ಹುಬ್ಬಳ್ಳಿ: ಸ್ವಯಂಪ್ರೇರಿತರಾಗಿ ಬಸ್ ನಿಲ್ದಾಣದ ಸ್ವಚ್ಛತೆಗೆ ನಿಂತ ಸಾರಿಗೆ ಸಿಬ್ಬಂದಿ; ಶುಚಿತ್ವ ಕಾಪಾಡಲು ಮನವಿ
ಸಿಬ್ಬಂದಿಗಳು ತಮ್ಮ ನಿತ್ಯದ ಕರ್ತವ್ಯ ನಿರ್ವಹಿಸುವ ಜೊತೆಗೆ ಇಂತಹ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಸಿಬಿಟಿ ಬಸ್ ನಿಲ್ದಾಣ ಇತ್ತೀಚೆಗಷ್ಟೇ ನಿರ್ಮಾಣವಾಗಿದೆ. ಆದರೆ ಹೊಸ ಬಸ್ ನಿಲ್ದಾಣದ ಚಿತ್ರಣ ಗುಟ್ಕಾ ತಿನ್ನುವವರ ಕೈಯಲ್ಲಿ ಸಿಲುಕಿ ಸಂಪೂರ್ಣ ಹಾಳಾಗಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಸ್ವಚ್ಚತೆಯನ್ನು ಮಾಡಿದ್ದಾರೆ. ನಗರ ಸಾರಿಗೆ ಸಿಬ್ಬಂದಿ ಸಿಬಿಟಿ ಬಸ್ ನಿಲ್ದಾಣದ ಅವ್ಯವಸ್ಥೆಗೆ ಬೇಸತ್ತು ಬೆಳ್ಳಂಬೆಳಿಗ್ಗೆ ಸ್ವಚ್ಚತೆ ಮಾಡಲು ಮುಂದಾಗಿ ಸ್ವಚ್ಛತೆಯ ಕೆಲಸ ಮಾಡಿದ್ದಾರೆ.
ಬಸ್ ನಿಲ್ದಾಣವನ್ನು ತೊಳೆಯುವ ಮೂಲಕ ಹಾಗೂ ಕಸ ಗುಡಿಸುವ ಮೂಲಕ ಸ್ವಚ್ಚತೆ ಮಾಡಿದ್ದಾರೆ. ಎಲ್ಲೆಂದರಲ್ಲಿ ಉಗುಳಿರುವ ಗುಟ್ಕಾ ಕಲೆಯನ್ನು ಕೈಯಲ್ಲಿ ಬ್ರಷ್ ಹಿಡಿದುಕೊಂಡು ಸ್ವಚ್ಛ ಮಾಡುವ ಮೂಲಕ ಗುಟ್ಕಾ, ಎಲೆ ಅಡಿಕೆ ತಿಂದು ಉಗುಳುವವರಿಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ.
ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ ಅವರ ಮಾರ್ಗದರ್ಶನದಲ್ಲಿ ಇಂತಹ ಮಹತ್ವದ ಕಾರ್ಯ ನಡೆದಿದೆ. ಸಿಬ್ಬಂದಿಗಳು ತಮ್ಮ ನಿತ್ಯದ ಕರ್ತವ್ಯ ನಿರ್ವಹಿಸುವ ಜೊತೆಗೆ ಇಂತಹ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.
ಅಲ್ಲದೆ ಕೊರೊನಾ ಸೋಂಕು ಆತಂಕ ಮೂಡಿಸಿರುವ ಈ ಸಂದರ್ಭದಲ್ಲಿ ಜನರು ಕೂಡ ಜವಾಬ್ದಾರಿಯಿಂದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಇದೇ ವೇಳೆ ಮಾಸ್ಕ್ ಧರಿಸದೇ ಓಡಾಡುವವರಿಗೆ ಕೊವಿಡ್19 ತಡೆಗಟ್ಟುವ ಸಲುವಾಗಿ ತಮ್ಮ ಹಣದಲ್ಲಿಯೇ ಮಾಸ್ಕ್ ಖರೀದಿಸಿ ವಿತರಣೆ ಮಾಡುತ್ತಿರುವ ಕಾರ್ಯವೂ ನಡೆದಿರುವುದು ವಿಶೇಷವಾಗಿದೆ.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ
ಇದನ್ನೂ ಓದಿ: ಹುಬ್ಬಳ್ಳಿ: ದೂರು ನೀಡಲು ಹೋಗಿದ್ದವರ ಮೇಲೆ ಪಿಎಸ್ಐ ಧಮ್ಕಿ; ಮನನೊಂದು ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ ಯತ್ನ
ಇದನ್ನೂ ಓದಿ: ಹುಬ್ಬಳ್ಳಿ: ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಗೆ ಸ್ವಾಗತ ಕೋರಿದ ಮಠಾಧೀಶರರು