Karnataka Politics: 2021ರಲ್ಲಿ ಕರ್ನಾಟಕ ರಾಜಕಾರಣದಲ್ಲಾದ ಬೆಳವಣಿಗೆಗಳು
Year Ender 2021: ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿ ಹಲವರು ಸ್ಪರ್ಧೆಯಲ್ಲಿದ್ದರು. ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ಲೇಷಣೆಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ನಡೆದವು.
ಬೆಂಗಳೂರು: ರಾಜಕೀಯ ಬಹಳ ವಿಭಿನ್ನವಾದ ಕ್ಷೇತ್ರ. ರಾಜಕೀಯಕ್ಕೆ ಕಾಲಿಡುವುದು ಅಷ್ಟು ಸುಲಭದ ಮಾತಲ್ಲ. ಕಾಲಿಟ್ಟರು ಕಡಿಮೆ ಸಮಯದಲ್ಲಿ ಜನರ ಪ್ರೀತಿ ಗಳಿಸುವುದು ಅಸಾಧ್ಯ. 2021ರಲ್ಲಿ ರಾಜಕೀಯ ಸಾಕಷ್ಟು ಬೆಳವಣಿಗೆ ಕಂಡಿದೆ. ಟೀಕೆ, ಆರೋಪ, ಲೇವಡಿ, ಮನವಿಗಳ ಮೂಲಕ 2021 ಕಳೆದಿದೆ. 2021ರಲ್ಲಿ ಕರ್ನಾಟಕ ರಾಜಕಾರಣದಲ್ಲಾದ ಪ್ರಮುಖ ಬೆಳವಣಿಗೆ ಇಲ್ಲಿದೆ.
* ಮುಖ್ಯಮಂತ್ರಿ ಬದಲಾವಣೆ ಕರ್ನಾಟಕ ರಾಜಕಾರಣದ ಮಟ್ಟಿಗೆ 2021 ಎನ್ನುವುದು ಗೊಂದಲದಲ್ಲಿ ಆರಂಭವಾದ ವರ್ಷ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಸ್ಥಾಪಿಸಿದ ಯಡಿಯೂರಪ್ಪ ವಯಸ್ಸಿನ ಕಾರಣದಿಂದಾಗಿ ಗಾದಿಯಿಂದ ಕೆಳಗೆ ಇಳಿಯಬೇಕಾಯಿತು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿ ಹಲವರು ಸ್ಪರ್ಧೆಯಲ್ಲಿದ್ದರು. ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ಲೇಷಣೆಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ನಡೆದವು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಜಿದ್ದಾಜಿದ್ದಿ ರಾಜಕಾರಣ ನಡೆಸಿದರು. ಹೈಕಮಾಂಡ್ ಸೂಚನೆಯ ಮೇರೆಗೆ ಜುಲೈ 26ರಂದು ಯಡಿಯೂರಪ್ಪ ರಾಜೀನಾಮೆ ನೀಡಿದರು. ಪಟ್ಟಿಯಲ್ಲಿದ್ದ ಮುಂಚೂಣಿ ಹೆಸರುಗಳನ್ನು ಬದಿಗಿಟ್ಟಿ ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ಕೊಟ್ಟಿತು. 28ನೇ ಜುಲೈ, 2021ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿ, ಜನರು ಸಂಕಷ್ಟದಲ್ಲಿದ್ದಾಗ ಆದ ರಾಜಕೀಯ ಬೆಳವಣಿಗೆಗಳಿಂದ ಆಡಳಿತ ಯಂತ್ರದ ಸುಸೂತ್ರ ನಿರ್ವಹಣೆಗೆ ಧಕ್ಕೆಯಾಗಿದ್ದು ಜನರಲ್ಲಿ ಬೇಸರವನ್ನೂ ಉಂಟು ಮಾಡಿತ್ತು.
* ಸಚಿವ ಸಂಪುಟ ರಚನೆ ಸಂಕಷ್ಟ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ ಬಂದ ಬಸವರಾಜ ಬೊಮ್ಮಾಯಿ ಆಗಸ್ಟ್ 4ರಂದು ಮೊದಲ ಬಾರಿಗೆ ಸಚಿವ ಸಂಪುಟ ರಚಿಸಿದರು. ಈ ಸಂಪುಟದಲ್ಲಿ ಬಳ್ಳಾರಿ, ದಾವಣಗೆರೆ, ಹಾಸನ, ಕಲಬುರಗಿ, ರಾಯಚೂರು, ಮೈಸೂರು, ಯಾದಗಿರಿ, ಕೋಲಾರ, ರಾಮನಗರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲ ಎಂಬ ಆಕ್ಷೇಪಗಳು ಕೇಳಿಬಂದವು. ಪ್ರಾದೇಶಿಕವಾಗಿ ಬೆಂಗಳೂರು ನಗರಕ್ಕೆ ಮತ್ತು ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಅವಕಾಶ ಸಿಕ್ಕಿದೆ ಎಂದು ವಿಶ್ಲೇಷಿಸಲಾಯಿತು.
* ಸರ್ಕಾರಕ್ಕೆ ಮುಜುಗರ ಆಡಳಿತದ ಶೈಲಿಯನ್ನು ಬದಲಿಸಲು ಬಸವರಾಜ ಬೊಮ್ಮಾಯಿ ಯತ್ನಿಸಿದ್ದು, ಸಿಎಂ ಎಂದರೆ ಚೀಫ್ ಮಿನಿಸ್ಟರ್ ಅಲ್ಲ, ಕಾಮನ್ ಮ್ಯಾನ್ ಎಂದು ತಮ್ಮನ್ನು ತಾವು ವಿಶ್ಲೇಷಿಸಿಕೊಂಡಿದ್ದು ಜನರಿಗೆ ಇಷ್ಟವಾಯಿತು. ಆದರೆ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಹಗರಣದ ನಿರ್ವಹಣೆ, ಬಿಟ್ ಕಾಯಿನ್ ಹಗರಣ, ಗುತ್ತಿಗೆದಾರರು ಮಾಡಿದ ಶೇ 40ರ ಕಮಿಷನ್ ಆರೋಪ, ಭೈರತಿ ಬಸವರಾಜ್ ವಿರುದ್ಧ ಕೇಳಿಬಂದ ಭೂ ಹರರಣದ ಆರೋಪಗಳು ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸಾರಿ ಹೇಳಿದವು.
* ವಿಧಾನ ಪರಿಷತ್ ಚುನಾವಣೆ ಉಪಚುನಾವಣೆಗಳನ್ನು ಆಡಳಿತ ಪಕ್ಷದ ಕಾರ್ಯವೈಖರಿಗೆ ಜನರು ನೀಡುವ ಫಲಿತಾಂಶ ಎಂದು ವಿಮರ್ಶಿಸುವುದು ವಾಡಿಕೆ. ನಾಲ್ಕು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಎರಡು ಕ್ಷೇತ್ರಗಳಲ್ಲಿ (ಬಸವಕಲ್ಯಾಣ, ಸಿಂದಗಿ) ಮಾತ್ರ ಬಿಜೆಪಿ ಜಯಗಳಿಸಲು ಸಾಧ್ಯವಾಯಿತು. ಇನ್ನೆರೆಡು ಕ್ಷೇತ್ರಗಳಲ್ಲಿ (ಮಸ್ಕಿ, ಹಾನಗಲ್) ಕಾಂಗ್ರೆಸ್ ವಿಜಯಿಯಾಯಿತು. ಈ ಹಿಂದೆ ತನ್ನದೇ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದ ಸಿಂದಗಿಯನ್ನೂ ಜೆಡಿಎಸ್ ಕಳೆದುಕೊಂಡಿತು. ವಿಧಾನ ಪರಿಷತ್ ಚುನಾವಣೆಗಳಲ್ಲಿಯೂ ಹೆಚ್ಚೂ ಕಡಿಮೆ ಇದೇ ರೀತಿಯ ಫಲಿತಾಂಶ ಪುನರಾವರ್ತನೆಯಾಯಿತು. ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬರು ಜಯಗಳಿಸಿದರು. ಇದು ಬಿಜೆಪಿಗೆ ಮುಖ ಉಳಿಸಿಕೊಳ್ಳುವಂಥ ಫಲಿತಾಂಶವಾಗಿದ್ದರೂ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಹೇಳಿಕೊಂಡಿದ್ದಂಥ ಮುನ್ನಡೆ ಸಿಗಲಿಲ್ಲ.
* ದುರ್ಬಲಗೊಂಡಜೆಡಿಎಸ್ ಜೆಡಿಎಸ್ ಪಾಲಿಗೆ 2021 ಹಿನ್ನಡೆಯ ವರ್ಷ. ಉಪಚುನಾವಣೆ ನಡೆದ ಎಲ್ಲ ನಾಲ್ಕೂ ಸ್ಥಾನಗಳಲ್ಲಿ ಜೆಡಿಎಸ್ ಸೋಲನುಭವಿಸಿತು. ಪರಿಷತ್ ಚುನಾವಣೆಯಲ್ಲಿಯೂ ಹೇಳಿಕೊಳ್ಳುವಂಥ ಮುನ್ನಡೆ ಸಿಗಲಿಲ್ಲ. ಪರಿಷತ್ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಹೊಂದಾಣಿಕೆಯ ಮಾತು ಆಡಿ, ಸೋತ ನಂತರ ಜೆಡಿಎಸ್ ನಾಯಕರು ಅದೇ ಪಕ್ಷವನ್ನು ದೂರಿದರು. ಗೋಕಾಕದ ಪ್ರಭಾವಿ ನಾಯಕ ಅಶೋಕ ಪೂಜಾರಿ ಸೇರಿದಂತೆ ಜೆಡಿಎಸ್ನ ಹಲವು ನಾಯಕರು ಕಾಂಗ್ರೆಸ್, ಬಿಜೆಪಿಗೆ ಸೇರಿದರು.
ಇದನ್ನೂ ಓದಿ
ಕಾಂಗ್ರೆಸ್ ಶಾಸಕರಿಂದ ಪೊಲೀಸರ ಪ್ಯಾಂಟ್ ಒದ್ದೆಯಾಗಬಹುದು ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ನೋಟಿಸ್ ಜಾರಿ
ಆರೋಗ್ಯದ ದೃಷ್ಟಿಯಿಂದ ಸಿಎಂ ಬೊಮ್ಮಾಯಿ ಮನೆಯಲ್ಲೇ ಇರಲಿ; ಕನಿಷ್ಠ 20 ದಿನ ರೆಸ್ಟ್ ಪಡೆಯಲಿ: ಎಂಪಿ ಕುಮಾರಸ್ವಾಮಿ
Published On - 9:30 am, Wed, 29 December 21