Mallikarjun Kharge: ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಕಟ್ಟಾಳು. ಅವರದು ಸುದೀರ್ಘ ಐವತ್ತು ವರ್ಷಗಳ ರಾಜಕೀಯ ಜೀವನ. ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು. ರಾಜಕಾರಣಿಗಳು ಸಿದ್ಧಾಂತದ ಮೇಲೆ ನಡೆಯಬೇಕು ಅಂತ ಹೇಳುವ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಲಾಬಿ ಮಾಡಿ ಅಧಿಕಾರ ಹಿಡಿಯಬಾರದು. ಅಧಿಕಾರ ಅನ್ನೋದು ನಮ್ಮ ಅರ್ಹತೆಗೆ ಒಲಿದು ಬರಬೇಕು ಅಂತ ಹೇಳುವ ಮಲ್ಲಿಕಾರ್ಜುನ ಖರ್ಗೆ, ಸ್ವತ ಸಿಎಂ ಸ್ಥಾನಕ್ಕೆ ಲಾಬಿ ಮಾಡದೇ ಎರಡ್ಮೂರಿ ಬಾರಿ, ಆ ಹುದ್ದೆಯಿಂದ ವಂಚಿತರಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಪರದಾಡಿದ್ದ ಮಲ್ಲಿಕಾರ್ಜುನ ಖರ್ಗೆ ಇದೀಗ ಆ ಪಕ್ಷದ ಉನ್ನತ ಹುದ್ದೆಗೆ ಬಂದಿದ್ದು ಮಹತ್ತರ ಸಾಧನೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿರುವ ಕನ್ನಡಿಗ ರಾಜಕಾರಿಣಿ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಸಾಧನೆಯನ್ನು ಕಟ್ಟಿಕೊಟ್ಟಿದ್ದಾರೆ ಟಿವಿ9 ಕಲಬುರ್ಗಿ ವರದಿಗಾರ ಸಂಜಯ್ ಚಿಕ್ಕಮಠ.
ಸಿದ್ದಾಂತವನ್ನು ಬಿಟ್ಟು ರಾಜಕೀಯ ಮಾಡದೇ, ಅಧಿಕಾರಕ್ಕಾಗಿ ಪಕ್ಷವನ್ನು ಬಲಿಕೊಡದೇ, ಪಕ್ಷಕ್ಕೆ ಯಾವತ್ತೂ ಮುಜಗರವನ್ನುಂಟು ಮಾಡದೇ ಇರುವ ಮಲ್ಲಿಕಾರ್ಜುನ ಖರ್ಗೆ, ನಾಡು ಕಂಡ ಅನೇಕ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರು. ಈ ಅಂಶವೇ ಅವರನ್ನು ಗಾಂಧಿ ಪರಿವಾರಕ್ಕೆ ತುಂಬಾ ಹತ್ತಿರ ಮಾಡಿತ್ತು. ಹೌದು ಅಧಿಕಾರಕ್ಕಾಗಿ ಎಂದಿಗೂ ಕಾಂಗ್ರೆಸ್ ಮತ್ತು ತಾವು ನಂಬಿರುವ ಸಿದ್ದಾತಂವನ್ನು ಬಿಟ್ಟು ನಡೆಯದ ಮಲ್ಲಿಕಾರ್ಜುನ ಖರ್ಗೆ, ಎಂದಿಗೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ, ತಮ್ಮ ನಾಯಕರಿಗೆ ಮುಜಗರ ಬರುವಂತೆ ನಡೆದುಕೊಂಡವರಲ್ಲಾ. ಇದನ್ನು ಮನಗಂಡೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಪಕ್ಷದ ಕೆಲಸವನ್ನು ತಲೆ ಮೇಲೆ ಹೊತ್ತಿಕೊಂಡು ಮಾಡ್ತೇನೆ. ನಾನು ಯಾವತ್ತೂ ಅಧಿಕಾರವನ್ನು ಕೇಳಿಲ್ಲ. ಪಕ್ಷ ನೀಡಿದ ಅಧಿಕಾರವನ್ನು ಕಾಯಾ ವಾಚಾ ಮನಸಾ ಮಾಡುತ್ತೇನೆ ಅಂತ ಹೇಳುವ ಮಲ್ಲಿಕಾರ್ಜುನ ಖರ್ಗೆ, ಇದೀಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಒಕ್ಕೂಟದಿಂದ ಎಐಸಿಸಿ ಸ್ಥಾನದವರಗೆ ಖರ್ಗೆ ಪಯಣ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಅನ್ನೋ ಗ್ರಾಮದಲ್ಲಿ ಜುಲೈ 21, 1942, ರಲ್ಲಿ ಜನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೀಗ ಎಂಬತ್ತು ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ವರವಟ್ಟಿಯಲ್ಲಿದ್ದ ಮನೆಗೆ ಬೆಂಕಿ ಬಿದ್ದಿದ್ದರಿಂದ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ತಂದೆಯ ಜೊತೆಗೆ ಕಲಬುರಗಿಗೆ ಬಂದಿದ್ದರು. ಹೌದು ಮಲ್ಲಿಕಾರ್ಜುನ ಖರ್ಗೆ ಅವರು ಆರು ವರ್ಷದವರಿದ್ದಾಗಲೇ, ಅವರ ಮನೆಗೆ ಬೆಂಕಿ ಬಿದ್ದಿತ್ತು. ಆ ಘಟನೆಯಲ್ಲಿ ತಾಯಿ, ಸಹೋದರಿಯರು ಸೇರಿದಂತೆ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದರು. ಹೀಗಾಗಿ ಅವರ ತಂದೆ ವರವಟ್ಟಿಯನ್ನು ಬಿಟ್ಟು ಕಲಬುರಗಿಗೆ ಬಂದು ನೆಲಸಿದ್ದರು. ಈ ಘಟನೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ಆಗಾಗ ಸ್ಮರಿಸಿಕೊಳ್ತಾರೆ. ತಾನು ಆರು ವರ್ಷದವ ಇದ್ದಾಗಲೇ ಸಾಯಬೇಕಿತ್ತು.ಆದ್ರೆ ಬದುಕುಳಿದಿದ್ದೇನೆ, ಹೀಗಾಗಿ ನಾನು ಬೋನಸ್ ನಲ್ಲಿ ಬದುಕಿದ್ದೇನೆ ಅಂತ ತಮ್ಮ ಬಾಲ್ಯದ ಘಟನೆಯಲ್ಲಿ ಆಗಾಗ ಖರ್ಗೆ ಅವರು ನೆನಪು ಮಾಡಿಕೊಳ್ಳುತ್ತಿರುತ್ತಾರೆ.
ಇನ್ನು ಹುಟ್ಟೂರು ಬಿಟ್ಟು ಕಲಬುರಗಿಗೆ ತಂದೆ ಜೊತೆ ಬಂದ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿಯಲ್ಲಿಯೇ ತಮ್ಮ ಶಿಕ್ಷಣವನ್ನು ಪಡೆಯುತ್ತಾರೆ. ಇನ್ನು ಪದವಿ ಓದುತ್ತಿದ್ದಾಗಲೇ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಂತರ ವಿದ್ಯಾರ್ಥಿ ಒಕ್ಕೂಟದ ಉಪರಾಷ್ಟ್ರಪತಿಯಾಗಿದ್ದರು. ಹೌದು 1964 ರಲ್ಲಿ ಮಲ್ಲಿಕಾರ್ಜುನ ಖರ್ಗೆ, ಕಾಲೇಜು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ತಮ್ಮ ಜಾತಿಯ ಕೆಲವೇ ಕೆಲ ವಿದ್ಯಾರ್ಥಿಗಳು ಇದ್ದರು. ಆದ್ರೆ ಆಗಲೇ ನಾನು ಬಹುಮತದಿಂದ ಆಯ್ಕೆಯಾಗಿದ್ದೆ. ಜಾತಿ ನೋಡಿ ಮತ ಹಾಕಿರಲಿಲ್ಲಾ. ಬದಲಾಗಿ ನೀತಿ ನೋಡಿ ಮತ ಹಾಕಿದ್ದರಿಂದ ನಾನು ಗೆದ್ದಿದ್ದೆ ಅಂತ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮೊದಲ ಚುನಾವಣೆಯ ಅನುಭವವನ್ನು ಅನೇಕ ಬಾರಿ ಹೇಳಿ ಕೊಂಡಿದ್ದಾರೆ.
ಮಿಲ್ ನೌಕರರ ಕಾನೂನು ಸಲಹೆಗಾರ
ಇನ್ನು ಕಲಬುರಗಿಯಲ್ಲಿಯೇ ಎಲ್ ಎಲ್ ಬಿ ಪದವಿ ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ನಗರದಲ್ಲಿರುವ ಎಂ ಎಸ್ ಕೆ ಮಿಲ್ ನೌಕರರ ಕಾನೂನು ಸಲಹೆಗಾರರಾಗಿ, ಕಾರ್ಮಿಕ ಹಕ್ಕಗಳಿಗಾಗಿ ಹೋರಾಟ ನಡೆಸಿದ್ದರು. 1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಹನ್ನೆರಡು ಚುನಾವಣೆ, ಹನ್ನೊಂದು ಗೆಲುವು ಒಮ್ಮೆ ಸೋಲು
1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಆರಂಭದಲ್ಲಿ ತಾನು ಶಾಸಕನಾಗ್ತೇನೆ ಅಂತ ಅಂದುಕೊಂಡಿರಲಿಲ್ಲಾ. ಆದ್ರೆ 1972 ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದರು. ಆದ್ರೆ ಆರಂಭದಲ್ಲಿ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದಿಂದ ಟಿಕೆಟ್ ಕೇಳಿದ್ದರು. ಸೇಡಂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಸುಲಭವಾಗಿ ಗೆಲವು ಸಾಧಿಸಬಹುದು ಅನ್ನೋ ಲೆಕ್ಕಾಚಾರವನ್ನು ಖರ್ಗೆ ಅವರು ಹೊಂದಿದ್ದರು. ಆದ್ರೆ ಅವರಿಗೆ ಸೇಡಂ ಕ್ಷೇತ್ರದ ಬದಲಾಗಿ ಟಿಕೆಟ್ ಸಿಕ್ಕಿದ್ದು ಅಂದಿನ ಕಲಬುರಗಿ ಜಿಲ್ಲೆಯ ಗುರಮಠಕಲ್ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ. ಹೌದು ಅಂದು ದೇವರಾಜ್ ಅರಸು ಅವರು ಯುವಕರಿಗೆ ಮತ್ತು ಹಿಂದುಳಿದ ಜಾತಿಗಳ ಜನರಿಗೆ ಹೆಚ್ಚಿನ ಅವಕಾಶವನ್ನು ನೀಡುವ ಉದ್ದೇಶದಿಂದ ಅನೇಕ ಹೊಸ ಪ್ರತಿಭೆಗಳನ್ನು ಗುರುತಿಸಲು ಮುಂದಾಗಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್. ಹೀಗಾಗಿ ಇಬ್ಬರಿಗೂ ಗುರುತಿಸಿ ಮೊದಲ ಬಾರಿಗೆ ಟಿಕೆಟ್ ನೀಡಲಾಗಿತ್ತು.
ಗಾಡಫಾದರ್ ಇಲ್ಲ, ಶ್ರೀಮಂತಿಕೆ ಇಲ್ಲಾ, ಹೋರಾಟವೇ ರಾಜಕೀಯ ಶಕ್ತಿ:
ಇನ್ನು ಮಲ್ಲಿಕಾರ್ಜುನ ಖರ್ಗೆ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರಲ್ಲಾ. ತೀರ ಬಡತನದಲ್ಲಿ ಹುಟ್ಟಿ ಬೆಳದಿದ್ದ ಮಲ್ಲಿಕಾರ್ಜನ ಖರ್ಗೆ ಅವರಿಗೆ ಹಿಂದೆ ಆಸ್ತಿ ಇರಲಿಲ್ಲಾ. ರಾಜಕೀಯದಲ್ಲಿ ಗಾಡ್ ಪಾದರ್ ಗಳು ಕೂಡಾ ಇರಲಿಲ್ಲಾ. ಆದ್ರೆ ದೇವರಾಜು ಅರಸು ಅಂತವರ ಕೃಪಾರ್ಶಿವಾದ ಸಿಕ್ಕಿತ್ತು. ಜೊತೆಗೆ ಸಿದ್ದಾಂತ, ಮತ್ತು ಹೋರಾಟದ ಮನೋಭಾವನೆಯಿತ್ತು. ಹೀಗಾಗಿ ಯಾವುದೇ ಶ್ರೀಮಂತಿಕೆ, ಗಾಡ್ ಪಾದರ್ ಇಲ್ಲದೇ ಇದ್ದರು ಕೂಡಾ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಹಂತಹಂತವಾಗಿ ರಾಜಕೀಯ ಮೆಟ್ಟಿಲನ್ನು ಹತ್ತುವ ಕೆಲಸ ಆರಂಭಿಸಿದ್ದರು.
ಹೌದು 1972 ರಲ್ಲಿ ಅನಿವಾರ್ಯವಾಗಿ, ಗುರುಮಠಕಲ್, ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲ ಬಾರಿಗೆ ಶಾಸಕರಾಗಿದ್ದಾಗಲೇ, 1976 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು. 2004 ರವರಗೆ ಗುರುಮಠಕಲ್ ಕ್ಷೇತ್ರದಿಂದ ಎಂಟು ಬಾರಿ ಸ್ಪರ್ಧಿಸಿ, ಎಂಟು ಬಾರಿ ಗೆಲವು ಸಾದಿಸಿದ್ದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಅವರು ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಗುಣವನ್ನು ಬೆಳಸಿಕೊಂಡಿದ್ದರು.
ಒಮ್ಮೆ ಮಾತ್ರ ಮಂತ್ರಿ ಸ್ಥಾನ ತಪ್ಪಿಸಿಕೊಂಡಿದ್ದ ಖರ್ಗೆ
ಹೌದು ಶಾಸಕರಾಗಿದ್ದಾಗ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೆಲ್ಲಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪುಟದಲ್ಲಿ ಅವಕಾಶ ಇದ್ದೇ ಇತ್ತು. ಆದ್ರೆ ಇದೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಮ್ಮೆ ಮಂತ್ರಿ ಸ್ಥಾನ ಕೈ ತಪ್ಪಿತ್ತು. ಹೌದು 1989 ರಲ್ಲಿ ರಾಜ್ಯದಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದರು. ಅವರು ಕೂಡಾ ಕಲಬುರಗಿ ಜಿಲ್ಲೆಯವರು. ಆದ್ರೆ ತಮ್ಮದೇ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಅವರಿಗೆ ಮಂತ್ರಿ ಸ್ಥಾನವನ್ನು ವಿರೇಂದ್ರ ಪಾಟೀಲ್ ನೀಡಿರಲಿಲ್ಲಾ. ಆದ್ರು ಕೂಡಾ ವಿರೇಂದ್ರ ಪಾಟೀಲ್ ಬಗ್ಗೆ ಒಂದೇ ಒಂದು ಮಾತನ್ನು ಕೂಡಾ ಖರ್ಗೆ ಅವರು ಆಡಿರಲಿಲ್ಲಾ. ಎಲ್ಲವನ್ನು ಕೂಡಾ ಸಮಾಧಾನದಿಂದ ಸ್ವೀಕರಿಸಿದ್ದರು.
ಮೂರು ಬಾರಿ ಸಿಎಂ ಸ್ಥಾನದಿಂದ ವಂಚಿತರಾಗಿರೋ ಖರ್ಗೆ
1999 ರಲ್ಲಿ 2004 , 2013 ರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಖರ್ಗೆ ಅವರಿಗೆ ಇತ್ತು. ಲಾಭಿ ಮಾಡಿದ್ರೆ, ಶಾಸಕರನ್ನು ಸೆಳೆಯುವದು, ಗುಂಪುಗಾರಿಕೆ ಮಾಡಿದ್ರೆ ಖರ್ಗೆ ಅವರು ಆಗಲೇ ಸಿಎಂ ಆಗಬಹುದಿತ್ತು. ಆದ್ರೆ ಎಂದಿಗೂ ಕೂಡಾ ಲಾಭಿ ಮಾಡದೇ, ಪಕ್ಷದ ನಿರ್ಧಾರವನ್ನು ಮೀರಿ, ಅಸಿಸ್ತು ತೋರಿಸದೇ ಇದ್ದ ಪರಿಣಾಮ, ಮೂರು ಬಾರಿ ಅವರು ಸಿಎಂ ಸ್ಥಾನದಿಂದ ವಂಚಿತರಾದ್ರು.
ಒಲ್ಲದ ಮನಸ್ಸಿನಿಂದ ಕೇಂದ್ರ ರಾಜಕೀಯಕ್ಕೆ ಹೋಗಿದ್ದ ಖರ್ಗೆ
2008 ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ 9 ನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಆದ್ರೆ ರಾಜ್ಯ ವಿಧಾನಸಭೆಯ ಸಧಸ್ಯರಾಗಿದ್ದಾಗಲೇ, ಅವರಿಗೆ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣಕ್ಕೆ ಪಕ್ಷದ ನಾಯಕರಿಂದ ಬುಲಾವ್ ಬಂದಿತ್ತು. ಮೊದಲು ಸಾಮಾನ್ಯ ಕ್ಷೇತ್ರವಾಗಿದ್ದ ಕಲಬುರಗಿ, 2009 ಕಲ್ಲಿ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರವಾಗಿ ಪರಿವರ್ತಿತವಾಗಿತ್ತು. ಆಗ ಸ್ವತ ಸೋನಿಯಾಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಕರೆ ಮಾಡಿ, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು. ತಾವು ಕೇಂದ್ರ ರಾಜಕೀಯಕ್ಕೆ ಬರಬೇಕು ಅಂತ ಹೇಳಿದ್ದರಂತೆ. ಆದ್ರೆ ರಾಜ್ಯ ರಾಜಕೀಯದಲ್ಲಿಯೇ ಉತ್ತಮ ಹಿಡಿತ ಹೊಂದಿದ್ದ ಮಲ್ಲಿಕಾರ್ಜುನ ಖರ್ಗೆ, ಹೈಕಮಾಂಡ್ ಆದೇಶವನ್ನು ದಿಕ್ಕರಿಸದೇ, ಕೇಂದ್ರ ರಾಜಕೀಯಕ್ಕೆ ಹೋಗಲು ಸಿದ್ದರಾಗಿದ್ದರು. ಹೀಗಾಗಿ 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆಗ ಕೂಡಾ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ, ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದರು.
2014 ರಲ್ಲಿ ಎರಡನೇ ಭಾರಿಗೆ ಕೂಡಾ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆಗ ಕಾಂಗ್ರೆಸ್ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆಯಲ್ಲಿ ಆಡಳಿತ ಪಕ್ಷದ ಅನೇಕ ಯೋಜನೆಗಳ ಬಗ್ಗೆ ತಮ್ಮ ಮಾತುಗಳಿಂದ ಯಶಸ್ವಿಯಾಗಿ ವಿರೋಧಿಸುವ ಕೆಲಸ ಮಾಡಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಗಟ್ಟಿಯಾಗಿ ಮಾತನಾಡುವ ಮೂಲಕ ಆಡಿಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಕೆಲಸ ಮಾಡಿದ್ದರು. ಆದ್ರೆ 2018 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿದ್ದ ಮಲ್ಲಿಕಾರ್ಜುನ ಖರ್ಗೆ, ಮೊದಲ ಬಾರಿಗೆ ಸೋಲನ್ನನುಭವಿಸಿದ್ದರು. ತಾನು ಸಾಕಷ್ಟು ಕೆಲಸ ಮಾಡಿದರು ಕೂಡಾ ಜನ ನನ್ನನ್ನು ಸೋಲಿಸಿದ್ದಾರೆ. ಇದು ನನ್ನ ಸೋಲಲ್ಲಾ, ನಾನು ನಂಬಿರುವ ಸಿದ್ದಾಂತಕ್ಕೆ ಆದ ಸೋಲು ಅಂತ ಖರ್ಗೆ ಅವರು ಆಗಾಗ ಹೇಳುತ್ತಿದ್ದರು.
ಇನ್ನು 2014 ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸರ್ಕಾರದ ವಿರುದ್ದ ತಮ್ಮ ಮೊನಚಾದ ಮಾತುಗಳಿಂದ ತಿವಿದು,ಪ್ರತಿಪಕ್ಷದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದರು. ಇನ್ನು 2018 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಿ ಸೋತ ನಂತರ ಕೂಡಾ ಕಾಂಗ್ರೆಸ್ ಪಕ್ಷ ಅವರ ಕೈ ಬಿಟ್ಟಿರಲಿಲ್ಲಾ. ನಂತರ ಅವರನ್ನು ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿದ್ದಲ್ಲದೇ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿತ್ತು. ಈ ಹುದ್ದೆಯನ್ನು ಕೂಡಾ ಖರ್ಗೆ ಅವರು ಸಮರ್ಥವಾಗಿ ನಿಬಾಯಿಸಿದ್ದರು. ಪಕ್ಷ ನೀಡಿದ ಜವಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸುವದು, ಸಿದ್ದಾಂತವನ್ನು ಬಿಟ್ಟು ನಡೆಯದೇ ಇರುವ ಮಲ್ಲಿಕಾರ್ಜುನ ಖರ್ಗೆ ಅವರ ಆಚಾರ, ವಿಚಾರಗಳಿಂದ ಇದೀಗ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಎಂದಿಗೂ ಕಾಂಗ್ರೆಸ್ ಬಿಡದ ಮಲ್ಲಿಕಾರ್ಜುನ ಖರ್ಗೆ
ಹೌದು 1969 ರಿಂದ ಇಲ್ಲಿವರಗೆ ಮಲ್ಲಿಕಾರ್ಜುನ ಖರ್ಗೆ, ಪಕ್ಷಕ್ಕೆ, ತಮ್ಮ ಸಿದ್ದಾಂತಕ್ಕೆ ನಿಷ್ಟರಾಗಿ ಉಳಿದುಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ ನೀಡಿ, ಅವರನ್ನು ಮೊದಲು ಮಂತ್ರಿ ಮಾಡಿದ್ದ ದೇವರಾಜು ಅರಸು ಅವರು ಕೂಡಾ ಕಾಂಗ್ರೆಸ್ ಬಿಟ್ಟು ಹೋದಾಗ ಕೂಡಾ ಖರ್ಗೆ ಅವರು ಕಾಂಗ್ರೆಸ್ ನಲ್ಲಿಯೇ ಉಳಿದುಕೊಂಡಿದ್ದರು. ರಾಜ್ಯದಲ್ಲಿ ಸಿಎಂ ಸ್ಥಾನ ಸಿಗದೇ ಇದ್ದಾಗ ಕೂಡಾ ಬೇಸರಮಾಡಿಕೊಳ್ಳದೆ, ಕಾಂಗ್ರೆಸ್ ನಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಮಂತ್ರಿ ಮಾಡಿಲ್ಲಾ ಅಂತ ಅನೇಕರು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾರೆ. ಆದ್ರೆ ಕಳೆದ ಐವತ್ತು ವರ್ಷಗಳಿಂದ ಖರ್ಗೆ ಅವರು ಕಾಂಗ್ರೆಸ್ ನಲ್ಲಿಯೇ ಇದ್ದು, ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ದುಡಿಯುತ್ತಿರುವ ಹಿರಿಯ ನಾಯಕರಾಗಿದ್ದಾರೆ. ಇದೇ ಗುಣವನ್ನು ಮೆಚ್ಚಿಕೊಂಡಿರುವ ಗಾಂದಿ ಪರಿವಾರ ಮತ್ತು ಕಾಂಗ್ರೆಸ್ ನಾಯಕರು ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ರೆ, ಅನಕೂಲ ಅಂತ ಇಚ್ಚೆ ಪಟ್ಟಿದ್ದರು. ನಾಯಕರ ಸಮ್ಮತಿ ಮೇರೆೆಗೆ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
Published On - 1:56 pm, Wed, 19 October 22