Maharashtra Political Crisis: ಬಂಡಾಯ ಶಾಸಕರು ಗುಜರಾತ್​ನಿಂದ ಅಸ್ಸಾಂಗೆ ಶಿಫ್ಟ್, 40 ಶಾಸಕರ ಬೆಂಬಲವಿದೆ ಎಂದ ಏಕನಾಥ್ ಶಿಂಧೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 22, 2022 | 7:59 AM

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ 10 ಮುಖ್ಯ ಬೆಳವಣಿಗೆಗಳಿವು...

Maharashtra Political Crisis: ಬಂಡಾಯ ಶಾಸಕರು ಗುಜರಾತ್​ನಿಂದ ಅಸ್ಸಾಂಗೆ ಶಿಫ್ಟ್, 40 ಶಾಸಕರ ಬೆಂಬಲವಿದೆ ಎಂದ ಏಕನಾಥ್ ಶಿಂಧೆ
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ
Follow us on

ಮುಂಬೈ: ಮಹಾರಾಷ್ಟ್ರದ ಶಿವಸೇನೆಯ (Shiv Sena) ನಾಯಕ, ಮಹಾ ವಿಕಾಸ ಅಘಾಡಿ (Maha Vikas Aghadi) ಮೈತ್ರಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿರುವ ಏಕನಾಥ್ ಶಿಂಧೆ (Eknath Shindhe) ನೇತೃತ್ವದಲ್ಲಿ ಸುಮಾರು 21 ಶಾಸಕರು ಮಂಗಳವಾರ ಗುಜರಾತ್​ನ ಸೂರತ್​ನಿಂದ ಅಸ್ಸಾಂಗೆ ಸ್ಥಳಾಂತರಗೊಂಡಿದ್ದಾರೆ. ಶಿವಸೇನೆ ಎನ್​ಸಿಪಿ-ಎನ್​ಸಿಪಿ-ಕಾಂಗ್ರೆಸ್​ ಮೈತ್ರಿಯಿಂದ ಅಸ್ತಿತ್ವಕ್ಕೆ ಬಂದಿರುವ ಮಹಾರಾಷ್ಟ್ರ ಸರ್ಕಾರದ (Maharshtra Politics) ಇದೀಗ ಕುಸಿತದ ಅಂಚಿಗೆ ಬಂದು ನಿಂತಿದೆ. ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಸೇರಿದಂತೆ ಹಲವು ಹಿರಿಯ ನಾಯಕರು ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ. ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವೇ ಇದೆ. ಶಿವಸೇನೆಯ ಯಾವುದೇ ನಾಯಕರ ಸಂಪರ್ಕಕ್ಕೆ ಬಂಡಾಯ ಶಾಸಕರು ಸಿಗುತ್ತಿಲ್ಲ. ಹಲವು ಅಚ್ಚರಿಯ ಬೆಳವಣಿಗೆಗಳ ನಂತರ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ 10 ಮುಖ್ಯ ಬೆಳವಣಿಗೆಗಳಿವು…

  1. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯೊಂದಿಗೆ ಮಾತುಕತೆ ನಡೆದ ನಂತರ ಬಂಡಾಯ ಶಾಸಕರು ಅಸ್ಸಾಂಗೆ ಸ್ಥಳಾಂತರಗೊಂಡರು. ‘ಏಕನಾಥ್ ಶಿಂಧೆಗೆ ಏನು ಬೇಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ’ ಎಂದು ಉದ್ಧವ್ ಮುಂಬೈನಲ್ಲಿ ಪ್ರತಿಕ್ರಿಯಿಸಿದ್ದರು.
  2. ಶಿಂಧೆ ಮತ್ತು ಇತರ ಶಾಸಕರು ಶಿವಸೇನೆಗೆ ಹಿಂದಿರುಗಬೇಕು. ಏನಿದ್ದರೂ ಮಾತನಾಡಿ ಪರಿಹರಿಸಿಕೊಳ್ಳೋಣ ಎಂದು ಉದ್ಧವ್ ಠಾಕ್ರೆ ವಿನಂತಿಸಿದ್ದರು. ‘ಕಾಂಗ್ರೆಸ್-ಎನ್​ಸಿಪಿ ಮೈತ್ರಿ ಕಡಿದುಕೊಳ್ಳಬೇಕು. ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬೇಕು’ ಎಂದು ಏಕನಾಥ್ ಶಿಂಧೆ ತಾಕೀತು ಮಾಡಿದ್ದಾರೆ. ಆದರೆ ಉದ್ಧವ್ ಈ ಬೇಡಿಕೆಗೆ ಒಪ್ಪಿಲ್ಲ ಎಂದು ಮೂಲಗಳು ಹೇಳಿವೆ.
  3. ಇದನ್ನೂ ಓದಿ
    ಮಧ್ಯಪ್ರದೇಶ, ಕರ್ನಾಟಕದ ಬಳಿಕ ಮಹಾರಾಷ್ಟ್ರದಲ್ಲಿ ಅಪರೇಷನ್ ಕಮಲ; ಶಿವಸೇನಾ ವಿರುದ್ಧ ಬಂಡಾಯ ಎದ್ದ 22 ಶಾಸಕರು
    Maharashtra Political Crisis ಏಕನಾಥ್ ಶಿಂಧೆಗೆ ಕೊಕ್ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ
    Maharashtra Political Crisis: ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಏಕನಾಥ್ ಶಿಂಧೆ ಯಾರು
    Maharashtra Political Crisis: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರ ಬಂಡಾಯ
  4. ಏಕನಾಥ್ ಶಿಂಧೆ ಮತ್ತು ಅವರೊಂದಿಗೆ ಇರುವ ಬಂಡಾಯ ಶಾಸಕರು ಬಿಜೆಪಿ ಆಡಳಿತದ ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳನ್ನು ಒತ್ತಡ ತಂತ್ರಕ್ಕೆ ಬಳಸಿಕೊಂಡಿರುವುದು ಒಟ್ಟಾರೆ ಬೆಳವಣಿಗೆಯ ಹಿಂದೆ ಬಿಜೆಪಿಯ ಕೈವಾಡ ಇರುವ ಶಂಕೆ ಹುಟ್ಟುಹಾಕಿದೆ.
  5. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಎನ್​ಸಿಪಿ ಈ ಬಿಕ್ಕಟ್ಟಿನಲ್ಲಿ ತನ್ನ ಪಾತ್ರ ಇರುವುದನ್ನು ತಳ್ಳಿ ಹಾಕಿದೆ. ‘ಇದು ಶಿವಸೇನೆಯ ಆಂತರಿಕ ವಿಚಾರ. ನಾನು ಇದರಲ್ಲಿ ತಲೆ ಹಾಕುವುದಿಲ್ಲ’ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
  6. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗುವ ಮೊದಲು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ದೆಹಲಿಯಲ್ಲಿ ಒಂದು ದಿನ ಇದ್ದರು. ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಹಲವು ಹಿರಿಯ ನಾಯಕರನ್ನು ಭೇಟಿಯಾಗಿದ್ದರು. ಶಿಂಧೆ ನೇತೃತ್ವದ ಬಂಡಾಯಕ್ಕೆ ಫಡಣವೀಸ್ ಚಿತಾವಣೆಯೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
  7. ವಿಧಾನ ಪರಿಷತ್ ಚುನಾವಣೆಯಲ್ಲಿ ಶಿವಸೇನೆಯ ಕೆಲ ಶಾಸಕರು ಅಡ್ಡಮತದಾನ ಮಾಡಿದ ನಂತರ ಏಕನಾಥ್ ಶಿಂಧೆ ಅವರನ್ನು ಉದ್ಧವ್ ಠಾಕ್ರೆ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾ ಮಾಡಲಾಗಿತ್ತು. ಈ ಬೆಳವಣಿಗೆಯ ಬೆನ್ನಿಗೇ ಶಿಂಧೆ ತಮ್ಮ ಟ್ವಿಟರ್ ಬಯೊ ಮಾಹಿತಿಯಲ್ಲಿ ಶಿವಸೇನೆಯೊಂದಿಗಿನ ಸಂಬಂಧದ ವಿವರಗಳನ್ನು ಡಿಲೀಟ್ ಮಾಡಿದ್ದರು.
  8. ಶಿವಸೇನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಂಜಯ್ ರಾವುತ್ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಇದೂ ಸಹ ಏಕನಾಥ್ ಶಿಂಧೆ ಬಂಡಾಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಸಂಜಯ್ ರಾವುತ್ ಅವರು ಮಾತ್ರ, ‘ಏಕನಾಥ್ ಶಿಂಧೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರು ಮತ್ತೆ ಪಕ್ಷಕ್ಕೆ ಮರಳಲಿದ್ದಾರೆ’ ಎಂದು ಹೇಳಿದ್ದರು.
  9. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106 ಸದಸ್ಯ ಬಲ ಹೊಂದಿದೆ. ಉದ್ಧವ್ ಠಾಕ್ರೆ ಸರ್ಕಾರವನ್ನು ವಿಶ್ವಾಸಮತದಲ್ಲಿ ಮಣಿಸಲು ಬಿಜೆಪಿಗೆ ಇನ್ನೂ 37 ಶಾಸಕರ ಬೆಂಬಲ ಅಗತ್ಯವಿದೆ. ಇದೀಗ ಬಂಡಾಯ ಎದ್ದಿರುವ 20 ಶಾಸಕರ ಬೆಂಬಲ ಕಳೆದುಕೊಂಡರೂ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಬಹುಮತದ ಸಂಖ್ಯೆಯ ಕೊರತೆ ಇರುವುದಿಲ್ಲ. ಮೈತ್ರಿ ಸರ್ಕಾರಕ್ಕೆ 133 ಶಾಸಕರ ಬೆಂಬಲ ಮುಂದುವರಿಯುತ್ತದೆ.
  10. ಬಾಳಾಸಾಹೇಬ್ ಠಾಕ್ರೆ ಪ್ರತಿಪಾದಿಸಿದ ಶಿವಸೇನೆಯ ಸಿದ್ಧಾಂತವನ್ನು ನಾವು ಬಿಟ್ಟಿಲ್ಲ, ಬಿಡುವುದೂ ಇಲ್ಲ. ಹಿಂದುತ್ವ ಸಿದ್ಧಾಂತವನ್ನು ನಾವು ಅನುಸರಿಸುತ್ತಿದ್ದೇವೆ, ಅದನ್ನೇ ಮುಂದುವರಿಸಲು ಇಚ್ಛಿಸುತ್ತೇವೆ. ನಮಗೆ 40 ಶಾಸಕರ ಬೆಂಬಲವಿದೆ.  ಶಿವಸೇನೆಯನ್ನು ಮೂರನೇ ಒಂದರಷ್ಟು ಶಾಸಕರೊಂದಿಗೆ ವಿಭಜಿಸಲು ಅವಕಾಶ ಇರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಯೂ ಬೀಳುವುದಿಲ್ಲ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
  11. ಶಿವಸೇನೆಯ ಶಾಸಕರನ್ನು ಒತ್ತಾಯದಿಂದ ಗುಜರಾತ್​ಗೆ ಕರೆದೊಯ್ಯಲಾಗಿದೆ. ಶಾಸಕ ನಿತಿನ್ ದೇಶಮುಖ್ ಅವರನ್ನು ಮುಂಬೈನಿಂದ ಅಪಹರಿಸಿ ಅಹಮದಾಬಾದ್​ಗೆ ಕೊಂಡೊಯ್ಯಲಾಗಿದೆ. ಗೂಂಡಾಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:39 am, Wed, 22 June 22