ಬೆಳಗಾವಿ, ಸೆ.14: ಬೆಳಗಾವಿ (Belagavi) ಜಿಲ್ಲಾ ಬಿಜೆಪಿಯಲ್ಲಿನ ಗುಂಪುಗಾರಿಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ನಡುವೆ ಇದೀಗ ನಾಯಕರೇ ಲೋಕಸಭಾ ಟಿಕೆಟ್ (Lok Sabha Ticket)ಗಾಗಿ ಜಿದ್ದಿಗೆ ಬಿದ್ದಿರುವುದು ಬಿಜೆಪಿ ವರಿಷ್ಠರಿಗೆ ಇನ್ನೊಂದು ತಲೆ ನೋವು ಶುರುವಾಗಿದೆ. ಈವರೆಗೂ ನಾವೆಲ್ಲಾ ಒಂದೇ ಎಂದು ಓಡಾಡುತ್ತಿದ್ದವರೇ ಇದೀಗ ಟಿಕೆಟ್ಗಾಗಿ ಒಬ್ಬರಿಗೊಬ್ಬರನ್ನ ಮೀರಿಸುವಷ್ಟು ಪೈಪೋಟಿಗಿಳಿದಿದ್ದಾರೆ. ಒಂದೇ ಬಣದಲ್ಲಿ ಗುರುತಿಸಿಕೊಂಡಿದ್ದವರು ಟಿಕೆಟ್ ವಿಚಾರದಲ್ಲಿ ದೆಹಲಿ ಮಟ್ಟದಲ್ಲಿ ಈಗಗಾಲೇ ಲಾಬಿ ಕೂಡ ಆರಂಭಿಸಿದ್ದಾರೆ. ಇನ್ನು ಬೆಳಗಾವಿ ಲೋಕಸಭಾ ಹಾಲಿ ಸಂಸದೆ ಮಂಗಲಾ ಅಂಗಡಿ ಮತ್ತೆ ರೇಸ್ನಲ್ಲಿದ್ರೆ, ಅವಕಾಶ ಕೊಟ್ರೇ ನಾವು ಸ್ಪರ್ಧೆ ಮಾಡ್ತೇವಿ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಹಾಂತೇಶ್ ಕವಟಗಿಮಠ, ಅನಿಲ್ ಬೆನಕೆ ಸೇರಿದಂತೆ ಹಲವರು ಹೇಳುತ್ತಿದ್ದಾರೆ.
ಅಷ್ಟಕ್ಕೂ ಇಷ್ಟೊಂದು ದೊಡ್ಡ ಲಿಸ್ಟ್ ಬೆಳೆಯಲು ಕಾರಣವೇ ಹಾಲಿ ಸಂಸದೆ ಮಂಗಲಾ ಅಂಗಡಿ.ಕೆಲ ದಿನಗಳಿಂದಲೂ ಹಾಲಿ ಸಂಸದೇ ಮಂಗಲಾ ಅಂಗಡಿ ಸ್ಪರ್ಧೆ ಮಾಡ್ತಿಲ್ಲ ಎಂದು ರಾಜಕೀಯದಲ್ಲಿ ಚರ್ಚೆಗಳು ಶುರುವಾಗಿತ್ತು. ಇದರಿಂದ ಅವಕಾಶ ಸಿಕ್ರೇ ಬಿಡುವುದ್ಯಾಕೆ ಎಂದು ಕೆಲವರು ಜಿದ್ದಿಗೆ ಬಿದ್ದಿದ್ರೆ, ಇನ್ನೂ ಕೆಲವರು ಕುಟುಂಬಕ್ಕೆ ನೀಡದೇ ಹೊಸಬರಿಗೆ ಮಣೆ ಹಾಕುವಂತೆ ಕೇಳುತ್ತಿದ್ದಾರೆ. ಆದರೆ, ಈ ಎಲ್ಲ ಬೆಳವಣಿಗೆ ನಡುವೆ ಟಿಕೆಟ್ ಆಕಾಂಕ್ಷಿಗಳಿಗೆ ಸಂಸದೆ ಮಂಗಲಾ ಅಂಗಡಿ ಶಾಕ್ ನೀಡಿದ್ದಾರೆ. ನಾನು ಟಿಕೆಟ್ ಕೇಳುವ ಪ್ರಶ್ನೆಯೇ ಬರಲ್ಲ, ನಾನು ಹಾಲಿ ಸಂಸದೆ ನನಗೆ ಟಿಕೆಟ್ ನೀಡ್ತಾರೆ ಎನ್ನುವ ಮೂಲಕ ತಾವೂ ರೇಸ್ನಲ್ಲಿದ್ದೇವೆ ಅನ್ನೊದನ್ನ ಹೊರ ಹಾಕಿದ್ದಾರೆ.
ಇನ್ನು ಈ ಕುರಿತು ಇಬ್ಬರು ಪುತ್ರಿಯರಲ್ಲಿ ಒಬ್ಬರಿಗೆ ಯಾರಿಗಾದ್ರೂ, ಟಿಕೆಟ್ ಕೇಳಬೇಕ ಅಥವಾ ತಾವೇ ಸ್ಪರ್ಧೆ ಮಾಡಬೇಕಾ ಅನ್ನೋದನ್ನ ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ. ಆದ್ರೆ, ಟಿಕೆಟ್ ಬದಲಾವಣೆ ಕುರಿತು ಚರ್ಚೆ ಆಗಿಲ್ಲ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಳಷ್ಟು ಜನ ಇರ್ತಾರೆ ಎಂದು ಮಂಗಲಾ ಅಂಗಡಿ ಹೇಳಿದ್ದಾರೆ. ಇದರ ಜೊತೆಗೆ ಬೀಗರಾದ ಮಾಜಿ ಸಿಎಂ ಜಗದೀಶ್ ಶೆಟ್ಟೆರ್ ಜತೆಗೆ ಕಾಂಗ್ರೆಸ್ಗೆ ಹೋಗ್ತಿರಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ಕಾಂಗ್ರೆಸ್ ಸೇರುವುದು ಸುಳ್ಳು, ಟಿಕೆಟ್ ಸಿಕ್ರೂ ಸಿಗದೇ ಇದ್ರೂ ಬಿಜೆಪಿಯಲ್ಲಿ ನಾನು ಮುಂದುವರೆಯುವೆ. ಯಾರಿಗೆ ಟಿಕೆಟ್ ನೀಡಿದ್ರೂ ನಾನು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಟಿಕೆಟ್ ತಪ್ಪುತ್ತೆ ಅನ್ನೋದು ಊಹಾಪೋಹಗಳಷ್ಟೇ, ನನ್ನ ಜತೆಗೆ ಯಾವ ನಾಯಕರು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಇತ್ತ ಮಾಜಿ ಶಾಸಕ ಅನಿಲ್ ಬೆನಕೆ ಕೂಡ ಟಿಕೆಟ್ ಕೇಳುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮಂಗಲಾ ಅಂಗಡಿಯವರು ತಮ್ಮ ಪುತ್ರ ಶ್ರದ್ಧಾ ಮತ್ತು ಸ್ಪೂರ್ತಿ ಇಬ್ಬರು ಪುತ್ರಿಯರ ಪೈಕಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡಬೇಕು. ಇಲ್ಲ ತಮಗೆ ಟಿಕೆಟ್ ನೀಡಬೇಕು ಎಂದು ಮಂಗಲಾ ಅಂಗಡಿ ಡಿಮ್ಯಾಂಡ್ ಮಾಡಲಿದ್ದಾರೆ. ಹಿಂದುತ್ವದ ಆಧಾರದ ಮೇಲೆ ನಾನು ಟಿಕೆಟ್ ಕೇಳ್ತೆನಿ. ವಿಧಾನಸಭೆಯಲ್ಲಿ ತಮಗೆ ಟಿಕೆಟ್ ಮಿಸ್ ಆದಾಗ ಖುದ್ದು ಕೇಂದ್ರ ಸಚಿವ ಅಮಿತ್ ಶಾ ಅವರೇ ಹೇಳಿದ್ದು, ಹೀಗಾಗಿ ಆದಷ್ಟು ಬೇಗ ಅಮಿತ್ ಶಾ ಅವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.
ಜೊತೆಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕೂಡ ತಾವು ಟಿಕೆಟ್ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ಅವಕಾಶ ಕೊಟ್ರೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಇತ್ತ ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ ಸೇರಿದಂತೆ ಇನ್ನೂ ಹಲವರು ಹೈಕಮಾಂಡ್ ಮೇಲೆ ತಮ್ಮದೇ ಆದ ರೀತಿಯಲ್ಲಿ ಒತ್ತಡ ಹಾಕುವುದು, ಲಾಬಿ ಮಾಡುತ್ತಿದ್ದಾರೆ. ಒಟ್ಟಾರೆ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಪ್ರಮುಖ ನಾಯಕರೇ ಇದೀಗ ಟಿಕೆಟ್ಗಾಗಿ ಡಿಮ್ಯಾಂಡ್ ಮಾಡುತ್ತಿರುವುದು ಬಿಜೆಪಿ ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Thu, 14 September 23