ಕೋಲಾರ, ಮಾರ್ಚ್ 30: ಕೋಲಾರ ಲೋಕಸಭಾ ಕ್ಷೇತ್ರದ (Kolar Lok Sabha Constituency) ಟಿಕೆಟ್ ಅನ್ನು ಕಾಂಗ್ರೆಸ್ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮಾಜಿ ಮೇಯರ್ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ. ಗೌತಮ್ (K Goudtam) ಅವರಿಗೆ ನೀಡಿದೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಭಾಪತಿ ರಮೇಶ್ ಕುಮಾರ್ ಮತ್ತು ಸಚಿವ ಕೆ.ಹೆಚ್ ಮುನಿಯಪ್ಪ ಎರಡೂ ಬಣದವರನ್ನು ಬಿಟ್ಟು ಮೂರನೇ ವ್ಯಕ್ತಿಗೆ ಮಣೆ ಹಾಕಿದೆ. ಕೊನೆಯದಾಗಿ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಕೋಲಾರ ಕಾಂಗ್ರೆಸ್ ಘಟಕದಲ್ಲಿ ಮಾಜಿ ಸಭಾಪತಿ ರಮೇಶ್ ಕುಮಾರ್ ಮತ್ತು ಕೆ.ಹೆಚ್ ಮುನಿಯಪ್ಪ ಎರಡು ಬಣಗಳಿವೆ. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಕೆ.ಹೆಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣನಿಗೆ ನೀಡುವುದು ಪಕ್ಕಾ ಅಂತ ತಿಳಿಯುತ್ತಿದ್ದಂತೆ ರಮೇಶ್ ಕುಮಾರ್ ಬಣದ ನಾಯಕರು ಅಸಮಾಧಾನಗೊಂಡು ಬಂಡಾಯವೆದ್ದಿದ್ದರು. ಒಂದು ವೇಳೆ ಕೆ.ಹೆಚ್ ಮುನಿಯಪ್ಪ ಕಡೆಯವರಿಗೆ ಟಿಕೆಟ್ ನೀಡಿದರೆ ಸಾಮೂಹಿಕವಾಗಿ ರಾಜಿನಾಮೆ ನೀಡುತ್ತೇವೆ ಎಂದು ರಮೇಶ್ ಕುಮಾರ್ ಬಣದ ಐದು ಜನ ಶಾಸಕರು ಸಿದ್ದವಾಗಿದ್ದರು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯಸ್ಥಿಕೆ ವಹಿಸಿ ಅಸಮಾಧಾನಿತ ಶಾಸಕರನ್ನು ಸಮಾಧಾನ ಮಾಡಿದರು. ಇದೀಗ ಎರಡೂ ಬಣದವರನ್ನು ಹೊರತು ಪಡಿಸಿ ಮೂರನೇದವರಿಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: ಸಿಎಂ, ಡಿಸಿಎಂ ಮುಂದೆ ಮುನಿಯಪ್ಪರ ದಲಿತ ಎಡಗೈ-ಬಲಗೈ ಸಮುದಾಯದ ಪ್ರಾತಿನಿಧ್ಯದ ವಾದ
ರಾಜ್ಯದ ಐದು ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರಗಳಲ್ಲಿ ಕೋಲಾರ ಕ್ಷೇತ್ರ ಕೂಡ ಒಂದು. ಕಾಂಗ್ರೆಸ್ ಮೊದಲಿನಿಂದಲೂ ಎರಡು ಕ್ಷೇತ್ರದ ಟಿಕೆಟ್ ದಲಿತ ಬಲಗೈ, ಎರಡು ಕ್ಷೇತ್ರದ ಟಿಕೆಟ್ ಎಡಗೈ ಹಾಗೂ ಒಂದು ಭೋವಿ ಅಥವಾ ಲಂಬಾಣಿ ಸಮುದಾಯಕ್ಕೆ ನೀಡುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಈ ಬಾರಿ ವಿಜಯಪುರ, ಕಲಬುರಗಿ ಕ್ಷೇತ್ರದ ಟಿಕೆಟ್ ಅನ್ನು ಬಲ ಸಮುದಾಯವರಿಗೆ ನೀಡಿದೆ. ಇನ್ನು ಚಾಮರಾಜನಗರದಲ್ಲೂ ಬಲಗೈ ಸಮುದಾಯದ ಡಾ.ಹೆಚ್.ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಚಿತ್ರದುರ್ಗ ಕ್ಷೇತ್ರ ಒಂದನ್ನೂ ಮಾತ್ರ ಎಡಗೈ ಸಮುದಾಯಕ್ಕೆ (ಬಿ.ಎನ್. ಚಂದ್ರಪ್ಪ) ಟಿಕೆಟ್ ನೀಡಿದೆ. ಇದೀಗ ಕೋಲಾರದಲ್ಲಿ ಎಡಗೈ ಸಮುದಾಯದ ಕೆ.ವಿ ಗೌತಮ್ ಅವರಿಗೆ ಟಿಕೆಟ್ ನೀಡುವ ಮೂಲಕ 3 ಬಲ + 2 ಎಡ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಂತಾಗಿದೆ.
ಕೆ.ವಿ.ಗೌತಮ್ ಬೆಂಗಳೂರಿನ ಮಾಜಿ ಮೇಯರ್ ಕೆ.ವಿಜಯಕುಮಾರ್ ಅವರ ಮಗ. ಕೋಲಾರ ಮೂಲದವರಾದ ಇವರು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಕೆ ವಿಜಯಕುಮಾರ್ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ಪುತ್ರನನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Sat, 30 March 24