ಲೋಕಸಭೆ ಚುನಾವಣೆಯಲ್ಲಿ ಜಗದೀಶ್​​​ ಶೆಟ್ಟರ್​​ಗೆ ಟಿಕೆಟ್ ಕೊಡಬೇಕು ಎಂಬ ಅಪೇಕ್ಷೆ ಇದೆ: ಜೋಶಿ

| Updated By: ವಿವೇಕ ಬಿರಾದಾರ

Updated on: Mar 23, 2024 | 4:45 PM

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಶನಿವಾರ ಕುಂದಗೋಳ ತಾಲೂಕು ಪ್ರಮುಖರ ಸಭೆ ನಡೆಸಿದರು. ಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯುವುದು ಖಚಿತ ಎಂದರು.

ಲೋಕಸಭೆ ಚುನಾವಣೆಯಲ್ಲಿ ಜಗದೀಶ್​​​ ಶೆಟ್ಟರ್​​ಗೆ ಟಿಕೆಟ್ ಕೊಡಬೇಕು ಎಂಬ ಅಪೇಕ್ಷೆ ಇದೆ: ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
Follow us on

ಹುಬ್ಬಳ್ಳಿ, ಮಾರ್ಚ್​ 23: ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್​​​ ಶೆಟ್ಟರ್ (Jagadish Shettar) ಅವರಿ​ಗೆ ಟಿಕೆಟ್ ಕೊಡಬೇಕು ಎಂಬ ಅಪೇಕ್ಷೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು. ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು (ಮಾ.23) ನಡೆದ ಕುಂದಗೋಳ ತಾಲೂಕು ಪ್ರಮುಖರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಗದೀಶ್​ ಶೆಟ್ಟರ್ ಅವರು ಪಕ್ಷದ ಹಿರಿಯ ನಾಯಕರು, ಅವರೇ ಮುಂಚೂಣಿಯಲ್ಲಿದ್ದಾರೆ ಎಂದರು.

ಇನ್ನು ಬಿಜೆಪಿಯಲ್ಲಿನ ಕುಟುಂಬ ರಾಜಕಾರಣ ಮತ್ತು ಪುತ್ರ ಕಾಂತೇಶ್​ಗೆ ಲೋಕಸಭೆ ಚುನಾವಣೆ ಟಿಕೆಟ್​ ಸಿಗದ ಹಿನ್ನೆಲಯಲ್ಲಿ ಅಸಮಾಧಾನಗೊಂಡಿರುವ ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಜೋಶಿ, ಕೆಎಸ್​​​​ ಈಶ್ವರಪ್ಪನವರ ಜೊತೆ ಮಾತನಾಡುತ್ತೇನೆ, ಅವರು ಮನವೊಲಿಕೆ ಆಗುತ್ತಾರೆ. ಎಲ್ಲವೂ ಸರಿ ಹೋಗುತ್ತೆ. ಸ್ವಲ್ಪ ನಿಧಾನವಾಗಿ ಕೆ.ಎಸ್​. ಈಶ್ವರಪ್ಪನವರು ಸಮಾಧಾನ ಆಗುತ್ತಾರೆ. ಬಹಳ ಸಮಯ ಇರುವ ಕಾರಣಕ್ಕೆ ಕೆಲವು ಕಡೆ ಗೊಂದಲ ಇದೆ. ಲೋಕಸಭೆ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯುವುದು ಖಚಿತ. ಕರ್ನಾಟಕದಲ್ಲಿ ಎನ್​ಡಿಎ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಗುರಿ ಇದೆ. ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್​ನಲ್ಲೂ ಗೆದ್ದಿದ್ದೇವೆ. ಅದೇ ರೀತಿ ರಾಜ್ಯದಲ್ಲೂ ಬಿಜೆಪಿ-ಜೆಡಿಎಸ್​​ ಮೈತ್ರಿಕೂಟ 28 ಸ್ಥಾನ ಗೆಲ್ಲಲಿದೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಬೇಕಾಗುತ್ತೆ. ಅವರ ಪಕ್ಷದ ನಿರ್ಣಯ ಇದ್ದರೇ ಸಿದ್ದರಾಮಯ್ಯ ಇಳಿಯಬೇಕಾಗುತ್ತದೆ. ಕಾಂಗ್ರೆಸ್​ನ ಆಂತರಿಕ ಕಚ್ಚಾಟವೇ ಸಿಎಂ ಸಿದ್ದರಾಮಯ್ಯಗೆ ಸಮಸ್ಯೆ ಇದೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್​ಗೆ ಲೋಕಸಭಾ ಟಿಕೆಟ್ ಕನ್ಫರ್ಮ್: ಖಚಿತಪಡಿಸಿದ ಸಹೋದರ ಪ್ರದೀಪ್ ಶೆಟ್ಟರ್

ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿದವರನ್ನು ಕಾಂಗ್ರೆಸ್​ ಸರ್ಕಾರ ಬಂಧಿಸಲಿಲ್ಲ. ನಾವು ಬೆನ್ನು ಹತ್ತಿದ ಮೇಲೆ ಆರೋಪಿಗಳನ್ನು ಬಂಧಿಸಿದರು. ಹನುಮಾನ್ ಚಾಲೀಸ್ ಹಾಕಿರುವುದಕ್ಕೆ ಹೊಡೆದರು. ರಾಮನಿಗೆ ವಿರೋಧ, ಭಗವಾ ದ್ವಜಕ್ಕೆ ವಿರೋಧ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಬೆಂಗಳೂರಲ್ಲಿ ಯಾವ ಘಟನೆ ನಡೆದಿರಲಿಲ್ಲ. ಹಿಂದೆ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಬ್ರದರ್ಸ್ ಅಂದರು. ಅವರು ಹೇಗೆ ಬ್ರದರ್ ಅಂತ ಕೇಳಬೇಕಿದೆ. ಮುಂದಿನ ಜನ್ಮ ಅನ್ನೋದ ಇದ್ದರೆ ಕೆಲವರು ಮುಸ್ಲಿಂ ಆಗಿ ಹುಟ್ಟುಬೇಕು ಅಂತಿದ್ದಾರೆ. ತುಷ್ಟೀಕರಣ ಹೆಚ್ಚಾಗಿರುವುದಕ್ಕೆ ಪಾಕಿಸ್ತಾನ ಜಿಂದಾಬಾದ್ ಅಂತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ರಾಹುಲ್ ಗಾಂಧಿ ಕಲ್ಲು ಹೊಡೆದವರನ್ನು ಒಳಗೆ ಹಾಕಿದರು ಅಂತ ಹೇಳುತ್ತಾರೆ. ಹತ್ತು ಕೆಜಿ ಅಕ್ಕಿ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಐದು ಕೆಜಿ ಅಕ್ಕಿ ಪ್ರಧಾನಿ ಮೋದಿ ಕೊಡುತ್ತಿದ್ದಾರೆ. ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ನಡುವೆ ತಾಳ ಇಲ್ಲ ತಂತಿ‌ ಇಲ್ಲ. ಸುಳ್ಳು ಹೇಳಲು ಇಬ್ಬರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್​ನವರು ನಿಸ್ಸೀಮರು. ಅಕ್ಕಿ ನಮ್ದು ಪ್ರಚಾರ ಅವರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಭೆಯಲ್ಲಿ ಕುಂದಗೋಳ ಬಿಜೆಪಿ ಶಾಸಕ ಎಮ್​ಆರ್​ ಪಾಟೀಲ್ ಹಾಗೂ ಕುಂದಗೋಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ