CM Ibrahim: ಸಿಎಂ ಇಬ್ರಾಹಿಂ, ಎಸ್​ಆರ್​ ಪಾಟೀಲ ಭೇಟಿ ಅಂತ್ಯ: ವಿವರ ನೀಡದ ಪಾಟೀಲ, ಫಲಪ್ರದ ಎಂದ ಇಬ್ರಾಹಿಂ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 30, 2022 | 8:25 PM

SR Patil: ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್​.ಆರ್.ಪಾಟೀಲ, ‘ಸಭೆಯಲ್ಲಿ ಇಬ್ರಾಹಿಂ ಅವರೊಂದಿಗೆ ಚರ್ಚಿಸಿದ ಎಲ್ಲ ವಿಷಯಗಳನ್ನೂ ಈಗ ಹೇಳಲು ಆಗುವುದಿಲ್ಲ‘ ಎಂದರು

CM Ibrahim: ಸಿಎಂ ಇಬ್ರಾಹಿಂ, ಎಸ್​ಆರ್​ ಪಾಟೀಲ ಭೇಟಿ ಅಂತ್ಯ: ವಿವರ ನೀಡದ ಪಾಟೀಲ, ಫಲಪ್ರದ ಎಂದ ಇಬ್ರಾಹಿಂ
ಕಾಂಗ್ರೆಸ್ ನಾಯಕರಾದ ಎಸ್​.ಆರ್.ಪಾಟೀಲ ಮತ್ತು ಸಿ.ಎಂ.ಇಬ್ರಾಹಿಂ
Follow us on

ಹುಬ್ಬಳ್ಳಿ: ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಸ್ಥಾನ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ (CM Ibrahim) ಭಾನುವಾರ (ಜ.30) ನಗರದಲ್ಲಿ ಕಾಂಗ್ರೆಸ್​ ಪಕ್ಷದ ಪ್ರಮುಖ ನಾಯಕರಾದ ಎಸ್.ಆರ್.ಪಾಟೀಲ (SR Patil) ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್​.ಆರ್.ಪಾಟೀಲ, ‘ಸಭೆಯಲ್ಲಿ ಇಬ್ರಾಹಿಂ ಅವರೊಂದಿಗೆ ಚರ್ಚಿಸಿದ ಎಲ್ಲ ವಿಷಯಗಳನ್ನೂ ಈಗ ಹೇಳಲು ಆಗುವುದಿಲ್ಲ. ಸಮಯ ಸಂದರ್ಭ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ವೇಟ್ ಆ್ಯಂಡ್ ಸಿ’ ಎಂದರು. ಇಲ್ಲಿಗೆ ಬಂದು ಇಬ್ರಾಹಿಂ ಜೊತೆಗೆ ಮಾತನಾಡು ಎಂದು ನನಗೆ ಯಾರೂ ಹೇಳಿಲ್ಲ. ನಾನು ಸ್ವಯಿಚ್ಛೆಯಿಂದ, ಪಕ್ಷದ ಹಿತದೃಷ್ಟಿಯಿಂದ ಮತ್ತು ಸ್ನೇಹಿತನ ನೋವನ್ನು ಆಲಿಸಲು ಬಂದಿದ್ದೇನೆ ಎಂದು ವಿವರಿಸಿದರು.

ಇಬ್ರಾಹಿಂ ಅವರಿಗೆ ವಿಧಾನ ಪರಿಷತ್​ನ ವಿಪಕ್ಷ ನಾಯಕನಾಗಬೇಕೆನ್ನುವ ಆಸೆಯಿತ್ತು. ಅವರು ಪಕ್ಷದಲ್ಲಿಯೇ ಉಳಿದುಕೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಇಬ್ರಾಹಿಂ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನಗೆ ಸದ್ಯ ಯಾವುದೇ ಅಸಮಾಧಾನ ಇಲ್ಲ. ಚುನಾವಣೆ ಸಮಯದಲ್ಲಿ ಒಬ್ಬ ಕಾರ್ಯಕರ್ತರನು ಪಕ್ಷ ಬಿಟ್ಟು ಹೋಗಬಾರದು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು ಎನ್ನುವುದಷ್ಟೇ ನನ್ನ ಆದ್ಯತೆ ಎಂದರು.

ತಮಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ವಿಚಾರ ಪ್ರಸ್ತಾಪಿಸಿದ ಅವರು, ನಾನು ಅಧಿಕಾರದಲ್ಲಿ ಇದ್ದಾಗ ಉತ್ತರ ಕರ್ನಾಟಕದ ಬಹಳಷ್ಟು ವಿಚಾರವಾಗಳ ಬಗ್ಗೆ ಮಾತನಾಡಿದ್ದೆ. ಆದರೆ ನಮ್ಮ ಪಕ್ಷದಲ್ಲಿ ಅದನ್ನು ಮನ್ನಣೆಗೆ ತೆಗೆದುಕೊಂಡಿಲ್ಲ. ಇದು ನನಗೆ ಮಾಡಿದ ಅನ್ಯಾಯಕ್ಕಿಂತ ನಮ್ಮ ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯ ಎಂದು ವಿಶ್ಲೇಷಿಸಿದರು.

ಭೇಟಿ ಫಲಪ್ರದ: ಇಬ್ರಾಹಿಂ
ಸಭೆಯ ಬಳಿಕ ಮಾತನಾಡಿದ ಸಿ.ಎಂ.ಇಬ್ರಾಹಿಂ, ಎಸ್​.ಆರ್​.ಪಾಟೀಲ ಜೊತೆಗಿನ ನಮ್ಮ ಸಭೆ ಫಲಪ್ರದವಾಗಿದೆ ಎಂದರು. ನನಗೆ ಬಹಳಷ್ಟು ದೊಡ್ಡವರ ಬೆಂಬಲವಿದೆ. ಆದರೆ, ನಾನು ಯಾರ ಹೆಸರನ್ನೂ ಬಹಿರಂಗಪಡಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಅವರು ಮತ್ತೆ ಟಾಂಗ್ ಕೊಟ್ಟರು. ಕೂಡಲಸಂಗಮದಲ್ಲಿ ‘ಅಲಿಂಗಾ’ (ಅಲ್ಪಸಂಖ್ಯಾತ-ಲಿಂಗಾಯತ) ಸಮಾವೇಶವನ್ನು ಮಾಡುತ್ತೇನೆ. ‘ಅಲಿಂಗ’ ಸಮಾವೇಶಕ್ಕೆ ಎಸ್.ಆರ್.ಪಾಟೀಲ ಸಹ ಬರುತ್ತಾರೆ ಎಂದರು. ನಿಮ್ಮ ಜೊತೆಗೆ ಎಸ್​.ಆರ್.ಪಾಟೀಲ ಸಹ ಕಾಂಗ್ರೆಸ್ ಬಿಡುತ್ತಾರಾ ಎಂಬ ಪ್ರಶ್ನೆಗೆ, ‘ಕಾದುನೋಡಿ’ ಎಂದು ನಕ್ಕರು.

‘ನೀವು ಪಕ್ಷ ಬಿಡಬೇಡಿ. ನನಗೆ ಬಹಳ ನೋವಾಗುತ್ತಿದೆ’ ಎಂದು ಪಾಟೀಲ ಬೇಸರ ವ್ಯಕ್ತಪಡಿಸಿದರು. ’ಆದರೆ ಅದು ಮುಗಿದ ಅಧ್ಯಾಯ. ಒಂದು ಸಲ ಡ್ಯಾಂ ಒಡೆದು ನೀರು ಹರಿದು ಹೋದರೆ ಮುಗಿತು. ಮುಂದಿನ ಐದಾರು ದಿನಗಳಲ್ಲಿ ಕೆಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತೇನೆ. ನನಗೆ ಸಿದ್ದರಾಮಯ್ಯರಿಂದ ಯಾವುದೇ ಕರೆಯೂ ಬಂದಿಲ್ಲ. ನನಗೆ ಅವರಿಂದ ಯಾವ ನಿರೀಕ್ಷೆಯೂ ಇಲ್ಲ. ಜೆಡಿಎಸ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮೇಲೆ ಒಲವಿದೆ. ನೋಡೋಣ ಮುಂದೆ ಎಲ್ಲವನ್ನೂ ಹೇಳುತ್ತೇನೆ’ ಎಂದರು.

ಇದನ್ನೂ ಓದಿ: ವಿಷಕಂಠನಾಗಿದ್ದೇನೆ, ಮತ್ತೆ ಕಾಂಗ್ರೆಸ್​ಗೆ ಹೋಗೋ ಪ್ರಶ್ನೆನೇ ಇಲ್ಲ: ಕಣ್ಣೀರು ಹಾಕಿದ ಸಿಎಂ ಇಬ್ರಾಹಿಂ
ಇದನ್ನೂ ಓದಿ: ಸಿಎಂ ಇಬ್ರಾಹಿಂಗೆ ಕೈತಪ್ಪಿದ ಪರಿಷತ್ ವಿಪಕ್ಷ ನಾಯಕ ಸ್ಥಾನ: ಮುಸ್ಲಿಂ ಸಮುದಾಯದ ನಾಯಕರ ಅಸಮಾಧಾನ

Published On - 8:24 pm, Sun, 30 January 22