ಹಾಸನ, ಜ.26: ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಿದ್ದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಹೇಳಿದ್ದಾರೆ. ಹಾಸನ(Hassan)ದಲ್ಲಿ ಮಾತನಾಡಿದ ಅವರು ‘ ಶೆಟ್ಟರ್ ಬಗ್ಗೆ ಆರೋಪ ಮಾಡುವುದು ಸಾಧುವಲ್ಲ, ಅವರು ಬಿಜೆಪಿಗೆ ಮರಳಿ ಹೋಗಿದ್ದು ಅವರ ವೈಯಕ್ತಿಕ ನಿರ್ಧಾರ. ಕಾಂಗ್ರೆಸ್ನಲ್ಲಿ ನನ್ನ ಚೆನ್ನಾಗಿ ನೋಡಿಕೊಂಡರು ಎಂದು ಶೆಟ್ಟರ್ ಹೇಳಿದ್ದಾರೆ. ಇಲ್ಲಿ ಯಾವುದೇ ಅಪಮಾನ, ಅಸಮಾಧಾನ ಆಗಲಿ ಇರಲಿಲ್ಲ ಎಂದು ಹೇಳಿದರು.
ಶೆಟ್ಟರ್ ಮೊದಲಿನಿಂದಲೂ ಆರ್ಎಸ್ಎಸ್ ಸಿದ್ಧಾಂತದಿಂದ ಬಂದವರು. ಅದರ ಮೇಲಿನ ಒಲವಿನಿಂದ ಮತ್ತೆ ಪಕ್ಷಕ್ಕೆ ಹೋಗಿರಬಹುದು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸ್ವತಂತ್ರರೂ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಅವರು ವಿಧಾನಸಭೆ ಟಿಕೆಟ್ ಕೊಡಲಿಲ್ಲ ಎಂದು ಬೇಸರದಿಂದ ತೀರ್ಮಾನ ತೆಗೆದುಕೊಂಡಿದ್ದರು. ‘ನಾನು ಕೂಡ ಬೇರೆ ಪಾರ್ಟಿಗೆ ಹೋಗಿದ್ದೆ, ಜನತಾದಳದಲ್ಲಿ 2004 ರಲ್ಲಿ ಇದ್ದೆ. ಅಲ್ಲಿ ಒಗ್ಗದ ಹಿನ್ನಲೆ ವಾಪಸ್ಸು ಕಾಂಗ್ರೆಸ್ಗೆ ಬಂದೆ. ಹಾಗೆ ಶೆಟ್ಟರ್ ಕೂಡ ಬಂದರು, ನಾಲ್ಕು ತಿಂಗಳು ಇದ್ದರೂ ಒಗ್ಗಲಿಲ್ಲ ಎಂದು ವಾಪಸ್ಸು ಹೋದರು ಎಂದರು.
ಇದನ್ನೂ ಓದಿ:ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ: ಸಚಿವ ಕೆಎನ್ ರಾಜಣ್ಣ
ಹೀಗೆ ಹೋಗಿದ್ದಾರೆ ಎಂದಾಕ್ಷಣ ಕಾಂಗ್ರೆಸ್ ಏನು ಅವರನ್ನ ಚೆನ್ನಾಗಿ ನಡೆಸಿಕೊಂಡಿಲ್ಲ ಎಂದಲ್ಲ. ಅವರು ಮೊದಲಿನಿಂದಲೂ ಸರಳ ನಡವಳಿಕೆಗೆ ಹೆಸರಾದವರು, ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು. ಇದೇ ವೇಳೆ ಕಾಂಗ್ರೆಸ್ ಜಗದೀಶ್ ಶೆಟ್ಟರ್ಗೆ ಮಂತ್ರಿ ಮಾಡದೇ ಅನ್ಯಾಯ ಮಾಡಿತು ಎಂಬ ಹೆಚ್.ಡಿ.ಡಿ ಹೇಳಿಕೆ ವಿಚಾರ ‘ಹಿಂದೆ ಬಸವರಾಜ ಬೊಮ್ಮಾಯಿ ಇದ್ದಾಗ ಯಾಕೆ ಮಂತ್ರಿ ಮಾಡಲಿಲ್ಲ ಅವರಿಗೆ, ನಮ್ಮನ್ನ ಹೇಳೋದಾದ್ರೆ ಅವರ್ಯಾಕೆ ಮಾಡಲಿಲ್ಲ. ಗೌಡ್ರು ಯಾಕೆ ಹೇಳಿ ಮಾಡಿಸಬಾರದಿತ್ತು?. ಸುಮ್ಮನೆ ಯಾವುದೇ ರಾಜಕೀಯದ ಬಣ್ಣಕ್ಕೋಸ್ಕರ, ಅವರ ಬೇಳೆ ಬೇಯಿಸಿಕೊಳ್ಳೋದಕ್ಕೆ ಹೇಳೋದನ್ನ ನಾನು ಒಪ್ಪೋದಿಲ್ಲ.
‘ಬರೀ ಕಾಂಗ್ರೆಸ್ನವರು ಮಂತ್ರಿ ಮಾಡಲಿಲ್ಲ ಎನ್ನುವ ಆರೋಪನೇ ಆದರೆ ಅವರು ಯಾಕೆ ಮಾಡಲಿಲ್ಲ. ಹಾಗಾದ್ರೆ ಆ ಆರೋಪ ಅವರಿಗೂ ಅನ್ವಯವಾಗಿತ್ತಲ್ವಾ? ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಂದೆ ಅವರಿಗೆ ಭವಿಷ್ಯನೂ ಇತ್ತು, ರಾಜ್ಯದಲ್ಲಿ ಹುಬ್ಬಳಿ-ಧಾರವಾಡದಿಂದ ಜನಸಂಘದಿಂದ ಪ್ರಪ್ರಥಮ ಮೇಯರ್ ಆಗಿದ್ದು ಅವರ ತಂದೆಯವರು, ಅವರ ಮೂಲ ಅಲ್ಲಿಂದನೂ ಇದೆ. ಮೊದಲಿಂದಲೂ ಆರ್ ಎಸ್ ಎಸ್ ಸಿದ್ದಾಂತದಿಂದ ಬಂದಿರೋರು ಆದ್ದರಿಂದ ಹೊಗಿದ್ದಾರೆ ಎಂದು ಹೇಳಿದರು.
ರಾಜಕೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Fri, 26 January 24