ನಂದಿಬೆಟ್ಟದಲ್ಲಿ ಸಚಿವರ ಕಾರ್ಯಕ್ಷಮತೆ ಚಿಂತನ-ಮಂಥನ: ಆರ್​.ಅಶೋಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 02, 2022 | 6:47 PM

ನಂದಿಬೆಟ್ಟದ ಸಭೆಯಲ್ಲಿ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ಕರ್ನಾಟಕದ ಸಚಿವರಿಗೂ ಪರಿಚಯಿಸಲಾಗುವುದು ಎಂದು ಅಶೋಕ ಹೇಳಿದರು.

ನಂದಿಬೆಟ್ಟದಲ್ಲಿ ಸಚಿವರ ಕಾರ್ಯಕ್ಷಮತೆ ಚಿಂತನ-ಮಂಥನ: ಆರ್​.ಅಶೋಕ್
ಆರ್. ಆಶೋಕ
Follow us on

ಚಿಕ್ಕಬಳ್ಳಾಪುರ: ಕರ್ನಾಟಕದ ಎಲ್ಲ ಸಚಿವರ ಕಾರ್ಯವೈಖರಿಯನ್ನು ಪರಾಮರ್ಶಿಸುವ ಎರಡು ದಿನಗಳ ಚಿಂತನ-ಮಂಥನ ಸಭೆಯು ನಂದಿಬೆಟ್ಟದಲ್ಲಿ ನಡೆಯಲಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಗೂ ಎಲ್ಲ ಸಚಿವರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಗೆ ಪೂರ್ವಭಾವಿಯಾಗಿ ನಂದಿಬೆಟ್ಟಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಾಮರ್ಶಿಸಿದ ಕಂದಾಯ ಸಚಿವ ಆರ್.ಅಶೋಕ್, ಸಭೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪ್ರತಿ ಇಲಾಖೆಯಲ್ಲಿಯೂ ಜನಮೆಚ್ಚುಗೆ ಪಡೆದ ಕಾರ್ಯಕ್ರಮಗಳ ವಿವರ ಸಂಗ್ರಹಿಸಲಾಗುವುದು. ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಬೇಕಾದ ಯೋಜನೆಗಳು ಮತ್ತು ಈವರೆಗಿನ ಪ್ರಗತಿಯ ಬಗ್ಗೆ ವಿಮರ್ಶಿಸಲಾಗುವುದು ಎಂದರು.

ಎರಡು ದಿನಗಳ ಕಾಲ ನಡೆಯುವ ಸುದೀರ್ಘ ಸಭೆಯಲ್ಲಿ ರಾಷ್ಟ್ರೀಯ ನಾಯಕರಾದ ಸಂತೋಷ್, ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಲ್ಲ ಸಚಿವರು ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ಕರ್ನಾಟಕದ ಸಚಿವರಿಗೂ ಪರಿಚಯಿಸಲಾಗುವುದು. ಅದೇ ಹೊತ್ತಿನಲ್ಲಿ ಚುರುಕಾಗಿ ಕೆಲಸ ಮಾಡಲು ಪ್ರೇರಣೆ ನೀಡುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದು ನುಡಿದರು.

ಕರ್ನಾಟಕದ ಕೊರೊನಾ ಪರಿಸ್ಥಿತಿ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಕೊವಿಡ್‌ ನಿಯಂತ್ರಣಕ್ಕೆ ಕಠಿಣಕ್ರಮ ಕೈಗೊಳ್ಳುತ್ತೇವೆ. ಕಠಿಣ ನಿಯಮಗಳ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಲಾಕ್​ಡೌನ್ ಜಾರಿ ಮಾಡಿದ್ದರೆ, ಮಹಾರಾಷ್ಟ್ರದಲ್ಲಿ ಕಠಿಣ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ನಾವೂ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ರಾಜ್ಯದಲ್ಲಿ ಜನವರಿ 8ರಂದು ನೈಟ್ ಕರ್ಫ್ಯೂ ಅಂತ್ಯವಾಗಲಿದೆ. ಹೀಗಾಗಿ ಅದಕ್ಕೂ ಮುನ್ನವೇ ಸಿಎಂ ಜೊತೆ ಸಭೆ ನಡೆಯಲಿದೆ. ಸಿಎಂ ಜತೆ ಸಭೆ ನಂತರ ಟಫ್ ರೂಲ್ಸ್ ಜಾರಿ ಮಾಡಲಿದ್ದೇವೆ. ನಮಗೆ ರಾಜ್ಯದ ಜನರ ಪ್ರಾಣ ಕಾಪಾಡೋದು ಬಹಳ ಮುಖ್ಯ. ಜನರ ಪ್ರಾಣ ಉಳಿಸಲು ವೈದ್ಯಕೀಯ ಆಕ್ಸಿಜನ್ ಉತ್ಪಾದನೆಯತ್ತ ಗಮನ ಹರಿಸಲು ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಸರ್ಕಾರವಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಸೂಜಿ ರೀತಿ, ಬಿಜೆಪಿ ಕತ್ತರಿ ರೀತಿ; ನಾವು ಸಮಾಜ ಒಗ್ಗೂಡಿಸಿದರೆ ಅವರು ಕತ್ತರಿಸುತ್ತಾರೆ: ಡಿಕೆ ಶಿವಕುಮಾರ್
ಇದನ್ನೂ ಓದಿ: Karnataka Politics: 2021ರಲ್ಲಿ ಕರ್ನಾಟಕ ರಾಜಕಾರಣದಲ್ಲಾದ ಬೆಳವಣಿಗೆಗಳು