ಕೋಲಾರ, ಮಾರ್ಚ್ 29: ರಾಜ್ಯದ ಐದು ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದಡಿ ಕೋಲಾರ ಕ್ಷೇತ್ರ ಕೂಡ ಒಂದು. ಕಾಂಗ್ರೆಸ್ (Congress) ಮೊದಲಿನಿಂದಲೂ ಎರಡು ಕ್ಷೇತ್ರದ ಟಿಕೆಟ್ ದಲಿತ ಬಲಗೈ, ಎರಡು ಕ್ಷೇತ್ರ ಎಡಗೈ ಹಾಗೂ ಒಂದು ಭೋವಿ ಅಥವಾ ಲಂಬಾಣಿ ಸಮುದಾಯಕ್ಕೆ ನೀಡುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಈ ಬಾರಿ ವಿಜಯಪುರ, ಕಲಬುರಗಿ ಕ್ಷೇತ್ರದ ಟಿಕೆಟ್ ಅನ್ನು ಬಲಗೂ ಸಮುದಾಯವರಿಗೆ ನೀಡಿದೆ. ಇನ್ನು ಚಾಮರಾಜನಗರದಲ್ಲೂ ಬಲಗೈ ಸಮುದಾಯದ ಡಾ.ಹೆಚ್.ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ಗೆ ನೀಡುವುದು ಬಹುತೇಕ ಪಕ್ಕಾ ಆಗಿದೆ.
ಕಾಂಗ್ರೆಸ್ ಚಿತ್ರದುರ್ಗ ಕ್ಷೇತ್ರ ಒಂದನ್ನೂ ಮಾತ್ರ ಎಡಗೈ ಸಮುದಾಯಕ್ಕೆ (ಬಿ.ಎನ್. ಚಂದ್ರಪ್ಪ) ಟಿಕೆಟ್ ನೀಡಿದೆ. ಇದೀಗ ಕೋಲಾರದಲ್ಲೂ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಿದರೇ 3 ಬಲ + 2 ಎಡ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಂತಾಗುತ್ತದೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಪಟ್ಟು ಹಿಡಿದಿದ್ದಾರೆ.
ಹೀಗಾಗಿ ಕೆ ಎಚ್ ಮುನಿಯಪ್ಪ ನಿನ್ನೆ (ಮಾ.28) ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು. ಈ ವೇಳೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕೂಡ ಹಾಜರಿದ್ದರು.
ಇದನ್ನೂ ಓದಿ: ಕೋಲಾರ ಕಾಂಗ್ರೆಸ್ ಶಾಸಕರ ಸಂಧಾನ ಸಭೆ ಯಶಸ್ವಿ: ಹಾಗಾದ್ರೆ ಲೋಕಸಭೆ ಟಿಕೆಟ್ ಯಾರಿಗೆ..?
ಈಗಾಗಲೇ ಐದು ಮೀಸಲು ಕ್ಷೇತ್ರಗಳ ಪೈಕಿ ಮೂರು ದಲಿತ ಬಲ ಸಮುದಾಯಕ್ಕೆ ನೀಡಲಾಗಿದೆ. ಚಿತ್ರದುರ್ಗದಲ್ಲಿ ಮಾತ್ರ ದಲಿತ ಎಡ ಸಮುದಾಯಕ್ಕೆ ಟಿಕೇಟ್ ನೀಡಲಾಗಿದೆ. ಅಕಸ್ಮಾತ್ ಕೋಲಾರ ತಮ್ಮ ಕುಟುಂಬಕ್ಕೆ ನೀಡದೆ ಇದ್ದರೇ ದಲಿತ ಎಡ ಸಮುದಾಯದ ಮತಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
ಉಳಿದ ಮೀಸಲು ಕ್ಷೇತ್ರಗಳಲ್ಲೂ ದಲಿತ ಎಡ ಸಮುದಾಯದ ಪರಿಣಾಮ ಉಲ್ಟಾ ಆಗುವ ಸಾಧ್ಯತೆ ಇದೆ. ದಲಿತ ಎಡ ವರ್ಗಕ್ಕೆ ಟಿಕೇಟ್ ನೀಡದೇ ಇದ್ದರೆ ಎಲ್ಲ ಮೀಸಲು ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀಳಬಹುದೆಂದು ಎಚ್ಚರಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 am, Fri, 29 March 24