ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡದಂತೆ ಬೆಳಗಾವಿ ಬಿಜೆಪಿ ನಾಯಕರ ಪಟ್ಟು: ಕೇಂದ್ರ ನಾಯಕರ ಭೇಟಿಗೆ ದೆಹಲಿಗೆ ಹೋಗಲು ತಯಾರಿ
ಧಾರವಾಡ ಟಿಕೆಟ್ ಪ್ರಹ್ಲಾದ್ ಜೋಶಿಗೆ ಅವರಿಗೆ ನೀಡಿದ್ದರೆ, ಹಾವೇರಿ ಟಿಕೆಟ್ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಹೀಗಾಗಿ ಬೆಳಗಾವಿ ಟಿಕೆಟ್ ಜಗದೀಶ್ ಶೆಟ್ಟರ್ಗೆ ನೀಡುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ ಬೆಳಗಾವಿ ಸ್ಥಳೀಯ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದಾರೆ.
ಬೆಳಗಾವಿ, ಮಾರ್ಚ್ 17: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಧಾರವಾಡ (Dharwad) ಮತ್ತು ಹಾವೇರಿ (Haveri) ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಬೆಳಗಾವಿ ಲೋಕಸಭೆ ಟಿಕೆಟ್ ನೀಡದಂತೆ ಬೆಳಗಾವಿ (Belagavi) ಬಿಜೆಪಿ (BJP) ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು, ಕೆಲ ಮುಖಂಡರ ಪಟ್ಟು ಹಿಡಿದಿದ್ದಾರೆ. ಇಷ್ಟೇ ಅಲ್ಲದೆ ಟಿಕೆಟ್ ನೀಡುವುದನ್ನು ವಿರೋಧಿಸಿ ದೆಹಲಿಗೆ ಹೋಗಲು ಮುಖಂಡರ ಪ್ಲ್ಯಾನ್ ಮಾಡಿದ್ದಾರೆ.
ಈ ವಿಚಾರವಾಗಿ ಪ್ರಭಾಕರ್ ಕೋರೆ ಮನೆಯಲ್ಲಿ ಶಾಸಕ ಅಭಯ್ ಪಾಟೀಲ್, ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಮಹಾಂತೇಶ ಕವಟಗಿಮಠ, ಎಂ.ಬಿ.ಜಿರಲೆ ಸಭೆ ಸೇರಿದ್ದರು. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕಡಾಡಿ ನೇತೃತ್ವದಲ್ಲಿ ದೆಹಲಿಗೆ ಹೋಗಲು ಪ್ಲ್ಯಾನ್ ಮಾಡಿದ್ದಾರೆ. ಇನ್ನೇರಡು ದಿನಗಳಲ್ಲಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಸ್ಥಳೀಯರಿಗೆ ಟಿಕೆಟ್ ಕೊಡಿ ಅಂತ ನಾಯಕರು ಮನವಿ ಮಾಡಲಿದ್ದಾರೆ. ಇಂದು (ಮಾ.17) ಮಧ್ಯಾಹ್ನ ಒಂದು ಬಾರಿ ಸಭೆ ಸೇರಿ ಫೈನಲ್ ಮಾಡಲು ತೀರ್ಮಾನಿಸಿದ್ದಾರೆ. ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡಿದರೆ ಪರಿಣಾಮ ಬೇರೆ ಆಗುತ್ತದೆ. ಅಸಮಾಧಾನ ಭುಗಿಲೇಳುತ್ತೆ ಎಂದು ಕೇಂದ್ರ ನಾಯಕರಿಗೆ ಮನವರಿಕೆ ಮಾಡಲಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕ್ಷೇತ್ರದಲ್ಲಿ ನಾನು ನೂರಕ್ಕೆ ನೂರಷ್ಟು ಗೆಲ್ಲುತ್ತೇನೆ: ಜಗದೀಶ್ ಶೆಟ್ಟರ್
ಶೆಟ್ಟರ್ಗೆ ಏಕೆ ಅತಂತ್ರ ಪರಿಸ್ಥಿತಿ
ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದ್ರೆ, ಇತ್ತೀಚೆಗೆ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ವಾಪಸ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆಗೂ ಮುನ್ನವೇ ಅವರು ಬೆಳಗಾವಿ ಅಥವಾ ಹುಬ್ಬಳ್ಳಿ-ಧಾರವಾಡ, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನಿಡಬೇಕೆಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಬಿಜೆಪಿ ನಾಯಕರು ಸಹ ಯಾವುದಾದರೂ ಒಂದು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು.
ಆದರೆ, ಇದೀಗ ಧಾರವಾಡ ಟಿಕೆಟ್ ಪ್ರಹ್ಲಾದ್ ಜೋಶಿಗೆ ಅವರಿಗೆ ನೀಡಿದ್ದರೆ, ಹಾವೇರಿ ಟಿಕೆಟ್ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಇದೀಗ ಉಳಿದಿರುವುದು ಬೆಳಗಾವಿ ಮಾತ್ರ. ಆದರೆ, ಬಿಜೆಪಿ ಹೈಕಮಾಂಡ್ ಬೆಳಗಾವಿ ಟಿಕೆಟ್ ಘೋಷಣೆ ಮಾಡದೇ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಆದರೆ ಬೆಳಗಾವಿ ಟಿಕೆಟ್ ಜಗದೀಶ್ ಶೆಟ್ಟರ್ಗೆ ಪಕ್ಕಾ ಎಂಬ ಸುದ್ದಿ ಹರದಾಡುತ್ತಿದೆ. ಇದನ್ನು ವಿರೋಧಿಸಿ ಬೆಳಗಾವಿ ಸ್ಥಳೀಯ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದ್ದಾರೆ. ಅಲ್ಲದೆ ದೆಹಲಿಗೂ ಭೇಟಿ ನೀಡಲು ನಿರ್ಧರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ