ಬೆಂಗಳೂರು, ಮಾರ್ಚ್ 25: ಲೋಕಸಭೆ ಚುನಾವಣೆಗೆ (Lok Sabha Elections) ಮಂಡ್ಯ (Mandya) ಕ್ಷೇತ್ರವನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿರುವ ಬೆನ್ನಲ್ಲೇ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿಗೆ (HD Kumaraswamy) ಹೊಸ ಸವಾಲು ಎದುರಾಗಿದೆ. ಅವರು ಮಂಡ್ಯದಿಂದ ಲೋಕಸಭೆ ಅಖಾಡಕ್ಕೆ ಇಳಿಯಬೇಕು ಎಂದು ಮಂಡ್ಯದ ಕಾರ್ಯಕರ್ತರು ಒತ್ತಾಯಿಸಿದರೆ, ಸ್ಪರ್ಧಿಸಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಬೆಂಗಳೂರಿನ ಜೆಪಿ ನಗರ ನಿವಾಸದ ಬಳಿ ಭಾನುವಾರ ಬಂದಿದ್ದ ಮಂಡ್ಯ ಜಿಲ್ಲೆಯ ಬೆಂಬಲಿಗರು ಹೆಚ್‌ಡಿಕೆ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ, ಮಂಡ್ಯ ಬೆಂಬಲಿಗರನ್ನ ಸಮಾಧಾನಪಡಿಸಿದ್ದ ಕುಮಾರಸ್ವಾಮಿ, ಚನ್ನಪಟ್ಟಣ ಮುಖಂಡರನ್ನು ಸಂಪರ್ಕಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು.
ಆದರೆ, ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆಗೆ ಚನ್ನಪಟ್ಟಣ ಕಾರ್ಯಕರ್ತರು, ಮುಖಂಡರು ವಿರೋಧಿಸಿದ್ದಾರೆ. ಹೀಗಾಗಿ ಎಲ್ಲಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಕುಮಾರಸ್ವಾಮಿಗೆ ತಲೆನೋವು ಆರಂಭವಾಗಿದೆ.
ನೀವು ಮಾತ್ರ ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗುವುದು ಬೇಡ. ನೀವು ಚನ್ನಪಟ್ಟಣ ಬಿಟ್ಟು ಲೋಕಸಭೆಗೆ ಸ್ಪರ್ಧೆ ಮಾಡಿದರೆ, ರಾಮನಗರ ಕ್ಷೇತ್ರ ನಮ್ಮ ಕೈತಪ್ಪಿ ಹೋಗುತ್ತದೆ ಎಂದು ಚನ್ನಪಟ್ಟಣ ಕಾರ್ಯಕರ್ತರು ಕುಮಾರಸ್ವಾಮಿ ಬಳಿ ಹೇಳಿದ್ದಾರೆ. ಕುಮಾರಸ್ವಾಮಿ ಇಲ್ಲದೇ ಚನ್ನಪಟ್ಟಣವನ್ನು ಜೆಡಿಎಸ್ ತೆಕ್ಕೆಗೆ ಪಡೆಯುವುದು ಕಷ್ಟ. ರಾಮನಗರ ಜಿಲ್ಲೆಯ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆಯಾಗುತ್ತದೆ. ಹೀಗಾಗಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಎಂದು ಚನ್ನಪಟ್ಟಣ ಮುಖಂಡರು ಒತ್ತಡ ಹಾಕುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣ ಕಾರ್ಯಕರ್ತರನ್ನು ದೇವೇಗೌಡರು, ಕುಮಾರಸ್ವಾಮಿಯವರು ಮನವೊಲಿಸಲಿದ್ದಾರೆ ಎಂದಿದ್ದಾರೆ. ಕುಮಾರಸ್ವಾಮಿ ಅವರು, ದೇವೇಗೌಡರು ಚನ್ನಪಟ್ಟಣ ಕಾರ್ಯಕರ್ತರನ್ನು ಮನವೊಲಿಸಲಿದ್ದಾರೆ. ಅದೇ ರೀತಿ ಮಂಡ್ಯ ಕಾರ್ಯಕರ್ತರನ್ನು ಮನವೊಲಿಸುತ್ತಾರೆ. ನಾನು ಮೂರು ತಿಂಗಳ ಹಿಂದೆಯೇ ನನ್ನ ನಿರ್ಧಾರ ತಿಳಿಸಿದ್ದೇನೆ. ನಾನು ಪಕ್ಷದ ಕಾರ್ಯಕರ್ತರನಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತವರು ಜಿಲ್ಲೆಯಲ್ಲಿ ಮೂರು ದಿನ ಸಿದ್ದರಾಮಯ್ಯ ಠಿಕಾಣಿ; ಮೈಸೂರು, ಚಾಮರಾಜನಗರ ಗೆಲ್ಲಲು ಮಾಸ್ಟರ್ ಪ್ಲಾನ್
ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವುದಂತೂ ಖಚಿತ ಆಗಿದೆ. ಹೀಗಾಗಿ ಸುಮಲತಾ ನಡೆ ಕುತೂಹಲ ಮೂಡಿಸಿದೆ. ಬೆಂಬಲಿಗರ ಸಭೆ ನಡೆಸಲಿರುವ ಸುಮಲತಾ, ಸ್ಪರ್ಧೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಪಕ್ಷೇತರರಾಗಿ ಸುಮಲತಾ ಕಣಕ್ಕಿಳಿದರೆ ಮೈತ್ರಿ ಅಭ್ಯರ್ಥಿಗೆ ಸಮಸ್ಯೆ ಆಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಚಲುವರಾಯಸ್ವಾಮಿ, ಸುಮಲತಾ ನಿಲುವು ಏನು ಎಂದು ಗೊತ್ತಿಲ್ಲ. ನೋಡೋಣ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Mon, 25 March 24