60 ಕೋಟಿ ರೂ. ಮೌಲ್ಯದ ಸೈಟ್ ಕೇವಲ 2 ಕೋಟಿಗೆ ಮಾರಾಟ! ಬಿಡಿಎ ಅಕ್ರಮದ ತನಿಖೆಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಯನಗರದ 60 ಕೋಟಿ ರೂಪಾಯಿ ಮೌಲ್ಯದ ಸಿಎ ಸೈಟನ್ನು ಕೇವಲ 2 ಕೋಟಿಗೆ ಮಾರಾಟ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರು ಈ ಮಾರಾಟವನ್ನು ಹಗಲು ದರೋಡೆ ಎಂದು ಖಂಡಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ. ಮಾರಾಟವಾಗಿರುವ ಸೈಟ್ ಮೂಲತಃ ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ಮೀಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಜನವರಿ 4: ಬೆಂಗಳೂರಿನ ಜಯನಗರದ ಎಂಟನೇ ಬ್ಲಾಕ್‌ನಲ್ಲಿರುವ ಸುಮಾರು 60 ಕೋಟಿ ರೂಪಾಯಿ ಮೌಲ್ಯದ ಸಿಎ (ಸಿವಿಕ್ ಅಮೆನಿಟಿ) ಸೈಟ್ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೇವಲ 2 ಕೋಟಿ ರೂಪಾಯಿಗೆ ಮಾರಾಟ ಮಾಡಿರುವ ಬಗ್ಗೆ ವರದಿಯಾಗಿದೆ. ಇದೀಗ ಈ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೊಂಥರ ಹಗಲು ದರೋಡೆ ಎಂದು ಟೀಕಿಸಿದ್ದಾರೆ.
ಅಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಜಯನಗರದ ಪ್ರಮುಖ ಸೈಟ್ ಒಂದನ್ನು ತೀರಾ ಕಡಿಮೆ ಬೆಲೆಗೆ ಬಿಡಿಎ ಮಾರಾಟ ಮಾಡಿರುವ ಬಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಜಯನಗರ 8ನೇ ಬ್ಲಾಕ್‌ನಲ್ಲಿರುವ ಈ 8,000 ಚದರ ಅಡಿ ಕಾರ್ನರ್ ಪ್ಲಾಟ್ ಅನ್ನು ಮೂಲತಃ ನಮ್ಮ ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸುವ ನರ್ಸಿಂಗ್ ಹೋಮ್‌ಗಾಗಿ ಮಂಜೂರು ಮಾಡಲಾಗಿತ್ತು ಎಂದು ಹೇಳಿದ್ದಾರೆ.
45 ವರ್ಷಗಳ ಕಾಲ, ಅಂದರೆ 1973 ರಿಂದ 2018 ರವರೆಗೆ, ಬಿಡಿಎ ಇದನ್ನು ಸಿಎ ಸೈಟ್ ಎಂದು ಕಾಯ್ದುಕೊಂಡು ಬಂದಿತ್ತು. ಅಲ್ಲದೆ, ಆ ಸೈಟ್ ಅನ್ನು ಖಾಸಗಿ ಆಸ್ತಿಯಾಗಿ ಕನ್ವರ್ಟ್ ಮಾಡುವ ಪ್ರಯತ್ನಗಳನ್ನೂ ತಿರಸ್ಕರಿಸಿತ್ತು. ನಂತರ ಇದ್ದಕ್ಕಿದ್ದಂತೆ 2018 ರಲ್ಲಿ, ಬಿಡಿಎ ಯುಟರ್ನ್ ತೆಗೆದುಕೊಂಡು ಅದನ್ನು ಸಿಎ ಸೈಟ್ ಅಲ್ಲ ಎಂದು ಘೋಷಿಸಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬಿಡಿಎ ಹಗಲು ದರೋಡೆ: ಸೂರ್ಯ ಟೀಕೆ
A prime CA site in Jayanagar has been sold by the BDA at a shockingly undervalued price, this report in @DeccanHerald reveals.
This 8,000 sq ft corner plot in Jayanagar 8th Block was originally allotted for a nursing home, serving our community’s healthcare needs.
For 45 years,… pic.twitter.com/Gx8Oax4Snw
— Tejasvi Surya (@Tejasvi_Surya) January 3, 2025
ಈ ಸೈಟ್ ಮೌಲ್ಯ ಮಾರುಕಟ್ಟೆಯಲ್ಲಿ 60 ಕೋಟಿ ರೂ.ಗಳಾಗಿವೆ. ಖುದ್ದು ಸರ್ಕಾರದ ಮಾರ್ಗದರ್ಶನ ಪ್ರಕಾರ, ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿದರೂ ಇದರ ಮೌಲ್ಯವು 23.2 ಕೋಟಿ ರೂ. ಆಗಿದೆ. ಬಿಡಿಎ ಅದನ್ನು ಕೇವಲ 2 ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ. ಅಂದರೆ ಮಾರುಕಟ್ಟೆ ಮೌಲ್ಯದ ಕೇವಲ ಶೇ 10 ರಷ್ಟು ಮೌಲ್ಯ ಇದಾಗಿದೆ. ಇದು ಸಾರ್ವಜನಿಕ ಭೂಮಿ ಮತ್ತು ಸಮುದಾಯದ ಸಂಪನ್ಮೂಲಗಳ ಹಗಲು ದರೋಡೆಗೆ ಕಡಿಮೆಯಲ್ಲ ಎಂದು ಸೂರ್ಯ ಕಿಡಿ ಕಾರಿದ್ದಾರೆ.
ತನಿಖೆಗೆ ಆಗ್ರಹ
ಈ ಸೈಟ್ ಮಾರಾಟದ ಬಗ್ಗೆ ಕೂಡಲೇ ತನಿಖೆ ನಡೆಸಬೇಕು. ಖಾಸಗಿ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಕಡಿಮೆ ಬೆಲೆಯಲ್ಲಿ ನಮ್ಮ ಸರ್ಕಾರಿ ಸ್ಥಳಗಳನ್ನು ಉಡುಗೊರೆಯಾಗಿ ನೀಡಲು ನಾವು ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Sat, 4 January 25