ಪ್ರತ್ಯೇಕ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ ಮನವೊಲಿಕೆಗೆ ಮುಂದಾದ ಸಿಎಂ ಬಸವರಾಜ ಬೊಮ್ಮಾಯಿ: ಕಾಂಗ್ರೆಸ್ ವಲಯದಲ್ಲಿ ಚಿಂತನ-ಮಂಥನ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2022 | 2:56 PM

‘ಅವರಿಗೆ ಸುಮ್ಮನಿರಲು ಹೇಳಿ. ಮುಂದೆ ಎಲ್ಲವನ್ನೂ ನಾವು ಸರಿ ಮಾಡೋಣ’ ಎಂದು ರೆಡ್ಡಿ ಸೋದರರಿಗೆ ಬೊಮ್ಮಾಯಿ ಭರವಸೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರತ್ಯೇಕ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ ಮನವೊಲಿಕೆಗೆ ಮುಂದಾದ ಸಿಎಂ ಬಸವರಾಜ ಬೊಮ್ಮಾಯಿ: ಕಾಂಗ್ರೆಸ್ ವಲಯದಲ್ಲಿ ಚಿಂತನ-ಮಂಥನ
ಜಿ.ಜನಾರ್ದನರೆಡ್ಡಿ (ಎಡಚಿತ್ರ) ಮತ್ತು ಸಿಎಂ ಬಸವರಾಜ ಬೊಮ್ಮಾಯಿ (ಬಲಚಿತ್ರ)
Follow us on

ಬೆಳಗಾವಿ: ಬಿಜೆಪಿಯಿಂದ ಮುನಿಸಿಕೊಂಡು ದೂರ ಹೋಗಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಹೆಸರಿನ ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ, ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ (G Janardhana Reddy) ಅವರ ಮನವೊಲಿಕೆಗೆ ಬಿಜೆಪಿ ಪ್ರಯತ್ನ ಆರಂಭಿಸಿದೆ. ರೆಡ್ಡಿ ಮನವೊಲಿಕೆ ಪ್ರಯತ್ನಕ್ಕೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮುಂದಾಗಿದ್ದಾರೆ. ಈ ಸಂಬಂಧ ನಿನ್ನೆಯಷ್ಟೇ ಶಾಸಕ ಹಾಗೂ ರೆಡ್ಡಿ ಸೋದರ ಸೋಮಶೇಖರ್ ರೆಡ್ಡಿಗೆ ಕರೆ ಮಾಡಿ ಸಿಎಂ ಬೊಮ್ಮಾಯಿ ಚರ್ಚಿಸಿದ್ದರು.

‘ದೆಹಲಿಗೆ ಹೋಗಿ ನಾನೇ ನಡ್ಡಾ ಹಾಗೂ ಅಮಿತ್ ಶಾ ಜೊತೆ ಮಾತುಕತೆ ನಡೆಸುತ್ತೇನೆ. ನಿಮ್ಮ ಸೋದರ ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. ಆದರೂ ಸ್ವಲ್ಪ ನಿಧಾನವಾಗಿ ಮುನ್ನಡೆಯಲು ಹೇಳಿ. ದೆಹಲಿಯಿಂದ ಬಂದ ಮೇಲೆ ಜನಾರ್ದನ ರೆಡ್ಡಿ ಜೊತೆ ಮಾತುಕತೆ ನಡೆಸುತ್ತೇನೆ. ಅಲ್ಲಿಯವರೆಗೆ ಅವರಿಗೆ ಸುಮ್ಮನಿರಲು ಹೇಳಿ. ಮುಂದೆ ಎಲ್ಲವನ್ನ ನಾವು ಸರಿ ಮಾಡೋಣ’ ಎಂದು ಬೊಮ್ಮಾಯಿ ಭರವಸೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

‘ಮೊದಲು ನೀವು ಜನಾರ್ದನರೆಡ್ಡಿ ಅವರೊಂದಿಗೆ ಮಾತನಾಡಿ. ಯಾವುದೇ ದುಡುಕಿನ ನಿರ್ಧಾರ ಬೇಡ ಎಂದು ತಿಳಿಸಿ’ ಎಂದು ಸಿಎಂ ಬೊಮ್ಮಾಯಿ ಸೂಚಿಸಿದ್ದರು. ಅದರಂತೆ ಜನಾರ್ದನರೆಡ್ಡಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದ ಸೋಮಶೇಖರ ರೆಡ್ಡಿ, ಮುಖ್ಯಮಂತ್ರಿಯ ಸಂದೇಶವನ್ನು ರವಾನಿಸಿದ್ದರು ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ವಲಯದಲ್ಲಿಯೂ ಚರ್ಚೆ ಚುರುಕು

ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಹಿನ್ನೆಲೆಯಲ್ಲಿ ವಿಧಾನಸಭೆ ಮೊಗಸಾಲೆಯಲ್ಲಿ ಕಾಂಗ್ರೆಸ್ ಸದಸ್ಯರಿಂದಲೂ ಚರ್ಚೆ ಚುರುಕಾಗಿದೆ. ಹೊಸ ಪಕ್ಷ ಸ್ಥಾಪನೆಯಿಂದ ಆಗಬಹುದಾದ ಲಾಭ-ನಷ್ಟದ ಬಗ್ಗೆ ಚರ್ಚೆ ಆರಂಭವಾಗಿದೆ. ರೆಡ್ಡಿ ಇದೇ ವೇಗದಲ್ಲಿ ಮುಂದುವರಿದು, ಹೊಸ ಪಕ್ಷಕ್ಕೆ ಜನಬೆಂಬಲ ಸಿಕ್ಕರೆ ಬಿಜೆಪಿಗೆ ಕಷ್ಟವಾಗುತ್ತದೆ ಎಂಬ ಅಭಿಪ್ರಾಯವು ಕಾಂಗ್ರೆಸ್ ಪಕ್ಷದ ಶಾಸಕರ ವಲಯದಲ್ಲಿ ಕೇಳಿಬರುತ್ತಿದೆ.

ಈ ಹಿಂದೆ ಯಡಿಯೂರಪ್ಪ ಹಾಗೂ ಶ್ರೀರಾಮುಲು ಬಿಜೆಪಿಯಿಂದ ದೂರ ಹೋಗಿ ಸ್ವಂತ ಪಕ್ಷ ಕಟ್ಟಿದಾಗ ಅದು ಚುನಾವಣೆಯ ಮೇಲೆ ಪರಿಣಾಮ ಬೀರಿತ್ತು. ಬಿಜೆಪಿಯ ಕೆಲ ಶಾಸಕರಿಗೆ ಚುನಾವಣೆ ಗೆಲ್ಲುವುದು ಕಷ್ಟವಾಗಿತ್ತು. ರೆಡ್ಡಿ ಮುಂದುವರಿದರೆ ಈ ಬಾರಿಯೂ ಅದೇ ರೀತಿ ಬಿಜೆಪಿಗೆ ಕಷ್ಟ ಆಗಬಹುದು. ಆದರೆ ರೆಡ್ಡಿ ಅವರ ಹೊಸ ಪಕ್ಷದಿಂದ ಕಾಂಗ್ರೆಸ್ ಮತಗಳಿಗೆ ಏನೂ ತೊಂದರೆಯಿಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿದೆ.

ರೆಡ್ಡಿ ಸೋದರರ ಸುದೀರ್ಘ ಚರ್ಚೆ

ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಆರಂಭವಾಗುವ ಮೊದಲು ಶಾಸಕರಾದ ಕರುಣಾಕರ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಪರಸ್ಪರ ಸುದೀರ್ಘ ಚರ್ಚೆ ನಡೆಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಸದನದಲ್ಲೇ ರೆಡ್ಡಿ ಸಹೋದರೊಂದಿಗೆ ಬಿಜೆಪಿ ಶಾಸಕರು ಸಹ ಮಾತುಕತೆ ನಡೆಸಿದರು.

ಇದನ್ನೂ ಓದಿ: ರೆಡ್ಡಿ ಘೋಷಿಸಿದ ಹೊಸ ಪಕ್ಷ ಕಾಂಗ್ರೆಸ್-ಬಿಜೆಪಿ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ಲಾಭ, ನಷ್ಟದ ಲೆಕ್ಕಾಚಾರ

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Mon, 26 December 22