ಬೆಂಗಳೂರು, ಅಕ್ಟೋಬರ್ 07: ಕರ್ನಾಟಕ ರಾಜಕಾರಣದಲ್ಲಿ (Karnataka Politics) ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijyayendra) ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು (Satish Jarkiholi) ದಿಢೀರ್ ಭೇಟಿಯಾಗಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ಬಿವೈ ವಿಜಯೇಂದ್ರ ಮತ್ತು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರ ಭೇಟಿ ಭಾರಿ ಕುತೂಹಲ ಮೂಡಿಸಿದೆ.
ಮುಡಾ ಹಗರಣ ಪ್ರಕರಣದಲ್ಲಿ ಸಿದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ, ಮುಖ್ಯಮಂತ್ರಿ ಬದಲಾವಣೆಯ ಕೂಗು ಕೇಳಿಬಂದಿದೆ. ಸಿಎಂ ಕುರ್ಚಿ ಮೇಲೆ ದಲಿತ ನಾಯಕನೇ ಕೂಡಬೇಕೆಂಬ ವಾದ ಜೋರಾದ ಹಿನ್ನೆಲೆಯಲ್ಲಿ ಆಕ್ಟಿವ್ ಆದ ಸತೀಶ್ ಜಾರಕಿಹೊಳಿ ಇತ್ತೀಚಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಟೋಲ್ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೇನೆ. ಶಿಕಾರಿಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಬರುತ್ತವೆ. ಈ ಎರಡು ಟೋಲ್ನಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಟೋಲ್ ಶಿಫ್ಟ್ ಮಾಡುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಭರವಸೆ ಕೊಟ್ಟಿದ್ದಾರೆ. ಈ ವಿಚಾರವಾಗಿ ಶೀಘ್ರದಲ್ಲೇ ಸಭೆ ಕರೆಯುವುದಾಗಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಜಿಟಿಡಿ ಹೇಳಿಕೆ ಜೆಡಿಎಸ್ ಪಕ್ಷದ ಆಂತರಿಕ ವಿಚಾರ; ಬಿ.ವೈ ವಿಜಯೇಂದ್ರ
ಬಿವೈ ವಿಜಯೇಂದ್ರ ಮತ್ತು ನನ್ನ ಭೇಟಿಗೆ ರಾಜಕೀಯ ಟಚ್ ಕೊಡೋದು ಸರಿಯಲ್ಲ. ಅದಕ್ಕೆ ಕಾರಣಗಳೂ ಏನೂ ಇಲ್ಲ. ವಿಪಕ್ಷದ ಶಾಸಕರು ಇಲಾಖೆ ಕೆಲಸ ಇದ್ದಾಗ ಬರಲೇಬೇಕಾಗುತ್ತದೆ. ಈಗ ಸಿಎಂ ಆಗುವಂತ ಅವಕಾಶವೂ ಇಲ್ಲ, ಸನ್ನಿವೇಶವೂ ಇಲ್ಲ. ಸಿಎಂ ಬದಲಾವಣೆ ವಿಚಾರವಾಗಿ ಕಳೆದ ದಸರಾದಿಂದಲೇ ಚರ್ಚೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬಸ್ ಅಲ್ಲಿಯೇ ನಿಂತಿದೆ, ನಾನೊಬ್ಬನೇ ಮೈಸೂರಿಗೆ ಹೋಗುತ್ತಿದ್ದೇನೆ. ಮುಡಾ ವಿವಾದ ಶುರುವಾಗಿದ್ದು ಈಗ ಮೂರು ತಿಂಗಳಿಂದ ಈಚೆಗೆ. ಅದಕ್ಕಿಂತ ಮೊದಲೂ ಹಲವು ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದೇನೆ. ಇಲಾಖೆ ಭೇಟಿ ಬಿಟ್ಟು ಬೇರೇನೂ ಇಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Mon, 7 October 24