ಚುನಾವಣೆ ಸಿದ್ಧತೆ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಪ್ರಯತ್ನ
ಮೋದಿ ಭೇಟಿಯಿಂದ ರಾಜ್ಯ ಬಿಜೆಪಿಗೆ ಆದ ಲಾಭವೇನು? ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲು ರಾಜ್ಯ ಬಿಜೆಪಿಯ ತಂತ್ರಗಾರಿಕೆ ಏನು ಎನ್ನುವ ಇನ್ಸೈಡ್ ಮಾಹಿತಿ ಇಲ್ಲಿದೆ ನೋಡಿ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ 2 ದಿನಗಳ ಬೆಂಗಳೂರು, ಮೈಸೂರು ಭೇಟಿಯಿಂದ ರಾಜ್ಯ ಬಿಜೆಪಿಯಲ್ಲಿ ಉತ್ಸಾಹ, ಹುಮ್ಮಸ್ಸಿನ ವಾತಾವರಣ ಮನೆ ಮಾಡಿದೆ. ಮೋದಿ ಭೇಟಿಯ ಹಿಂದೆ ಕೇವಲ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಉದ್ದೇಶ ಮಾತ್ರ ಇರಲಿಲ್ಲ. ರಾಜಕೀಯ ಉದ್ದೇಶವೂ (Karnataka Politics) ಇತ್ತು. ಈಗ ಆ ಉದ್ದೇಶ ಈಡೇರುವ ಆಸೆಯಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಇದುವರೆಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದಿರಲು ಹಳೇ ಮೈಸೂರು ಪ್ರಾಂತ್ಯದ (Old Mysore Province) ಕಳಪೆ ಸಾಧನೆಯೇ ಕಾರಣ. ಈಗ 2023ರ ಚುನಾವಣೆಯಲ್ಲಿ ಮೋದಿ ಭೇಟಿಯಿಂದ ಅಸಾಧ್ಯವಾದುದ್ದನ್ನು ಸಾಧಿಸುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಹಾಗಾದರೆ, ಮೋದಿ ಭೇಟಿಯಿಂದ ರಾಜ್ಯ ಬಿಜೆಪಿಗೆ ಆದ ಲಾಭವೇನು? ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲು ರಾಜ್ಯ ಬಿಜೆಪಿಯ ತಂತ್ರಗಾರಿಕೆ ಏನು ಎನ್ನುವ ಇನ್ಸೈಡ್ ಮಾಹಿತಿ ಇಲ್ಲಿದೆ ನೋಡಿ.
ಬಿಜೆಪಿಗೆ ಹಳೇ ಮೈಸೂರು ಪ್ರಾಂತ್ಯವೇ ಕಬ್ಬಿಣದ ಕಡಲೆ
ಹಳೇ ಮೈಸೂರು ಪ್ರಾಂತ್ಯದಲ್ಲಿ 3 ಚುನಾವಣೆಯಲ್ಲಿ ಬಿಜೆಪಿಯದ್ದು ಕಳಪೆ ಸಾಧನೆ. ಬಿಜೆಪಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲದೇ ಇರುವುದರಿಂದ ಬಹುಮತ ಸಿಗಲಿಲ್ಲ. ಹಳೇ ಮೈಸೂರಿನ ಒಕ್ಕಲಿಗ ಕೋಟೆಯನ್ನು ಎಷ್ಟೇ ಕಷ್ಟಪಟ್ಟರೂ ಬಿಜೆಪಿಗೆ ಭೇದಿಸಲಾಗಿಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿರುವುದು ಪ್ರಾದೇಶಿಕ ಪಕ್ಷ ಜೆಡಿಎಸ್. ಜೆಡಿಎಸ್-ಕಾಂಗ್ರೆಸ್ ನಡುವಿನ ಪೈಪೋಟಿಯಿಂದ ಬಿಜೆಪಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ 12 ಜಿಲ್ಲೆಗಳ 94 ಕ್ಷೇತ್ರಗಳಲ್ಲಿ ಶೇ 25ಕ್ಕಿಂತ ಹೆಚ್ಚಿನ ಒಕ್ಕಲಿಗ ವೋಟ್ ಬ್ಯಾಂಕ್ ಇದೆ. ಪ್ರತಿಯೊಂದು ಕ್ಷೇತ್ರದಲ್ಲಿ ಇರುವ ಶೇ 25ರಷ್ಟು ಒಕ್ಕಲಿಗ ವೋಟ್ ಬ್ಯಾಂಕ್ ಜೊತೆಗೆ ಹಿಂದುಳಿದ, ದಲಿತ ಸಮುದಾಯದ ಮತಗಳನ್ನು ಪಡೆದು ಜೆಡಿಎಸ್ ಶಾಸಕರು ಆಯ್ಕೆಯಾಗುತ್ತಿದ್ದಾರೆ. ಈ ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆ ದುರ್ಬಲವಾಗಿದೆ. ಈ ಪ್ರಾಂತ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವೆ ಮಾತ್ರ ತೀವ್ರ ಫೈಟ್ ಇದೆ.
ಇದರಿಂದಾಗಿ ಬಿಜೆಪಿ ಪಕ್ಷವು ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ 130 ಕ್ಷೇತ್ರಗಳಿಂದಲೇ 113 ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಇದು ಕಠಿಣ ಟಾಸ್ಕ್. ಹೀಗಾಗಿಯೇ ಬಿಜೆಪಿಗೆ 2008ರ ಅನುಕಂಪದ ಅಲೆಯ ಅನುಕೂಲಕರ ಪರಿಸ್ಥಿತಿಯಲ್ಲೂ 113ರ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗಲೇ ಇಲ್ಲ.
2018ರ ಮೋದಿ-ಬಿಎಸ್‌ವೈ ಜೋಡಿ ಇದ್ದರೂ 113ರ ಗಡಿ ದಾಟಲೇ ಇಲ್ಲ. ಬಿಜೆಪಿಯ ಬಹುಮತದ ಸರ್ಕಾರದ ಕನಸಿಗೆ ಬ್ರೇಕ್ ಹಾಕಿದ್ದು ಹಳೇ ಮೈಸೂರು ಪ್ರಾಂತ್ಯ. ಈ ಪ್ರಾಂತ್ಯದಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರ ಗೆಲ್ಲಲಾಗದೇ, ಬಹುಮತದ ಮ್ಯಾಜಿಕ್ ನಂಬರ್ ಗಡಿ ದಾಟಲೇ ಇಲ್ಲ. 104 ಕ್ಷೇತ್ರಗಳ ಗೆಲುವಿಗೆ ಬಿಜೆಪಿ ಸೀಮಿತವಾಯಿತು. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯ ಸಂಘಟನೆ ದುರ್ಬಲವಾಗಿದೆ. ಮತ್ತೊಂದೆಡೆ ಪ್ರಬಲ ನಾಯಕರು, ಅಭ್ಯರ್ಥಿಗಳು ಇಲ್ಲ. ಇದೇ ಬಿಜೆಪಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಹಿನ್ನಡೆ ಅನುಭವಿಸಲು ಕಾರಣ.
ಹಳೇ ಮೈಸೂರು ಪ್ರಾಂತ್ಯದ 11 ಜಿಲ್ಲೆಗಳಲ್ಲಿ 94 ವಿಧಾನಸಭಾ ಕ್ಷೇತ್ರಗಳಿವೆ. ಈ 11 ಜಿಲ್ಲೆಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು 33 ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ. 33 ಶಾಸಕರ ಪೈಕಿ 26 ಶಾಸಕರು ಬೆಂಗಳೂರು ನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗೆದ್ದು ಬಂದಿದ್ದಾರೆ. ಉಳಿದ 8 ಜಿಲ್ಲೆಗಳಲ್ಲಿ ಬಿಜೆಪಿ ದುರ್ಬಲವಾಗಿದೆ. ಹಳೇ ಮೈಸೂರು ಪ್ರಾಂತ್ಯದ 8 ಜಿಲ್ಲೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದರೇ ಮಾತ್ರವೇ 2023ರಲ್ಲಿ ಬಹುಮತ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯ ನಾಯಕರಿಗೂ ಇದು ಚೆನ್ನಾಗಿಯೇ ಅರ್ಥವಾಗಿದೆ.
ಅಮಿತ್ ಶಾ ತಂತ್ರ
ಹೀಗಾಗಿಯೇ ಹಳೇ ಮೈಸೂರು ಪ್ರಾಂತ್ಯದ ಈ ಲೆಕ್ಕಾಚಾರವನ್ನು ಹಾಕಿಯೇ ಮೋದಿ ಹಳೇ ಮೈಸೂರು ಪ್ರಾಂತ್ಯದಿಂದಲೇ ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಅಭಿವೃದ್ದಿ ಕಾರ್ಯಕ್ರಮದ ನೆಪದಲ್ಲೇ ಭೇಟಿ ನೀಡಿ ರಣಕಹಳೆ ಮೊಳಗಿಸಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಮೊದಲ ಭೇಟಿಯಲ್ಲಿ ಅಭಿವೃದ್ದಿಯ ಅಸ್ತ್ರವನ್ನು ಪ್ರಧಾನಿ ಮೋದಿ ಪ್ರಯೋಗಿಸಿದ್ದಾರೆ. ಬಳಿಕ ಒಕ್ಕಲಿಗ ಜಾತಿ ನಾಯಕರನ್ನು ಬಿಜೆಪಿಯತ್ತ ಸೆಳೆಯುವ ಪ್ಲ್ಯಾನ್ ಕೂಡ ಇದೆ. ತಮ್ಮ ಕೊನೆಯ ಬೆಂಗಳೂರು ಭೇಟಿಯಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷ ಸಂಘಟನೆಗೆ ಏನು ಪ್ಲ್ಯಾನ್ ಮಾಡಿದ್ದೀರಿ ಎಂದು ಅಮಿತ್ ಶಾ ಬಿಜೆಪಿ ರಾಜ್ಯ ನಾಯಕರನ್ನು ಪ್ರಶ್ನಿಸಿದ್ದರು. ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷ ದುರ್ಬಲ ಎಂದು ರಾಜ್ಯ ನಾಯಕರು ಹೇಳಿದ್ದರು. ಆಗ ಭಾಷಣ ಬೀಗಿಬೇಡಿ, ಏನು ಪ್ಲ್ಯಾನ್ ಮಾಡಿದ್ದೀರಿ ಹೇಳಿ ಎಂದು ಅಮಿತ್ ಶಾ ಕೇಳಿದ್ದರು.
ಹಳೇ ಮೈಸೂರು ಪ್ರಾಂತ್ಯ ಒಕ್ಕಲಿಗ ಪ್ರಾಬಲ್ಯದ ಪ್ರಾಂತ್ಯ. ಆದರೇ, ಕೆಲ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಕೂಡ ಪ್ರಬಲವಾಗಿದೆ, ಹಾಸನದ ಸಕಲೇಶಪುರ, ಅರಸೀಕೆರೆ, ಬೇಲೂರು, ತುಮಕೂರು ಜಿಲ್ಲೆಯ ಗುಬ್ಬಿ, ಮೈಸೂರಿನ ವರುಣಾ, ಚಾಮುಂಡೇಶ್ವರಿ ಸೇರಿದಂತೆ ಕೆಲ ಲಿಂಗಾಯತ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳೂ ಇವೆ. ಇಂಥ ಕ್ಷೇತ್ರಗಳಲ್ಲಿ ಕಮಲ ಪಕ್ಷಕ್ಕೆ ಗೆಲುವು ಸಿಕ್ಕರೇ, ಬಹುಮತದ ಮ್ಯಾಜಿಕ್ ನಂಬರ್ ಗಡಿ ದಾಟಲು ಸಹಾಯಕವಾಗುತ್ತೆ ಎಂದು ಈ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಬಿ.ವೈ.ವಿಜಯೇಂದ್ರ ತುಮಕೂರಿನ ಗುಬ್ಬಿ ಕ್ಷೇತ್ರದಲ್ಲೂ ಸ್ಪರ್ಧೆಗೆ ಆಸಕ್ತಿ ಹೊಂದಿದ್ದಾರೆ ಎಂದು ಇತ್ತೀಚೆಗೆ ಬಿಎಸ್‌ವೈ ಹೇಳಿದ್ದಾರೆ.
ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಹಳೆ ಮೈಸೂರು ಪ್ರಾಂತ್ಯದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಹೊಣೆ ನೀಡುವುದಾಗಿಯೂ ಈ ವರ್ಷದ ಮಾರ್ಚ್ ತಿಂಗಳಲ್ಲಿ ಯಡಿಯೂರಪ್ಪ ಅವರೇ ಹೇಳಿದ್ದರು. ವಿಜಯೇಂದ್ರ ಕಣ್ಣು ಕೂಡ ಹಳೇ ಮೈಸೂರು ಪ್ರಾಂತ್ಯದ ಮೇಲೆಯೇ ಇದೆ.
ಕಮಲ ಅರಳಿಸಲು ಅಭಿವೃದ್ಧಿಯ ಅಜೆಂಡಾ
ಹಳೇ ಮೈಸೂರು ಪ್ರಾಂತ್ಯ ಬಿಜೆಪಿಗೆ ದೀರ್ಘಕಾಲದವರೆಗೂ ಬರಡುಭೂಮಿಯೇ ಆಗಿರಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲು ಒಳ್ಳೆಯ ಅವಕಾಶ ಇದೆ ಎಂದು ವಿಜಯೇಂದ್ರ ಸಂದರ್ಶನವೊಂದರಲ್ಲಿ ಇತ್ತೀಚೆಗೆ ಹೇಳಿದ್ದರು. ಕೆ.ಆರ್.ಪೇಟೆ, ಶಿರಾದಲ್ಲಿ ನಾವು ಗೆದ್ದಿದೇವೆ. ಜನರ ಬಳಿಗೆ ನಾವು ಹೋಗಬೇಕು ಅಷ್ಟೇ. ಅಭಿವೃದ್ಧಿಯ ಅಜೆಂಡಾದೊಂದಿಗೆ ಜನರ ಬಳಿಗೆ ಹೋದರೆ, ಖಂಡಿತ ಬಿಜೆಪಿ ಬೆಂಬಲಿಸುತ್ತಾರೆ ಎಂದು ವಿಜಯೇಂದ್ರ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಳೇ ಮೈಸೂರು ಪ್ರಾಂತ್ಯದಲ್ಲಿ 15-20 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದರೆ, ಬಿಜೆಪಿಗೆ ಬಹುಮತಕ್ಕೆ ಕೊರತೆಯಾಗಲ್ಲ ಎಂಬುದು ವಿಜಯೇಂದ್ರ, ಯಡಿಯೂರಪ್ಪ ಲೆಕ್ಕಾಚಾರವಾಗಿದೆ.
ವಿಜಯೇಂದ್ರ 2018ರ ವಿಧಾನಸಭೆ ಚುನಾವಣೆಯಲ್ಲೇ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯಲು ಕೂಡ ಸಿದ್ಧವಾಗಿದ್ದರು. ಮೈಸೂರು ಭಾಗದಲ್ಲಿ ತಾವು ಸ್ಪರ್ಧೆ ಮಾಡಿದ್ದರೆ, ಬಿಜೆಪಿ ಹೆಚ್ಚಿನ ಕ್ಷೇತ್ರ ಗೆಲ್ಲಲು ಸಾಧ್ಯವಾಗುತ್ತೆ ಎಂಬ ಲೆಕ್ಕಾಚಾರ ಕೂಡ ಇತ್ತು. ವಿಜಯೇಂದ್ರ ಖುದ್ದಾಗಿ ವರುಣಾ ಕ್ಷೇತ್ರಕ್ಕೆ ಹೋಗಿ ಒಂದೆರೆಡು ದಿನ ರೋಡ್ ಶೋಗಳನ್ನು ಕೂಡ ನಡೆಸಿದ್ದರು. ವರುಣಾ ಕ್ಷೇತ್ರದಿಂದ ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪರ್ಧೆ ಮಾಡುವುದು ಖಚಿತವಾಗಿತ್ತು. ಇಂಥ ಪ್ರತಿಷ್ಠಿತ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರನ ವಿರುದ್ಧ ಮತೊಬ್ಬ ಮಾಜಿ ಸಿಎಂ ಮಗ ಸ್ಪರ್ಧೆ ಮಾಡಿದ್ದರೇ, ಪ್ರತಿಷ್ಠೆಯ ಕಣವಾಗುತ್ತಿತ್ತು. ಆದರೆ, ವಿಜಯೇಂದ್ರಗೆ ಬಿಜೆಪಿಯಿಂದ ಟಿಕೆಟ್ ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ. ಕೊನೆ ಕ್ಷಣದಲ್ಲಿ ಬಿಜೆಪಿ ಪಕ್ಷವು ಅಪ್ಪ-ಮಗ ಇಬ್ಬರಿಗೂ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಲ್ಲ. ನಮ್ಮದು ಕಾಂಗ್ರೆಸ್ ಪಕ್ಷದ ವಂಶಪಾರಂಪರ್ಯ ಆಳ್ವಿಕೆಯನ್ನು ಪೋಷಿಸುವ ಪಕ್ಷವಲ್ಲ ಎಂಬ ನಿಲುವು ತೆಗೆದುಕೊಂಡು, ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿತ್ತು. ಬಳಿಕ ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಇದಕ್ಕೂ ಮುನ್ನ ವಿಜಯೇಂದ್ರ ಬಿಜೆಪಿ ಪಕ್ಷದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣು ಕೂಡ ಹಳೇ ಮೈಸೂರು ಪ್ರಾಂತ್ಯದ ಮೇಲೆ ಬಿದ್ದಿದೆ. ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಈಗ ಮೈಸೂರಿಗೆ ಯೋಗ ದಿನದ ನೆಪದಲ್ಲಿ ಭೇಟಿ ನೀಡಿದ್ದಾರೆ. ಮೈಸೂರಿನಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಈ ಮೂಲಕ ಹಳೇ ಮೈಸೂರು ಪ್ರಾಂತ್ಯದ ಜನರನ್ನ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಮೈಸೂರು ಪ್ರವಾಸದಿಂದ ಹಳೇ ಮೈಸೂರು ಪ್ರಾಂತ್ಯದ ಜನರ ಮೇಲೆ ಪ್ರಭಾವ ಬೀರಬಹುದು. ಹೆಚ್ಚಿನ ವಿಧಾನಸಭಾ ಕ್ಷೇತ್ರ ಗೆಲ್ಲಬಹುದು ಎಂಬ ಲೆಕ್ಕಾಚಾರ ರಾಜ್ಯ ಬಿಜೆಪಿಯಲ್ಲಿದೆ. ಮೋದಿ ಮೈಸೂರು ಪ್ರವಾಸವನ್ನು ರಾಜ್ಯ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲುವ, ಹಳೇ ಮೈಸೂರಿನಲ್ಲಿ ತನ್ನ ಸಂಘಟನೆ ವಿಸ್ತರಿಸುವ ದೃಷ್ಟಿಯಿಂದಲೇ ನೋಡುತ್ತಿದೆ.
ಮೋದಿ ಮೈಸೂರು ಭೇಟಿಯಿಂದಾಗಿ ರಾಜ್ಯ ಬಿಜೆಪಿಯಲ್ಲಿ ಉತ್ಸಾಹ, ಹುಮ್ಮಸ್ಸಿನ ವಾತಾವರಣ ಇದೆ. ಕಳೆದ ಮೂರು ಚುನಾವಣೆಗಳಲ್ಲಿ ಅಸಾಧ್ಯವಾಗಿದ್ದನ್ನು ಈ ಬಾರಿಯಾದರೂ ಸಾಧಿಸುವ ಹುಮ್ಮಸ್ಸು ಇದೆ. ಮೋದಿ ಭಾಷಣ, ವ್ಯಕ್ತಿತ್ವ, ಅಭಿವೃದ್ಧಿ ಕಾರ್ಯಗಳಿಂದ ಜನರ ಮೇಲೆ ಪ್ರಭಾವ ಬೀರಿ ಬಿಜೆಪಿಯ ವೋಟ್ ಗಳಿಕೆ ಹೆಚ್ಚಾದರೇ, ಕ್ಷೇತ್ರಗಳ ಗೆಲುವು ಕೂಡ ಸಾಧ್ಯವಾಗುತ್ತೆ. ಮೋದಿ ಪ್ರವಾಸದಿಂದ ಬಿಜೆಪಿ ಸೇರದೆ ಅಡ್ಡಗೋಡೆ ಮೇಲೆ ಕುಳಿತ ನಾಯಕರ ಮೇಲೂ ಪ್ರಭಾವ ಬೀರಬಹುದು, ಪ್ರಭಾವಿ ನಾಯಕರ ಬಿಜೆಪಿ ಸೇರ್ಪಡೆ ಕೂಡ ಸಲೀಸಾಗುತ್ತೆ ಎಂಬ ಲೆಕ್ಕಾಚಾರ ಕೂಡ ಬಿಜೆಪಿಯಲ್ಲಿದೆ.
ನಾಯಕರಿಗೆ ಗಾಳ
ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಪ್ರಬಲ ನಾಯಕರಿಲ್ಲ. ಹೀಗಾಗಿ ಪ್ರಬಲ ನಾಯಕರನ್ನು ಬೇರೆ ಪಕ್ಷಗಳಿಂದ ಕರೆ ತಂದು ಪಕ್ಷ ಸಂಘಟಿಸುವ, ಚುನಾವಣೆಯಲ್ಲಿ ಗೆಲುವು ಪ್ಲ್ಯಾನ್ ಅನ್ನು ಹಾಕಿಕೊಂಡಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ತುಮಕೂರಿನ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಗುಬ್ಬಿ ಕ್ಷೇತ್ರದ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಹಲವು ಪ್ರಬಲ ನಾಯಕರಿಗೆ ಬಿಜೆಪಿ ತಮ್ಮತ್ತ ಸೆಳೆಯಲು ಗಾಳ ಹಾಕಿದೆ. ಮಂಡ್ಯ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಕೂಡ ಬಿಜೆಪಿಯತ್ತ ಸೆಳೆಯಲು ಪ್ಲ್ಯಾನ್ ಮಾಡಲಾಗುತ್ತಿದೆ. ಆದರೇ, ಸುಮಲತಾ ತಮ್ಮ ಲೋಕಸಭಾ ಸದಸ್ಯತ್ವ ಅವಧಿ ಇನ್ನೂ ಎರಡು ವರ್ಷ ಇರುವುದರಿಂದ ಸದ್ಯ ಯಾವುದೇ ತೀರ್ಮಾನ ತೆೆಗೆದುಕೊಂಡಿಲ್ಲ. ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗರನ್ನು ಬಿಜೆಪಿಯತ್ತ ಸೆಳೆಯುವ ತಂತ್ರದ ಭಾಗವಾಗಿಯೇ ಒಕ್ಕಲಿಗ ಸಮುದಾಯದ ನಟ ಜಗ್ಗೇಶ್ರಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಲಾಗಿದೆ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಜಗ್ಗೇಶ್ಗೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಜನರನ್ನು ಬಿಜೆಪಿಯತ್ತ ಸೆಳೆಯುವ ಜವಾಬ್ದಾರಿ ನೀಡಲಾಗುತ್ತೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Wed, 22 June 22