ಶಾಸಕನಿಂದ ವಿಧಾನಸಭೆ ವಿಪಕ್ಷ ಉಪನಾಯಕನವರೆಗೆ; ಯುಟಿ ಖಾದರ್ ರಾಜಕೀಯ ಇತಿಹಾಸದ ಸಮಗ್ರ ವಿವರ ಇಲ್ಲಿದೆ

Congress | UT Khader: ಮಾಜಿ ಸಚಿವ, ಹಾಲಿ ಶಾಸಕ ಯು.ಟಿ ಖಾದರ್ ಕರ್ನಾಟಕ ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಹೈಕಮಾಂಡ್​ನಿಂದ ನಾಮಾಂಕಿತಗೊಂಡಿದ್ದಾರೆ. ಖಾದರ್ ರಾಜಕೀಯ ಇತಿಹಾಸ, ವೈಯಕ್ತಿಕ ಮಾಹಿತಿ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.

ಶಾಸಕನಿಂದ ವಿಧಾನಸಭೆ ವಿಪಕ್ಷ ಉಪನಾಯಕನವರೆಗೆ; ಯುಟಿ ಖಾದರ್ ರಾಜಕೀಯ ಇತಿಹಾಸದ ಸಮಗ್ರ ವಿವರ ಇಲ್ಲಿದೆ
ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಆಯ್ಕೆಯಾದ ಯು.ಟಿ ಖಾದರ್
Follow us
| Updated By: shivaprasad.hs

Updated on: Jan 30, 2022 | 5:17 PM

ಮಾಜಿ ಸಚಿವ, ಹಾಲಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಯು.ಟಿ.ಖಾದರ್​ಗೆ (U.T.Khader) ಕಾಂಗ್ರೆಸ್​ನಲ್ಲಿ ನೂತನ ಹುದ್ದೆ ದೊರೆತಿದೆ. ಖಾದರ್ ಅವರು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಖಾದರ್ ಅವರನ್ನು ಗುರುತಿಸಿ ಹೈಕಮಾಂಡ್ ಹೊಸ ಜವಬ್ದಾರಿಯನ್ನು ನೀಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K.C.Venugopal) ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ತಮ್ಮದೇ ಆದ ಚಾಪು ಮೂಡಿಸಿರುವ ಯು.ಟಿ.ಖಾದರ್ ಅವರ ರಾಜಕೀಯ ಜೀವನ, ರಾಜಕೀಯ ಇತಿಹಾಸ ಹೇಗಿದೆ ಎನ್ನುವುದರ ಸಮಗ್ರ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ಮುಖಂಡನ ಮಗ ಯು.ಟಿ.ಖಾದರ್:

ಖಾದರ್ ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ. ಅವರ ತಾಯಿ ನಸೀಮಾ ಮತ್ತು ಅವರ ತಂದೆ ದಿವಂಗತ ಹಾಜಿ ಯು. ಟಿ. ಫರೀದ್. ಕಾಂಗ್ರೆಸ್ ನ ಮಾಜಿ ಶಾಸಕರಾಗಿದ್ದ ಯು.ಟಿ.ಫರೀದ್ ಶಾಸಕರಾದಾಗಲೇ ಇಹಲೋಕ ತ್ಯಜಿಸಿದ್ದರಿಂದ ಅವರ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿಂತ ಯು.ಟಿ.ಖಾದರ್ ಗೆದ್ದು ಮೊದಲ ಬಾರಿಗೆ ಶಾಸಕರಾದರು. ಖಾದರ್​ರವರು ಕರ್ನಾಟಕ ವಿಧಾನಸಭೆಯ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಮಂಗಳೂರು ಕ್ಷೇತ್ರ ಹಿಂದೆ ಉಳ್ಳಾಲ ವಿಧಾನಸಭಾ ಕ್ಷೇತ್ರ ಅಂತಾ ಕರೆಯಲ್ಪಡುತ್ತಿತ್ತು. ಖಾದರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದು, 2018 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2018 ರ ನರೇಂದ್ರ ಮೋದಿ ಅಲೆಯಲ್ಲೂ ಅವರು ಬಿಜೆಪಿಯ ಸಂತೋಷ್ ಕುಮಾರ್​ರವರನ್ನು 19,739 ಮತಗಳ ಅಂತರದಿಂದ ಸೋಲಿಸಿದರು.

ಯು.ಟಿ.ಖಾದರ್ ಅವರ ತಂದೆ ಹಾಜಿ ಯು ಟಿ ಫರೀದ್ ಅವರ ನಿಧನದ ನಂತರ 2007 ರಲ್ಲಿ ನಡೆದ ಉಪಚುನಾವಣೆಯಲ್ಲಿ ಖಾದರ್ ರವರು ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಅವರ ತಂದೆ ಹಾಜಿ ಯು ಟಿ ಫರೀದ್ ರವರು 1972, 1978, 1999 ಮತ್ತು 2004 ರಲ್ಲಿ ಚುನಾವಣೆಗಳಲ್ಲಿ ಜಯಗಳಿಸಿದ್ದರು. ಯು.ಟಿ.ಖಾದರ್ ಮಾಜಿ ಸಿಎಂ ಸಿದ್ದರಾಮಯ್ಯರವರ ಸಂಪುಟದದಲ್ಲಿ ಮೇ 20 2013 ರಿಂದ ಜೂನ್ 20 2016 ರವರೆಗೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಬಳಿಕ ಸಿಎಂ ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಖಾದರ್ ವೈಯುಕ್ತಿಕ ಜೀವನದ ಮಾಹಿತಿ:

ಪೂರ್ಣ ಹೆಸರು: ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್ ಜನ್ಮ ದಿನಾಂಕ :12 ಅಕ್ಟೋಬರ್ 1969 (ವಯಸ್ಸು 52) ಹುಟ್ಟಿದ ಸ್ಥಳ : ಮಂಗಳೂರು ವಿದ್ಯಾರ್ಹತೆ : ಪದವೀಧರ

ವಿಶ್ವಾಸಗಳಿಸುವಲ್ಲಿ ಖಾದರ್ ಚತುರ:

2018ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಪ್ರತಿನಿಧಿ ಯು.ಟಿ. ಖಾದರ್. ಅಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ (2018-19) ಖಾದರ್ ಅವರು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್​ಅನ್ನು ಸಮರ್ಥನೆ ಮಾಡಿಕೊಳ್ಳುವುದರಲ್ಲಿ ಯು.ಟಿ.ಖಾದರ್ ಮುಂಚೂಣಿಯಲ್ಲಿರುತ್ತಾರೆ. ಪ್ರಸ್ತುತ ಹಾಗೂ ಹಿಂದಿನ ಬೆಳವಣಿಗಳನ್ನು ಆಧರಿಸಿ ಆಡಳಿತ ಪಕ್ಷವನ್ನು ಹಳಿಯುವಲ್ಲಿ ಪ್ರತಿನಿತ್ಯ ತಮ್ಮದೇ ಆದ ಸ್ಟಾಟರ್ಜಿಗಳನ್ನು ಮಾಡಿಕೊಂಡು ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಅಲ್ಲೂ ಕೂಡ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸಗಳಿಸುವಲ್ಲಿ ಖಾದರ್ ಯಶಸ್ವಿಯಾಗಿದ್ದರು. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಹಗರಣಗಳ ಬಗ್ಗೆ ಆಗಾಗ ಪ್ರತಿಕ್ರಿಯಿಸುತ್ತಾ ಸರ್ಕಾರಕ್ಕೆ ಚಾಟಿ ಬೀಸುವಲ್ಲಿ ಖಾದರ್ ನಿಪುಣರಾಗಿದ್ದಾರೆ.

ಒಳ್ಳೆಯ ವಾಗ್ಮಿ ಖಾದರ್:

ಯು.ಟಿ.ಖಾದರ್ ಮಾತುಗಾರಿಕೆಯಲ್ಲಿ ನಿಸ್ಸೀಮರು. ಯಾವುದೇ ಮಾತನ್ನಾದರೂ ಅಳೆದು ತೂಗಿ ಮಾತನಾಡುತ್ತಾರೆ. ಎಲ್ಲಿಯೂ ಸಿಕ್ಕಿಕೊಳ್ಳದ ಹಾಗೆ ಮಾತನಾಡಿ ವಿಚಾರವನ್ನು ಮಂಡಿಸುತ್ತಾರೆ. ಆದರೂ ಒಂದು ಬಾರಿ ಮಾತನಾಡುತ್ತಾ ಖಾದರ್ ಕೂಡ ಎಡವಿದ್ದರು. 2017 ರಲ್ಲಿ ಸಚಿವರಾಗಿದ್ದಾಗ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಆಗಮನ ವಿರೋಧಿಸಿ ಬಂದ್​ಗೆ ಕರೆ ನೀಡಿದ್ದ ಸಂಘಪರಿವಾರದ ವಿರುದ್ದ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದರು. ಸಂವಿಧಾನ ವಿರೋಧಿ ಶಕ್ತಿಗಳಿಗೆ ಚಪ್ಪಲಿ ಏಟು ನೀಡಬೇಕು. ಬಂದ್​ಗೆ ಕರೆಕೊಟ್ಟಿರುವವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಚಪ್ಪಲಿಯಷ್ಟೂ ಯೋಗ್ಯತೆಯಿಲ್ಲ. ಅತಿಥಿಗಳಿಗೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ಬಂದ್​​​ಗೆ ಕರೆ ನೀಡಿದ ಸಂಘಪರಿವಾರದ ವಿರುದ್ಧ ಯು.ಟಿ.ಖಾದರ್ ಕಿಡಿಕಾರಿ ವಿವಾದಕ್ಕೆ ಕಾರಣರಾಗಿದ್ದರು.

ರೌಡಿಶೀಟರ್ ಗಳಿಂದ ಮುಜಗರಕ್ಕೀಡಾಗಿದ್ದ ಯು.ಟಿ.ಖಾದರ್:

ಯು.ಟಿ.ಖಾದರ್​ಗೆ ಜನಬಳಕೆ ಹೆಚ್ಚು. ತಮ್ಮ ಕ್ಷೇತ್ರದಲ್ಲಿ ಯಾರು ಕೂಡ ಕರೆದರು ಅವರಿದ್ದಲ್ಲಿಗೆ ಹೋಗಿ ಮಾತನಾಡಿಸಿ ಬರುವ ಗುಣ ಯು.ಟಿ.ಖಾದರ್ ರದ್ದು. ಇನ್ನು ಯಾರೇ ಸಹಾಯ ಕೇಳಿದರೂ ತಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣ ಕೂಡ ಖಾದರ್​​ಗೆ ಇದೆ. ಇನ್ನು ಜನಸಾಮಾನ್ಯರಂತೆ ಎಲ್ಲಾ ಕಡೆ ಜನರೊಂದಿಗೆ ಭಾಗವಹಿಸುವ ಹವ್ಯಾಸ ಖಾದರ್​ಗೆ ಇದ್ದು, ಫೋಟೊ ಸೆಲ್ಫಿಯನ್ನು ಯಾರು ಕೇಳಿದರೂ ಕೊಡುತ್ತಾರೆ. ಉಳ್ಳಾಲದ ನಟೋರಿಯಸ್ ಗ್ಯಾಂಗ್ ಆದ ಟಾರ್ಗೆಟ್ ಗ್ಯಾಂಗ್ ರೌಡಿಶೀಟರ್ ಇಲ್ಯಾಸ್​ನೊಂದಿಗೆ ಯು.ಟಿ.ಖಾದರ್ ಸಂಪರ್ಕವಿದೆ ಎಂದು ವಿವಾದ ಉಂಟಾಗಿತ್ತು. ಅದಕ್ಕೆ ಪೂರಕ ಎಂಬಂತೆ ಇಲ್ಯಾಸ್ ಜೊತೆ ಆಪ್ತವಾಗಿ ತೆಗೆಸಿಕೊಂಡ ಫೋಟೊಗಳು ವೈರಲ್ ಆಗಿದ್ದವು. ಇಲ್ಯಾಸ್​ಗೆ ಯೂತ್ ಕಾಂಗ್ರೆಸ್​ನಲ್ಲಿ ಪೋಸ್ಟ್ ಕೊಡಲಾಗಿತ್ತು. ಇನ್ನು ಆತನ ಕೊಲೆಯಾದ ಬಳಿಕ ಇಲ್ಯಾಸ್ ಪತ್ನಿ ಯು.ಟಿ.ಖಾದರ್ ಮೇಲೆ ಅಸಮದಾನಗೊಂಡಿದ್ದರು. ಮೊದಲು ಪತಿ ಇದ್ದಾಗ ಹುಡುಕಿಕೊಂಡು ಮನೆಗೆ ಬರುತ್ತಿದ್ದರು. ಆದ್ರೆ ಸತ್ತ ನಂತರ ಸಹಾಯಕ್ಕೆ ಬರಲಿಲ್ಲ ಎಂದು ಆರೋಪಿಸಿದ್ದರು.

ಸ್ನೇಹಜೀವಿ ರಾಜಕಾರಣಿ:

ವಿಧಾನಸಭೆ ಅಥವಾ ವಿಧಾನ ಪರಿಷತ್ ನಲ್ಲಿ ತಮ್ಮ ವಿರೋಧ ಪಕ್ಷದವರಿಂದಲೂ ಹೊಗಳಿಸಿಕೊಳ್ಳುವ ರಾಜಕಾರಣಿ ಖಾದರ್. ತಾವು ವಿರೋಧ ಪಕ್ಷದಲ್ಲಿದ್ದರೂ ಮುಖ್ಯಮಂತ್ರಿ ಮತ್ತು ಸಚಿವರ ಸ್ನೇಹ ಬೆಳೆಸುವ ಖಾದರ್ ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವ ನಿಪುಣರಾಗಿದ್ದಾರೆ.

ಕೇರಳ ಚುನಾವಣೆಯಲ್ಲಿ ಉಸ್ತುವಾರಿ:

ಯು.ಟಿ.ಖಾದರ್ ಕುಟುಂಬ ಮೂಲತಹ ಕೇರಳದವರು. ಆದ್ದರಿಂದ ಕೇರಳ ನಂಟು ಯು.ಟಿ.ಖಾದರ್ ಗೆ ಚೆನ್ನಾಗಿದೆ. ನಿರರ್ಗಳವಾಗಿ ಮಲೆಯಾಳಂ ಕೂಡ ಮಾತನಾಡುತ್ತಾರೆ. ಆದ್ದರಿಂದ ಕೇರಳ ಚುನಾವಣೆಗೆ ಯು.ಟಿ.ಖಾದರ್ ಅವರನ್ನು ಉಸ್ತುವಾರಿಯನ್ನಾಗಿ ಕೂಡ ನೇಮಿಸಲಾಗಿತ್ತು. ಅದನ್ನು ನಿಭಾಯಿಸುವಲ್ಲಿ ಯು.ಟಿ.ಖಾದರ್ ಯಶಸ್ವಿ ಕೂಡ ಆಗಿದ್ದರು. ಇಂತಿಪ್ಪ ಯು.ಟಿ ಖಾದರ್ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಜವಾಬ್ದಾರಿ ಲಭಿಸಿದೆ. ಈ ಮಹತ್ತರ ಜವಾಬ್ದಾರಿಯನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು

ಇದನ್ನೂ ಓದಿ:

ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯುಟಿ ಖಾದರ್ ನೇಮಕ; ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ

ಸಿಎಂ ಇಬ್ರಾಹಿಂಗೆ ಕೈತಪ್ಪಿದ ಪರಿಷತ್ ವಿಪಕ್ಷ ನಾಯಕ ಸ್ಥಾನ: ಮುಸ್ಲಿಂ ಸಮುದಾಯದ ನಾಯಕರ ಅಸಮಾಧಾನ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್