ಶರದ್ ಪವಾರ್ ಪಕ್ಷಕ್ಕೆ ಹೊಸ ಚಿಹ್ನೆ, ಹೆಸರು ಘೋಷಣೆ ಮಾಡಲು ಚುನಾವಣಾ ಆಯೋಗ ಆದೇಶ
ಅಜಿತ್ ಪವಾರ್ ಬಣ ಅಧಿಕೃತ ಎನ್‌ಸಿಪಿ ಎಂದು ಮಂಗಳವಾರ ಚುನಾವಣಾ ಆಯೋಗ ಘೋಷಿಸಿದೆ. ಇದೀಗ ಪಕ್ಷವನ್ನು ಕಟ್ಟಿ ಬೆಳೆಸಿದ ಶರದ್ ಪವಾರ್ ತಮ್ಮ ಪಕ್ಷದ ಹೆಸರು ಮತ್ತ ಚಿಹ್ನೆ ಕಳೆದುಕೊಂಡಿದ್ದು, ತಮ್ಮ ಬಣಕ್ಕೆ ಹೊಸ ಹೆಸರು ಮತ್ತು ಚಿಹ್ನೆಯನ್ನು ಇಂದು (ಬುಧವಾರ) ಸಂಜೆ ಘೋಷಿಸುವುದಾಗಿ ಹೇಳಿದ್ದಾರೆ. ಪಕ್ಷಕ್ಕೆ ಹೊಸ ಹೆಸರು ಮತ್ತು ಚಿಹ್ನೆಯನ್ನು ಪ್ರಕಟಿಸುವಂತೆ ಚುನಾವಣಾ ಆಯೋಗ ಶರದ್ ಪವಾರ್ ಬಣಕ್ಕೆ ಆದೇಶಿಸಿತ್ತು.
ಪುಣೆ ಫೆಬ್ರುವರಿ 07: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಹೆಸರು ಮತ್ತು ಅದರ ಗಡಿಯಾರ ಚಿಹ್ನೆಯು ಅಜಿತ್ ಪವಾರ್ (Ajit Pawar) ನೇತೃತ್ವದ ಗುಂಪಿಗೆ ಹೋಗಲಿದೆ ಎಂದು ಚುನಾವಣಾ ಆಯೋಗ (Election Commission) ಮಂಗಳವಾರ ಘೋಷಿಸಿದ ಕೆಲವೇ ನಿಮಿಷಗಳಲ್ಲಿ, ಹಿರಿಯ ನಾಯಕ ಶರದ್ ಪವಾರ್ (Sharad Pawar), ತಮ್ಮ ಬಣ ಬುಧವಾರ ಹೆಸರು ಮತ್ತು ಚಿಹ್ನೆಯನ್ನು ಪ್ರಕಟಿಸಲಿದೆ ಎಂದು ಹೇಳಿದ್ದಾರೆ. ಅದೇ ವೇಳೆ ಚುನಾವಣಾ ಸಮಿತಿಯ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವುದಾಗಿಯೂ ಗುಂಪು ಹೇಳಿದೆ. ಹೊಸ ಹೆಸರಿನಲ್ಲಿ ಶರದ್ ಪವಾರ್ ಅವರು ನ್ಯಾಷನಲಿಸ್ಟ್ ಮತ್ತು “ಕಾಂಗ್ರೆಸ್” ಪದಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
“ಉದಯಿಸುವ ಸೂರ್ಯ”, “ಚಕ್ರ” ಮತ್ತು “ಟ್ರಾಕ್ಟರ್” ಪಕ್ಷದ ಹೊಸ ಚಿಹ್ನೆಯ ಆಯ್ಕೆಗಳಲ್ಲಿ ಸೇರಿವೆ. ಫೆಬ್ರವರಿ 27 ರಂದು ಮಹಾರಾಷ್ಟ್ರದಿಂದ ಆರು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆಗಳು ನಡೆಯಲಿರುವುದರಿಂದ ಬುಧವಾರ ಸಂಜೆ 4 ಗಂಟೆಯೊಳಗೆ “ಹೊಸ ಹೆಸರನ್ನು ಪಡೆದುಕೊಳ್ಳಲು” ಮತ್ತು “ಮೂರು ಪ್ರಾಶಸ್ತ್ಯಗಳನ್ನು ಒದಗಿಸುವಂತೆ” ಪವಾರ್ ಗುಂಪಿಗೆ ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಕೇಳಿಕೊಂಡಿದೆ.
ಮುಂಬರುವ ರಾಜ್ಯಸಭಾ ಚುನಾವಣೆಗೆ ಹೊಸ ಹೆಸರು ಮತ್ತು ಪಕ್ಷವನ್ನು ನಿರ್ಧರಿಸಲು ಚುನಾವಣಾ ಆಯೋಗವು ನಮ್ಮನ್ನು ಕೇಳಿದೆ. ನಾವು ಅದನ್ನು ನಾಳೆ (ಬುಧವಾರ) ಮಾಡುತ್ತೇವೆ ಎಂದು ಶರದ್ ಪವಾರ್ ಅವರ ಪುತ್ರಿ ಬಾರಾಮತಿ ಲೋಕಸಭಾ ಸಂಸದ ಸುಪ್ರಿಯಾ ಸುಳೆ ಹೇಳಿದ್ದಾರೆ.
ಅವರ ಆರು ದಶಕಗಳ ರಾಜಕೀಯ ಜೀವನದಲ್ಲಿ, ಪವಾರ್ ಕನಿಷ್ಠ ನಾಲ್ಕು ವಿಭಿನ್ನ ಚುನಾವಣಾ ಚಿಹ್ನೆಗಳ ಮೇಲೆ ಚುನಾವಣೆಗಳನ್ನು ಸ್ಪರ್ಧಿಸಿದ್ದಾರೆ. ಒಂದು ಜೋಡಿ ಎತ್ತುಗಳು, ಚರಕ, ಹಸು ಮತ್ತು ಕರು, ಮತ್ತು ಕೈ ಮತ್ತು ಗಡಿಯಾರ. ಎನ್‌ಸಿಪಿ ಸ್ಥಾಪಿಸುವ ಮೊದಲು ಅವರು ಕಾಂಗ್ರೆಸ್, ಕಾಂಗ್ರೆಸ್ (ಆರ್), ಕಾಂಗ್ರೆಸ್ (ಯು), ಕಾಂಗ್ರೆಸ್ (ಸಮಾಜವಾದಿ), ಮತ್ತು ಕಾಂಗ್ರೆಸ್ (ಐ) ನಂತಹ ಪಕ್ಷಗಳಲ್ಲಿದ್ದರು. ಪವಾರ್ ಗುಂಪು ಹೊಸ ಹೆಸರು ಮತ್ತು ಚಿಹ್ನೆಯನ್ನು ಪಡೆಯಲು ಪ್ರಯತ್ನಿಸುತ್ತಿರುವಾಗ, ಎರಡೂ ಎನ್‌ಸಿಪಿ ಗುಂಪುಗಳ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳಲ್ಲಿ ತೀರ್ಪು ಇನ್ನೂ ಜಾರಿಯಾಗದ ಕಾರಣ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಪ್ರಕರಣದ ವಿಚಾರಣೆ ಜನವರಿ 31 ರಂದು ಮುಕ್ತಾಯಗೊಂಡಿದ್ದು, ಫೆಬ್ರವರಿ 15 ರೊಳಗೆ ತೀರ್ಪು ಬರುವ ನಿರೀಕ್ಷೆಯಿದೆ.
ಇದು ಅದೃಶ್ಯ ಶಕ್ತಿಯ ಗೆಲುವು. ಪಕ್ಷ ಸ್ಥಾಪಿಸಿದ ವ್ಯಕ್ತಿ ಸೋಲಿನತ್ತ ಮುಖ ಮಾಡಿದ್ದಾರೆ. ಆದರೆ ನನಗೆ ವಿಚಿತ್ರವಾಗಿ ಕಾಣುತ್ತಿಲ್ಲ. ಶಿವಸೇನಾ ವಿರುದ್ಧ ಇದ್ದ ಆದೇಶವನ್ನು ನಾವು ಪಡೆಯುತ್ತಿದ್ದೇವೆ. ಠಾಕ್ರೆ ಕುಟುಂಬದ ವಿರುದ್ಧವೂ ಅದೇ ಸಂಚು ರೂಪಿಸಲಾಗಿತ್ತು. ಇದು ಮಹಾರಾಷ್ಟ್ರದ ವಿರುದ್ಧದ ಷಡ್ಯಂತ್ರ. ನಿರ್ಧಾರವು ನಮಗೆ ಆಘಾತಕಾರಿ ಅಲ್ಲ. ಶರದ್ ಪವಾರ್ ಈ ಪಕ್ಷವನ್ನು ಶೂನ್ಯದಿಂದ ಬೆಳೆಸಿದರು, ನಾವು ಅದನ್ನು ಮತ್ತೆ ಎತ್ತುತ್ತೇವೆ. ಪಕ್ಷ ಯಾರಿಗೆ ಸೇರಿದ್ದು ಎಂಬ ಪ್ರಶ್ನೆಯು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಲಿದೆ ಎಂದು ಹೇಳಿದರು.
ಸುಳೆ ಮಾತನ್ನೇ ಪ್ರತಿಧ್ವನಿಸಿದ ಶರದ್ ಪವಾರ್ ಗುಂಪಿನ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, “ಇಸಿಯ ನಿರ್ಧಾರ ಆಘಾತಕಾರಿಯಾಗಿದೆ. ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡಿವೆ ಎಂದು ಆದೇಶವು ಸಾಬೀತುಪಡಿಸುತ್ತದೆ. ಕೇವಲ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಮುಂದಿಡುವ ಮೂಲಕ ಆದೇಶವು ಪ್ರಾಥಮಿಕವಾಗಿದೆ. ಸುಪ್ರೀಂ ಕೋರ್ಟ್ ನ್ಯಾಯ ಒದಗಿಸಲಿದೆ ಎಂದು ನಾವು ನಂಬುತ್ತೇವೆ.
ಇದನ್ನೂ ಓದಿ:NCP: ಅಜಿತ್ ಪವಾರ್ ಬಣ ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ: ಚುನಾವಣಾ ಆಯೋಗ
ಇದಕ್ಕೂ ಮುನ್ನ ಚುನಾವಣಾ ಆಯೋಗದ ಆದೇಶವನ್ನು ಸ್ವಾಗತಿಸಿರುವ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಆದೇಶವನ್ನು ವಿನಮ್ರವಾಗಿ ಸ್ವೀಕರಿಸುವುದಾಗಿ ಹೇಳಿದ್ದಾರೆ. “ನಮ್ಮ ಸಲಹೆಗಾರರು ಮಾಡಿದ ಸಲ್ಲಿಕೆಗಳನ್ನು ಚುನಾವಣಾ ಆಯೋಗ ಸ್ವೀಕರಿಸಿದೆ. ನಾವು ಆಯೋಗಕ್ಕೆ ಧನ್ಯವಾದ ಹೇಳುತ್ತೇವೆ” ಎಂದು ಅವರು ಹೇಳಿದರು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ