ವಿಷಕಂಠನಾಗಿದ್ದೇನೆ, ಮತ್ತೆ ಕಾಂಗ್ರೆಸ್ಗೆ ಹೋಗೋ ಪ್ರಶ್ನೆನೇ ಇಲ್ಲ: ಕಣ್ಣೀರು ಹಾಕಿದ ಸಿಎಂ ಇಬ್ರಾಹಿಂ
ನನಗೆ ವಿಧಾನ ಪರಿಷತ್ ಸದಸ್ಯ (Legislative Council) ಸ್ಥಾನ ಸಿಗಲು ತಾವೇ ಕಾರಣ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಾನು ನಾಳೆಯೇ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ನಾನು ಹೊರಗೆ ಬಂದಿದ್ದೇನೆ. ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಶಾಪ ತುಂಬಾ ಕೆಟ್ಟದ್ದು. ಅದು ಇವಾಗ ತಟ್ಟುತ್ತಿದೆ. ನಾನು ವಿಷಕಂಠನಿದ್ದಂತೆ. ಇಲ್ಲಿಯವರೆಗೆ ಎಲ್ಲವನ್ನೂ ನುಂಗಿಕೊಂಡಿದ್ದೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ (CM Ibrahim) ಹೇಳಿದರು. ನನಗೆ ವಿಧಾನ ಪರಿಷತ್ ಸದಸ್ಯ (Legislative Council) ಸ್ಥಾನ ಸಿಗಲು ತಾವೇ ಕಾರಣ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಾನು ನಾಳೆಯೇ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.
ಸಿದ್ದರಾಮಯ್ಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲಿ. ಯಾರು ಗೆಲ್ಲುತ್ತಾರೆಂದು ನೋಡೋಣ ಎಂದು ಸವಾಲು ಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಳ ದೊಡ್ಡವರು. ಅವರು ನಮ್ಮಂಥವರನ್ನೆಲ್ಲಾ ಯಾಕೆ ಮಾತಾಡಿಸ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೆ ಏನೂ ಆಗಿಲ್ಲ ಎಂದು ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.
ಹಿರಿಯ ನಾಯಕ ಎಸ್.ಆರ್.ಪಾಟೀಲರನ್ನು ಒಮ್ಮೆ ಭೇಟಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಆಗುತ್ತೋ ನೋಡಬೇಕಿದೆ. ನಮ್ಮ ಜತೆ ಬರುವವರನ್ನು ಕರೆದುಕೊಂಡು ಹೋಗುತ್ತೇನೆ. ಇಲ್ಲಿ ‘ಅಲಿಂಗ’ ಮಾಡುತ್ತೇನೆ, ಅಲ್ಲಿ ‘ಅಗೌ’ ಮಾಡುತ್ತೇನೆ. ‘ಅಲಿಂಗ’ ಎಂದರೆ ಅಲ್ಪಸಂಖ್ಯಾತ-ಲಿಂಗಾಯತ ಮತ್ತು ‘ಅಗೌ’ ಎಂದರೆ ಅಲ್ಪಸಂಖ್ಯಾತ-ಗೌಡ ಎಂದು ಅರ್ಥ ಎಂದರು. ಅವರು ಅಹಿಂದ ಮಾಡಿದ್ದರು ಅಲ್ಲವೇ ಎಂದು. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಇಬ್ರಾಹಿಂ ಟಾಂಗ್ ನೀಡಿದರು.
ನನ್ನನ್ನು ನೀವು ಬೆಳೆಸಿದ್ದೀರಿ. ಇನ್ನು ಮುಂದೆಯೂ ನೀವು ಕೈ ಹಿಡಿಯಬೇಕು ಎಂದು ಇಬ್ರಾಹಿಂ ಅವರು ಮಾಧ್ಯಮ ಪ್ರತಿನಿಧಿಗಳ ಎದುರು ಭಾವಕರಾಗಿ ಕಣ್ಣೀರು ಹಾಕಿದರು. ನಾನು ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿದ್ದೇನೆ. ಮತ್ತೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ. ನನ್ನ ಜೊತೆಗೆ ಯಾರೆಲ್ಲಾ ಬರುತ್ತಾರೋ ಅವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಕಣ್ಣೀರು ಹಾಕಿದರು.
ಮುಸ್ಲಿಂ ನಾಯಕರ ಅಸಮಾಧಾನ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನಮಾನ ಕೈತಪ್ಪಿರುವ ಕುರಿತು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ನಾಯಕರು (Muslim Leaders) ನಗರದ ನಂದಿದುರ್ಗ ರಸ್ತೆಯಲ್ಲಿರುವ ಖಾದ್ರಿಯಾ ಮಸೀದಿಯಲ್ಲಿ ಸುಮಾರು 2 ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದರು. ಮುಸ್ಲಿಂ ಸಮುದಾಯಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ಅಧ್ಯಕ್ಷರ ಸ್ಥಾನ ಕೈತಪ್ಪಿದ ವಿಚಾರಕ್ಕೆ ಬಹುತೇಕ ಮುಖಂಡರು ಕಾಂಗ್ರೆಸ್ ವಿರುದ್ಧ ಸಿಟ್ಟಿನಲ್ಲಿ ಮಾತನಾಡಿದರು. ಮುಸ್ಲಿಂ ಸಮುದಾಯದ ವಿಚಾರದಲ್ಲಿ ಕಾಂಗ್ರೆಸ್ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ಆದರೂ ನಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪರ ವಹಿಸಿಕೊಂಡು ಮಾತನಾಡಿದ ಹಲವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತ ಶಾಸಕರು, ಸಂಸದರು, ಪರಿಷತ್ ಸದಸ್ಯರ ಸಭೆ ನಡೆಸಿ, ಇಬ್ರಾಹಿಂಗೆ ಸೂಕ್ತ ಸ್ಥಾನ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು. ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಬಿಡಬಾರದು, ಪಕ್ಷದಲ್ಲಿಯೇ ಉಳಿಯಬೇಕೆಂದು ಸಿ.ಎಂ.ಇಬ್ರಾಹಿಂ ಅವರಿಗೆ ಸಲಹೆ ನೀಡಲಾಯಿತು. ಮೌಲಾನ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನ ಏಜಾಝ್ ಅಹ್ಮದ್ ನದ್ವಿ, ಮೌಲಾನ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನ ಸೈಯದ್ ತನ್ವೀರ್ ಪೀರಾ ಹಾಶ್ಮಿ ಇತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Karnataka Politics: ಸಿಎಂ ಇಬ್ರಾಹಿಂ ನಿವಾಸಕ್ಕೆ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಭೇಟಿ ಇದನ್ನೂ ಓದಿ: ಸಿಎಂ ಇಬ್ರಾಹಿಂ ನನ್ನ ಸ್ನೇಹಿತ, ಅವರು ಕಾಂಗ್ರೆಸ್ನಲ್ಲಿರುತ್ತಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ