ಒಂದು ಕೆನ್ನೆಗೆ ಹೊಡೆದ್ರೆ ತಲೆಯನ್ನೇ ತೆಗೆಯುವ ಸಂತಾನದವರು ನಾವು: ಮತ್ತೆ ವಿವಾದದ ಕಿಡಿ ಹೊತ್ತಿಸಿದ ಅನಂತಕುಮಾರ್ ಹೆಗಡೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಗನೇ ಎನ್ನುವ ಮೂಲಕ ವಿವಾದ ಸೃಷ್ಟಿಸಿಕೊಂಡಿರುವ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಮತ್ತೆ ತಮ್ಮ ಮಾತಿನ ವರಸೆ ಮುಂದುವರೆಸಿದ್ದಾರೆ. ಒಂದು ಕೆನ್ನೆಗೆ ಹೊಡೆದ್ರೆ ತಲೆಯನ್ನೇ ತೆಗೆಯುವ ಸಂತಾನದವರು ನಾವು ಎಂದಿದ್ದಾರೆ. ಈ ಮೂಲಕ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕಾರವಾರ, (ಜನವರಿ 16): ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಮಾತನಾಡಿದ ಅವರು, ಒಂದು ಕೆನ್ನೆಗೆ ಹೊಡೆದ್ರೆ ಮತ್ತೊಂದು ಕೆನ್ನೆ ತೋರಿಸುವ ಸಂತಾನ ನಮ್ಮದಲ್ಲ. ಒಂದು ಕೆನ್ನೆಗೆ ಹೊಡೆದರೆ ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು. ನಮ್ಮದು ವೀರ ಸಂತಾನ, ಹೇಡಿಗಳ ಸಂತಾನ ಅಲ್ಲ ಎಂದು ಗುಡುಗಿದರು.
ನಮ್ಮಮ್ಮ ತನ್ನ ಎದೆಹಾಲು ಕುಡಿಸಿ ಬೆಳೆಸಿದ್ದಾರೆ, ಬೇವರ್ಸಿ ಹಾಲನ್ನು ಅಲ್ಲ. ತಾಯಿ ಹಾಲು ಕುಡಿದಿದ್ದಕ್ಕೆ ಗಂಡುಭಾಷೆ ಹುಟ್ಟಿನಿಂದಲೇ ಬಂದಿದೆ. ಏಕವಚನದಲ್ಲಿ ನೀವು ಮಾತಾಡಿದ್ರೆ ನಾವೂ ಏಕಚನದಲ್ಲಿ ಮಾತನಾಡುತ್ತೇವೆ. ಸಿಎಂ ಸಿದ್ದರಾಮಯ್ಯನವರೇ ನೀವು ಸಭ್ಯತೆ ಬಗ್ಗೆ ಕಲಿತುಕೊಳ್ಳಿ. ವಿಧಾನಸಭೆಯಲ್ಲಿ ಶಾಸಕರಿಗೆ, ಪತ್ರಕರ್ತರಿಗೆ ಏಕವಚನದಲ್ಲಿ ಮಾತಾಡುತ್ತೀರಿ. ನಮಗೆ ತಾಕತ್ ಇಲ್ಲವಾ?, ನಮಗೆ ಮಾತನಾಡಲು ಬರೋದಿಲ್ಲವಾ? ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅನಂತಕುಮಾರ ಹೆಗಡೆ ಎಲ್ಲಿ ಸಿಗ್ತಾನೋ ಅಲ್ಲೇ ಹಿಡಿದು ಹೊಡೆಯುತ್ತೇವೆ: ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಕೆ
ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ, ನಡೆಯಲಿ. ಈಶ್ವರನಿಗೆ ರುದ್ರಾಭಿಷೇಕ ನಡೆಯುತ್ತಿದೆ, ನಡೆಯಲಿ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಜೀವ ಇರುವವರೆಗೆ ತಲೆತಗ್ಗಿಸುವುದು ಸಾಧ್ಯವೇ ಇಲ್ಲ. ನಾನೇನಾದರೂ ತಲೆತಗ್ಗಿಸಿದರೆ ನೀವು ಹಾಕಿದ ವೋಟಿಗೆ ಅಪಮಾನ. ಯಾರ ಕುಣಿಯುತ್ತಾರೋ ಕುಣಿಯಲಿ, ನಮಗೂ ತಾಂಡವ ನೃತ್ಯ ಬರುತ್ತೆ ಎಂದರು.
ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಹೆಗಡೆ ನನ್ನ ವಿರುದ್ಧ ಕೇಸ್ ದಾಖಲಿಸಿ ನನ್ನನ್ನು ಮುನ್ನೆಲೆಗೆ ತಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ. ಅಯೋಧ್ಯೆಯ ರಾಮಮಂದಿರವನ್ನು ಯಾರೋ ಗುತ್ತಿಗೆದಾರ ಕಟ್ಟಿದ್ದಲ್ಲ. ಹಿಂದೂ ಸಮಾಜದ ಭಾವನೆ, ಜಾಗೃತ ಹಿಂದೂ ಸಮಾಜ ಕಟ್ಟಿದ ಮಂದಿರ. ಹಿಂದೂ ಸಮಾಜ ಜಾತ್ಯತೀತತೆಯಿಂದ ಒಡೆದ ತುತ್ತೂರಿಯ ಧ್ವನಿ ಅಲ್ಲ. ಹಿಂದೂ ಸಮಾಜ ಎಂಬುದು ಜಾಗೃತ ರಣಕಹಳೆ. ಯಾರೂ ಬೇಕಾದರೂ ಸಂಸದ ಅಥವಾ ಶಾಸಕರಾಗಬಹುದು. ಆದರೆ ಒಬ್ಬ ನಾಯಕನಾಗಬೇಕಾದರೆ ವಿವಾದವನ್ನು ಸ್ಥಾನ ಮಾಡಬೇಕು ಎಂದು ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Tue, 16 January 24