Maharashtra Cabinet: ರಾಷ್ಟ್ರಪತಿ ಚುನಾವಣೆ ಬಳಿಕ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ

| Updated By: ಸುಷ್ಮಾ ಚಕ್ರೆ

Updated on: Jul 12, 2022 | 8:24 AM

ಜುಲೈ 18ರ ರಾಷ್ಟ್ರಪತಿ ಚುನಾವಣೆಯ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಶಿವಸೇನಾ ಶಾಸಕರ ಬಂಡಾಯ ಪಾಳಯ ತಿಳಿಸಿದೆ.

Maharashtra Cabinet: ರಾಷ್ಟ್ರಪತಿ ಚುನಾವಣೆ ಬಳಿಕ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ
ಏಕನಾಥ್ ಶಿಂಧೆ
Image Credit source: India Today
Follow us on

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಸರ್ಕಾರದ ಸಚಿವ ಸಂಪುಟದ ವಿಸ್ತರಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲವಿದ್ದರೂ ಬಿಜೆಪಿ ಮುಖ್ಯಮಂತ್ರಿ ಪಟ್ಟವನ್ನು ಶಿವಸೇನೆ (Shiv Sena) ಬಂಡಾಯ ಬಣದ ನಾಯಕ ಏಕನಾಥ್ ಶಿಂಧೆಗೆ ಬಿಟ್ಟುಕೊಟ್ಟಿತ್ತು. ಹೀಗಾಗಿ, ಈ ಬಾರಿಯ ಸಚಿವರ ಪಟ್ಟಿಯಲ್ಲಿ ಬಿಜೆಪಿಗೆ ಸಿಂಹಪಾಲು ಸಿಗುವ ಸಾಧ್ಯತೆಯಿದೆ. ಈಗಾಗಲೇ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಭೇಟಿಯಾಗಿರುವ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ, ರಾಷ್ಟ್ರಪತಿ ಚುನಾವಣೆಯ ಬಳಿಕವೇ ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ ಎಂದು ಶಿವಸೇನಾ ಬಂಡಾಯ ಬಣ ಮಾಹಿತಿ ನೀಡಿದೆ.

ಜುಲೈ 18ರ ರಾಷ್ಟ್ರಪತಿ ಚುನಾವಣೆಯ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಶಿವಸೇನಾ ಶಾಸಕರ ಬಂಡಾಯ ಪಾಳಯ ತಿಳಿಸಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ಬಂಡಾಯ ಶಾಸಕ ಬಣದ ವಕ್ತಾರ ದೀಪಕ್ ಕೇಸರ್ಕರ್, ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ತೊಂದರೆ ಇಲ್ಲ. ರಾಷ್ಟ್ರಪತಿ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದಿದ್ದಾರೆ. ಶಿವಸೇನೆಯ ಬಂಡಾಯ ಪಾಳಯ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ನಡುವೆ ನಡೆಯುತ್ತಿರುವ ಕಾನೂನು ಹೋರಾಟದಿಂದಾಗಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆಯೇ? ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಇಂದು ದೇವೇಂದ್ರ ಫಡ್ನವಿಸ್- ಏಕನಾಥ್ ಶಿಂಧೆಯಿಂದ ಪ್ರಧಾನಿ ಮೋದಿ ಭೇಟಿ; ಅಂತಿಮವಾಗುತ್ತಾ ಸಚಿವರ ಪಟ್ಟಿ?

ಬಂಡಾಯ ಪಾಳಯದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಯಾಗಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಇಬ್ಬರೂ ಜೂನ್ 30ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಅವರನ್ನು ಹೊರತುಪಡಿಸಿ ಸಂಪುಟದಲ್ಲಿ ಬೇರಾವ ಸಚಿವರೂ ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ.

ಜುಲೈ 14ರಂದು ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ತಮಗೆ ಬೆಂಬಲ ಕೋರಲು ಮುಂಬೈಗೆ ಭೇಟಿ ನೀಡಲಿದ್ದಾರೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 16 ಮತ್ತು 17ರಂದು ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆಗಳು ನಡೆಯಲಿವೆ. ಹೀಗಾಗಿ, ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಬ್ಯುಸಿಯಾಗಿರುತ್ತಾರೆ. ಆದ್ದರಿಂದ ಪ್ರಮಾಣ ವಚನ ಸ್ವೀಕಾರಕ್ಕೆ ತಯಾರಿ ನಡೆಸಲು ಸಮಯ ಸಿಗುವುದಿಲ್ಲ. ಸದ್ಯಕ್ಕೆ ಯಾರಿಗೂ ಅವಸರವಿಲ್ಲ. ಹೀಗಾಗಿ, ರಾಷ್ಟ್ರಪತಿ ಚುನಾವಣೆಯ ಬಳಿಕ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.