ಟೆಂಟ್​​ನಲ್ಲಿ 2 ಗೊಂಬೆ ಇಟ್ಟು ರಾಮ, ರಾಮ ಎನ್ನುತ್ತಿದ್ದರು: ಅಯೋಧ್ಯೆ ಬಗ್ಗೆ ಸಚಿವ ರಾಜಣ್ಣ ವಿವಾದಿತ ಹೇಳಿಕೆ

ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.

ಟೆಂಟ್​​ನಲ್ಲಿ 2 ಗೊಂಬೆ ಇಟ್ಟು ರಾಮ, ರಾಮ ಎನ್ನುತ್ತಿದ್ದರು: ಅಯೋಧ್ಯೆ ಬಗ್ಗೆ ಸಚಿವ ರಾಜಣ್ಣ ವಿವಾದಿತ ಹೇಳಿಕೆ
ಕೆಎನ್ ರಾಜಣ್ಣ
Follow us
TV9 Web
| Updated By: Ganapathi Sharma

Updated on: Jan 17, 2024 | 9:08 AM

ತುಮಕೂರು, ಜನವರಿ 16: ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಅಯೋಧ್ಯೆ (Ayodhya) ರಾಮಲಲ್ಲಾ (Ram Lalla) ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. ತುಮಕೂರಿನಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಸಮಾರಂಭದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ. ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಹೇಳಿದ್ದಾರೆ.

ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಅನೇಕ ರಾಮ ದೇಗುಲಗಳಿವೆ. ಆದರೆ, ಬಿಜೆಪಿ ಚುನಾವಣೆಗಾಗಿ ದೇಗುಲ ಕಟ್ಟುತ್ತಿದೆ. ಬಿಜೆಪಿ ಜನರನ್ನು ಮೋಸ ಮಾಡುತ್ತಿದೆ ಎಂದು ರಾಜಣ್ಣ ಟೀಕಿಸಿದ್ದಾರೆ. ರಾಜಣ್ಣ ಹೇಳಿಕೆಗೆ ಇದೀಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ರಾಮಮಂದಿರದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಜನವರಿ 22 ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ಹೊರಗುಳಿಯಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.

ಅನಂತಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು

ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ನಿಂದಿಸಿದ್ದಕ್ಕೆ ತಿರುಗೇಟು ನೀಡಿದ ರಾಜಣ್ಣ, ಚುನಾವಣೆಗೆ ಆರು ತಿಂಗಳಿರುವಾಗ ಬಂದು ಹೀಗೆಲ್ಲ ಹೇಳಿಕೆ ಕೊಡುತ್ತಾನೆ. ನಾಲ್ಕೂವರೆ ವರ್ಷ ಮಲಗಿರುತ್ತಾನೆ. ಅದೆಲ್ಲಿರುತ್ತಾನೋ, ಈಗ ಬಂದು ಹಿಂದುತ್ವ ಹಿಂದುತ್ವ ಎಂದು ಚುನಾವಣೆ ಮುಗಿದ ನಂತರ ಪತ್ತೆ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆಯಲ್ಲಿ ಸಂಭ್ರಮ

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವಂತೆಯೇ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠೆಯ ಪೂರ್ವಭಾವಿ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ.

ಇದನ್ನೂ ಓದಿ: ಕನಸಲ್ಲಿ ಕಂಡ ರಾಮನ ದರ್ಶನಕ್ಕೆ ಅಯೋಧ್ಯೆಗೆ 700 ಕಿಮೀ ಪಾದಯಾತ್ರೆ ಹೊರಟ ಮುಸ್ಲಿಂ ಮಹಿಳೆ!

ಮಂಗಳವಾರದಿಂದಲೇ ಪೂಜಾ ಕೈಂಕರ್ಯ ಆರಂಭವಾಗಿದೆ. ಇಂದು (ಬುಧವಾರ) ಮಂದಿರದ ಆವರಣಕ್ಕೆ ರಾಮಲಲ್ಲಾ ಮೂರ್ತಿ ಪ್ರವೇಶ ಮಾಡಲಾಗುವುದು. ಗುರುವಾರ ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗುವುದು. ಜನವರಿ 21ರವರೆಗೂ ಅಯೋಧ್ಯೆಯಲ್ಲಿ ಪೂಜೆ ಪುನಸ್ಕಾರ ನಡೆಯಲಿದ್ದು, 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ