ಬೆಂಗಳೂರು, ಜನವರಿ 17: ಮಾಜಿ ಸಚಿವ, ಬಿಜೆಪಿ ಮುಖಂಡ ಜೆಸಿ ಮಾಧುಸ್ವಾಮಿ (JC Madhuswamy) ಅವರು ತುಮಕೂರಿನಿಂದ ಲೋಕಸಭೆ ಚುನಾವಣೆಗೆ (Tumakuru Lok Sabha constituency) ಸ್ಪರ್ಧಿಸಲು ಟಿಕೆಟ್ ಕೋರಿದ್ದಾರೆ ಎಂಬ ಸುಳಿವು ದೊರೆತಿದೆ. ಮಾಜಿ ಸಚಿವ ವಿ ಸೋಮಣ್ಣ ಸಹ ತುಮಕೂರು ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಹೀಗಾಗಿ ಈ ವಿದ್ಯಮಾನ ರಾಜ್ಯ ಬಿಜೆಪಿಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಸೋಮಣ್ಣ ರಾಜ್ಯಸಭೆಯಿಂದ ಟಿಕೆಟ್ ಕೋರಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅವರಿಗೆ ಶಾ ಸೂಚಿಸಿದ್ದರು. ತುಮಕೂರು ಟಿಕೆಟ್ ಘೋಷಣೆಯಾದ ನಂತರ ನಿರ್ಧಾರ ಕೈಗೊಳ್ಳುವುದಾಗಿ ಸೋಮಣ್ಣ ಹೇಳಿದ್ದರು.
ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಸೋಮಣ್ಣ ಕಳೆದ ವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಅವರು ಹೈಕಮಾಂಡ್‌ನಿಂದ ಲೋಕಸಭೆ ಟಿಕೆಟ್‌ಗೆ ಬೇಡಿಕೆ ಇಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ರಾಜ್ಯಸಭಾ ಟಿಕೆಟ್ ಕೇಳಿರುವುದಾಗಿ ಹೇಳಿದ್ದರು. ಆದರೆ, ಕಠಿಣವಾದ ಮೂರು ಲೋಸಕಭೆ ಕ್ಷೇತ್ರಗಳನ್ನು ಕೊಡಿ ಗೆಲ್ಲಿಸಿಕೊಂಡು ಬರುವೆ ಎಂದು ಹೈಕಮಾಂಡ್ಗೆ ತಿಳಿಸಿದ್ದರು.
ಸೋಮಣ್ಣ ಭೆಟಿಯ ನಂತರದ ಬೆಳವಣಿಗೆಗಳು ಹಲವಾರು ಅಭ್ಯರ್ಥಿಗಳಲ್ಲಿ ಆಶಾಭಾವ ಮೂಡಿಸಿದೆ. ಅವರಲ್ಲಿ ಮಾಧುಸ್ವಾಮಿ ಕೂಡ ಒಬ್ಬರು. ಇವರು ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು.
ಸೋಮಣ್ಣ ಘೋಷಣೆ ಬಳಿಕ ಮಾಧುಸ್ವಾಮಿ ಬಿಜೆಪಿಯಿಂದ ಲೋಕಸಭೆ ಪಡೆಯುವ ಆಕಾಂಕ್ಷಿಯಾಗಿದ್ದಾರೆ. ಕೆಲವು ವರದಿಗಳ ಪ್ರಕಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಮಾಧುಸ್ವಾಮಿಗೆ ಬೆಂಬಲ ನೀಡಿದ್ದಾರೆ.
ಆದರೆ, ತುಮಕೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಸ್. ಬಸವರಾಜ್ ಸೇರಿದಂತೆ ಹಲವು ಶಾಸಕರು ಸೋಮಣ್ಣ ಅವರ ಬೆಂಬಲಕ್ಕೆ ನಿಂತಿದ್ದು, ಮಾಧುಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಒಂದು ಕೆನ್ನೆಗೆ ಹೊಡೆದ್ರೆ ತಲೆಯನ್ನೇ ತೆಗೆಯುವ ಸಂತಾನದವರು ನಾವು: ಮತ್ತೆ ವಿವಾದದ ಕಿಡಿ ಹೊತ್ತಿಸಿದ ಅನಂತಕುಮಾರ್ ಹೆಗಡೆ
ಮಾಜಿ ಸಚಿವರು ಟಿಕೆಟ್‌ಗಾಗಿ ಹರಸಾಹಸ ಪಡುತ್ತಿದ್ದರೂ ಬಿಜೆಪಿ ಮುಖಂಡರಿಗೇ ತುಮಕೂರಿನಿಂದ ಟಿಕೆಟ್ ಸಿಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಎನ್ಡಿಎ ಸೇರಿರುವ ಜೆಡಿಎಸ್ ಕನಿಷ್ಠ ನಾಲ್ಕು ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಅದರಲ್ಲಿ ತುಮಕೂರು ಸಹ ಒಂದಾಗಿರಬಹುದು ಎಂದು ಭಾವಿಸಲಾಗಿದೆ. ಯಾಕೆಂದರೆ, ತುಮಕೂರಿನಲ್ಲಿ ಜೆಡಿಎಸ್ ಉತ್ತಮ ನೆಲೆ ಹೊಂದಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ