವೇಶನದ ಗುರುವಾರದ ಪ್ರಶ್ನೋತ್ತರ ಕಲಾಪ ಆರಂಭವಾಗಿದೆ. ಪ್ರಶ್ನೋತ್ತರ ಕಲಾಪದ ನಂತರ ಸಿಎಂ ಬೊಮ್ಮಾಯಿ ಬಜೆಟ್ ಮೇಲೆ ಚರ್ಚೆಗೆ ಉತ್ತರ ನೀಡಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರು ನಮ್ಮ ಪಕ್ಷ ಜೆಡಿಎಸ್ ವಿಸರ್ಜನೆ ಬಗ್ಗೆ ಮಾತನಾಡಿದ್ದಾರೆ. ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಪಕ್ಷವೇ ವಿಸರ್ಜನೆಯಾಗಲಿದೆ ಎಂದು ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಹಾಸನದ ಸಂಸದರ ನಿವಾಸದಲ್ಲಿ ಎಚ್ಡಿ ರೇವಣ್ಣ ಸುದ್ದಿಗೋಷ್ಠಿ ನಡೆಸಲಿದ್ದು, ಭವಾನಿ ಅವರಿಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ, ಇಂದಿನಿಂದ ಭವಾನಿ ರೇವಣ್ಣ ಪ್ರಚಾರ ಆರಂಭಿಸಲಿದ್ದಾರೆ. ಇಂದಿನಿಂದ ಮೂರು ದಿನ ಹಾಸನ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಬಗೆಹರಿಯದ ಜೆಡಿಎಸ್ ಟಿಕೆಟ್ ಗೊಂದಲ. ಟಿಕೆಟ್ ಫೈನಲ್ ಗೊಂದಲ ನಡುವೆ ಇಂದಿನಿಂದ ಭವಾನಿ ರೇವಣ್ಣ ಪ್ರಚಾರ ಆರಂಭಿಸಲಿದ್ದಾರೆ. ಇಂದಿನಿಂದ ಮೂರು ದಿನ ಹಾಸನ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ.
ಬೆಂಗಳೂರಿಗೆ ಇಂದು ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಸಂಜೆ ಸಂಡೂರಿನಿಂದ ಹೆಲಿಕಾಫ್ಟರ್ ಮೂಲಕ ಬರಲಿರುವ ಅಮಿತ್ ಶಾ, ಸಂಜೆ 6 ಗಂಟೆಗೆ ಬೆಂಗಳೂರು ಟೌನ್‌ಹಾಲ್‌ನಲ್ಲಿ ಪ್ರಬುದ್ಧರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 8 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಸಭೆ ನಡೆಯಲಿದ್ದು, ಅದರಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶೃಂಗೇರಿಗೆ ಭೇಟಿ ನೀಡಿದ ಬೆನ್ನಲ್ಲೇ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಕೂಡ ಭೇಟಿ ನೀಡಲು ಮುಂದಾಗಿದ್ದಾರೆ. ನಾಳೆ ರಾತ್ರಿ ಶೃಂಗೇರಿಗೆ ತಲುಪಲಿರುವ ಕುಮಾರಸ್ವಾಮಿ ಶಾರದಾಂಬೆಯ ದರ್ಶನ ಪಡೆದು ಉಭಯ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಎರಡನೇ ಹಾಗೂ ಕೊನೇ ಹಂತದ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಹಾಗೂ ಬಬಲೇಶ್ವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಾಗಲಿದೆ.
ಬಳ್ಳಾರಿಯ ಸಂಡೂರಿನ ಎಸ್ಆರ್ಎಸ್ ಮೈದಾನದಲ್ಲಿ ಮಧ್ಯಾಹ್ನ 1:30 ರಿಂದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ, ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ.
Published On - 7:51 am, Thu, 23 February 23