ಬೆಂಗಳೂರು, ಮಾರ್ಚ್ 13: ಲೋಕಸಭೆ ಚುನಾವಣೆಗೆ (Lok Sbha Election) ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ಎಲ್ಲ ರಾಜಕೀಯ ಪಕ್ಷಗಳು ತಯಾರಿ ಜೋರಾಗಿಯೇ ನಡೆಸಿವೆ. ಇನ್ನು ಭಾರತೀಯ ಜನತಾ ಪಾರ್ಟಿಗೆ (BJP) ಕರ್ನಾಟಕದಲ್ಲಿ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ಸಂಬಂಧ ಸೋಮವಾರ (ಮಾ.11) ತಡರಾತ್ರಿವರೆಗೂ ದೆಹಲಿ ಸಭೆ ನಡೆದಿದ್ದು, ಪ್ರಸ್ತುತ 12 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಫೈನಲ್ ಆಗಿವೆ ಎನ್ನಲಾಗುತ್ತಿವೆ. ಇನ್ನು ಸಭೆಯಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಹಾವೇರಿ, ಬೆಂಗಳೂರು ಉತ್ತರ ಮತ್ತು ಮಂಡ್ಯ ಕ್ಷೇತ್ರಗಳ ಬಗ್ಗೆಯೂ ಚರ್ಚೆಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ ಮೂವರು ಮಾಜಿ ಮುಖ್ಯಮಂತ್ರಿಗಳ ಸ್ಪರ್ಧೆ ಬಗ್ಗೆಯೂ ಚರ್ಚೆಯಾಗಿದೆ. ಎಷ್ಟು ಜನರಿಗೆ ಟಿಕೆಟ್ ಕೊಡುತ್ತಾರೆ ಗೊತ್ತಿಲ್ಲ ಎಂದರು.
ಇನ್ನೂ ಸದಾನಂದ ಗೌಡರಿಗೆ ಟಿಕೆಟ್ ಕೊಡಬೇಕು ಅಂತ ನಾವೆಲ್ಲರೂ ಹೇಳಿದ್ದೇವೆ. ಸದಾನಂದ ಗೌಡರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪ್ರತಾಪ್ ಸಿಂಹ ಧೃತಿ ಕೆಳೆದುಕೊಳ್ಳುವುದು ಬೇಡ. ಇನ್ನೂ ಘೋಷಣೆ ಅಗಿಲ್ಲ, ಚರ್ಚೆ ನಡೆಯುತ್ತಿದೆ. ಮೈಸೂರು ಮಹಾರಾಜರಿಗೆ ಟಿಕೆಟ್ ಕೊಡುತ್ತಾರೆ ಅಂತ ನನಗೆ ಗೊತ್ತಿಲ್ಲ. ನಾನಂತೂ ಅವರನ್ನು ಸಂಪರ್ಕ ಮಾಡಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ಪ್ರತಾಪ್ ಸಿಂಹ ಕೂಡ ಅದೇ ಮಾತು ಹೇಳಿದ್ದಾರೆ. ತಾಳ್ಮೆಯಿಂದ ಕಾಯುವುದು ಒಳ್ಳೆಯದು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕೊನೆಯವರೆಗೂ ಕಾಯುವುದು ಒಳ್ಳೆಯದು ಎಂದರು.
ಕೆಎಸ್ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಬೇಕು ಅಂತ ಚರ್ಚೆಯಂತೂ ಆಗಿದೆ. ಬಸವರಾಜ ಬೊಮ್ಮಾಯಿ ಕೂಡಾ ಈಶ್ವರಪ್ಪ ಮಗನಿಗೆ ಟಿಕೆಟ್ ಕೊಡುವ ಬಗ್ಗೆ ಹೇಳಿದ್ದಾರೆ. ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೊಡಲೂಬಹುದು ಅಥವಾ ಹೊಸಬರನ್ನು ಕಣಕ್ಕಿಳಿಸಲೂಬಹುದು. ದಕ್ಷಿಣ ಕನ್ನಡದಲ್ಲಿ ಎರಡೂ ಅವಕಾವಿದೆ. ಸ್ಥಳೀಯ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಘೋಷಣೆ ಆದ ಮೇಲೆ ಸಾಮಾಜಿಕ ನ್ಯಾಯ ಏನು ಅಂತಾ ಗೊತ್ತಾಗುತ್ತದೆ. ಎಲ್ಲವನ್ನೂ ಪರಿಗಣಿಸಿ ಟಿಕೆಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ; ಕಮಲನಾಥ್, ಅಶೋಕ್ ಗೆಹ್ಲೋಟ್ ಪುತ್ರರಿಗೆ ಸ್ಥಾನ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಚರ್ಚೆ ಮುಗಿದಿದ್ದು, ಘೋಷಣೆ ಮಾತ್ರ ಬಾಕಿ ಇದೆ. ಐದಾರು ರಾಜ್ಯಗಳ ಪಟ್ಟಿ ಕೂಡ ಇರುವ ಕಾರಣ ನಮ್ಮ ರಾಜ್ಯದ್ದೂ ಸೇರಿಸಿ ಬಿಡುಗಡೆ ಆಗಬಹುದು. ಬಹುತೇಕ ಎರಡು ಹಂತದಲ್ಲಿ ಬಿಡುಗಡೆ ಆಗಬಹುದು. ಆಕಾಂಕ್ಷಿಗಳ ಪರ, ವಿರೋಧ ಗಮನಕ್ಕೆ ಬಂದಿದೆ. ಚುನಾವಣಾ ಅಲೆಯಲ್ಲಿ ಗೆಲ್ಲಬೇಕು ಅಂತ ಎಲ್ಲರಿಗೂ ಇದ್ದೇ ಇರುತ್ತದೆ. ಯಾರೂ ಕೂಡಾ ಧೃತಿಗೆಡುವುದು ಬೇಡ, ಕೊನೆಯ ಕ್ಷಣದವರೆಗೂ ನಿಮ್ಮ ಪ್ರಯತ್ನ ಮುಂದುವರಿಸಿ. ಗೆಲ್ಲುವ ಮಾನದಂಡ ಮತ್ತು ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಹಾವೇರಿ, ಬೆಂಗಳೂರು ಉತ್ತರ ಮತ್ತು ಮಂಡ್ಯ ಕ್ಷೇತ್ರದ ಟಿಕೆಟ್ ಹಂಚಿಕೆ ಬಿಜೆಪಿ ವರಿಷ್ಠರಿಗೆ ತಲೆನೋವಾಗಿದೆ. ಈ ನಾಲ್ಕು ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಸಾಕಷ್ಟು ಹಗ್ಗ-ಜಗ್ಗಾಟ ನಡೆದಿದೆ. ಬೆಂಗಳೂರು ಉತ್ತರದಿಂದ ಹಾಲಿ ಸಂಸದರಾದ ಶೋಭಾ ಕರಂದ್ಲಾಜೆ, ಸದಾನಂದಗೌಡ, ಮಂಡ್ಯದಿಂದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಮತ್ತು ಬಿಜೆಪಿ ಮಿತ್ರ ಪಕ್ಷ ಜೆಡಿಎಸ್ ಟಿಕೆಟ್ಗಾಗಿ ಪಟ್ಟು ಹಿಡಿದಿದೆ.
ಇನ್ನು ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಬಿಸಿ ಪಾಟೀಲ್ ಹೆಸರು ಮುನ್ನಲೆಯಲ್ಲಿವೆ. ಆದರೆ ಬಸವರಾಜ ಬೊಮ್ಮಾಯಿ ಹೆಸರು ಫೈನಲ್ ಆಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದ್ದು, ರಾಜವಂಶಸ್ಥ ರಾಜ ಯದುವೀರ್ ಒಡೆಯರ್ ಅವರಿಗೆ ಟಿಕೆಟ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Wed, 13 March 24