ಕೇರಳ ಸಿಎಂ ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಿಡಿ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತೀವ್ರವಾಗಿ ಖಂಡಿಸಿದ್ದಾರೆ. ಶಿವಗಿರಿಯಲ್ಲಿ ನೀಡಿದ ಭಾಷಣದಲ್ಲಿ ಸನಾತನ ಧರ್ಮ ಮತ್ತು ನಾರಾಯಣ ಗುರುಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದು, ವಿಜಯನ್ ಅವರ ಹೇಳಿಕೆ ದುರುದ್ದೇಶಪೂರಿತವಾಗಿದೆ ಎಂದು ಖಂಡಿಸಿದ್ದಾರೆ.
ಬೆಂಗಳೂರು, ಜನವರಿ 04: ಸಮಾಜ ಸುಧಾರಕ ನಾರಾಯಣ ಗುರುಗಳನ್ನು ಸನಾತನ ಧರ್ಮದ ಶತ್ರು ಎಂದು ಬಿಂಬಿಸುವ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಅವಮಾನಿಸಿದ್ದಾರೆ. ಹೀಗಾಗಿ ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು ಎಂದು ಶಾಸಕ ವಿ. ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆೆ
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶಾಸಕ ವಿ. ಸುನೀಲ್ ಕುಮಾರ್, ನಾರಾಯಣ ಗುರುಗಳನ್ನು ಅವಮಾನಿಸು ಮೂಲಕ ಪಿಣರಾಯಿ ವಿಜಯನ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರ ಹೇಳಿಕೆ ದುರುದ್ದೇಶಪೂರಿತ. ತರ್ಕಬದ್ಧ ಚಿಂತನೆಯನ್ನು ಉತ್ತೇಜಿಸುವ ನೆಪದಲ್ಲಿ ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ವಾಸ್ತವಿಕ ಸಂಗತಿಗಳನ್ನು ವರಿಷ್ಠರಿಗೆ ವಿವರಿಸಲು ದೆಹಲಿ ಹೋಗಿದ್ದೆ, ಚಾಡಿ ಹೇಳಲಲ್ಲ: ಬಿವೈ ವಿಜಯೇಂದ್ರ
ಸನಾತನ ಧರ್ಮವನ್ನು ದ್ವೇಷಿಸಬೇಕು ಎಂಬುದು ವಿಜಯನ್ ಅವರು ಶಿವಗಿರಿ ಸಮಾವೇಶದಲ್ಲಿನ ಭಾಷಣದ ತಿರುಳಾಗಿದೆ. ಅವರ ಹೇಳಿಕೆ ಹಿಂದೂಗಳನ್ನು ಘಾಸಿಗೊಳಿಸಿದೆ. ಅವರ ಮಾತುಗಳು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್ ಹೇಳಿಕೆ ಮುಂದುವರಿದ ಭಾಗದಂತಿದೆ ಎಂದಿದ್ದಾರೆ.
ಹಿಂದೂಗಳ ಮೇಲೆ ನಿರಂತರ ದಾಳಿ, ದಬ್ಬಾಳಿಕೆ, ಕೊಲೆಯಂತಹ ಪೈಶಾಚಿಕ ಕೃತ್ಯ ನಡೆಸಿಕೊಂಡು ಹಿಂದೂಗಳ ಮೇಲಿನ ಅಕ್ರಮಣವನ್ನು ಪೋಷಿಸಿದ ಫ್ಯಾಸಿಸ್ಟ್ ಪಿಣರಾಯಿ ನೇತೃತ್ವದ ಕೇರಳ ಸರ್ಕಾರ ಇದೀಗ ಹಿಂದೂ ಧರ್ಮ ಪ್ರತಿಪಾದಕರನ್ನು ನಿಂದಿಸಿ, ಧರ್ಮದ ಅವಹೇಳನಕ್ಕೆ ಮುಂದಾಗಿದೆ. ಹಿಂದೂ ಸಮಾಜ ಸುಧಾರಕರ ವಿರುದ್ಧ ಕೇರಳ ಸರ್ಕಾರ ಮಾತನಾಡಲು ಆರಂಭಿಸಿದೆ. ಕೇರಳ ಸಿಎಂ ವಿರುದ್ಧ ಸಮಸ್ತ ಹಿಂದೂಗಳು ತರಾಟೆಗೆ ತೆಗೆದುಕೊಂಡು ಅವರ ವಿರುದ್ದ ಎದ್ದೇಳಬೇಕು ಎಂದು ಹೇಳಿದ್ದಾರೆ.
ಹಿಂದೂ ಧರ್ಮ ಪ್ರತಿಪಾದಕರ ಬಗ್ಗೆ ಬಾಲಿಶ: ಹೇಳಿಕೆ ನೀಡುವ ಪಿಣರಾಯಿ ವಿಜಯನ್ಗೆ ಅನ್ಯ ಧರ್ಮದ ಧರ್ಮಗುರುಗಳ ಬಗ್ಗೆೆ ಇಂತಹ ಮಾತುಗಳನ್ನು ಹೇಳಲು ಧೈರ್ಯವಿದೆಯೇ? ಈ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಯಲ್ಲಿ ಹಿಂದೂಗಳ ನಂಬಿಕೆಗೆ ಸವಾಲು ಹಾಕಲು ಪಿಣರಾಯಿ ಯತ್ನಿಸಿದ್ದರು.
ಇದನ್ನೂ ಓದಿ: ರಾಜ್ಯ ಸರ್ಕಾರದ ವೈಫಲ್ಯ ಮತ್ತು ದುರಾಡಳಿತದಿಂದ ಜನ ಸಾವಿನ ಮೊರೆ ಹೋಗುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ
ಇದೀಗ ನಾರಾಯಣ ಗುರುಗಳು ಸನಾತನ ಧರ್ಮದ ವಕ್ತಾರರೂ ಅಲ್ಲ, ಸಾಧಕರೂ ಅಲ್ಲ ಎಂದು ಪುಣ್ಯಭೂಮಿ ಶಿವಗಿರಿಯಲ್ಲಿ ಹೇಳಿ ಸನಾತನ ಧರ್ಮ ಮತ್ತು ನಾರಾಯಣ ಗುರುಗಳ ಧಾರ್ಮಿಕ ಮೌಲ್ಯಗಳನ್ನು ತುಳಿಯುವ ನೀಚ, ಹೀನ ಕೃತ್ಯಕ್ಕೆ ಇಳಿದಿದೆ. ಇದು ಇಡೀ ಹಿಂದೂ ಸಮಾಜಕ್ಕೆ ಪಿಣರಾಯಿ ಮಾಡಿದ ಮಹಾದ್ರೋಹ ಎಂದು ಹರಿಹಾಯ್ದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Sat, 4 January 25