ನರೇಂದ್ರ ಮೋದಿ, ಅಮಿತ್ ಶಾರಂತಹ ನೂರು ಮಂದಿ ಬರಲಿ, 2024ರ ಚುನಾವಣೆ ಬಳಿಕ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದೇಶವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವ ವ್ಯಕ್ತಿ ತಾನೊಬ್ಬನೇ, ಬೇರೆ ಯಾರಿಗೂ ನನ್ನ ಜಾಗಕ್ಕೆ ತಲುಪಲು ಸಾಧ್ಯವಿಲ್ಲ ಎಂದುಕೊಂಡಿದ್ದಾರೆ, ಆದರೆ ಈ ಬಾರಿ ಅವರ ಎಲ್ಲಾ ನಂಬಿಕೆಗಳು ಬುಡಮೇಲಾಗಲಿದೆ ಎಂದರು. ನೀವು ಸರ್ವಾಧಿಕಾರಿ ಅಲ್ಲ, ನೀವು ಜನರಿಂದ ಆಯ್ಕೆಯಾಗಿದ್ದೀರಿ ಮತ್ತು ಜನರು ನಿಮಗೆ ಪಾಠ ಕಲಿಸುತ್ತಾರೆ ಎಂದು ನಾಗಾಲ್ಯಾಂಡ್‌ನಲ್ಲಿ ಚುನಾವಣಾ ಜಾಥಾದಲ್ಲಿ ಹೇಳಿದರು.
ದೇಶದಲ್ಲಿ ಸಮಾನತೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಬೇಕಾದರೆ, ಬಿಜೆಪಿ ಅಧಿಕಾರದಿಂದ ತೊಲಗಬೇಕು. ಬಿಜೆಪಿಯನ್ನು ಎದುರಿಸಲು ಸಮಾನ ಮನಸ್ಕ ರಾಜಕೀಯ ಪಕ್ಷಗಳು ಒಂದಾಗಲೇಬೇಕು. ಈ ಮಹಾಮೈತ್ರಿಕೂಟಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕತ್ವ ನೀಡಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರು ಹಲವಾರು ಬಾರಿ, ದೇಶ ಒಪ್ಪಿಕೊಂಡ ಏಕೈಕ ನಾಯಕ ನಾನಾಗಿದ್ದು, ಬೇರೆ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಎಂದು ಹೇಳಿದ್ದಾರೆ. ಯಾವುದೇ ಪ್ರಜಾಪ್ರಭುತ್ವವಾದಿ ಹೀಗೆ ಹೇಳುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ಮತ್ತಷ್ಟು ಓದಿ: ವಿಚಿತ್ರವಾಗಿ ವರ್ತಿಸುತ್ತಿರುವ ಸರ್ಕಾರವನ್ನು ನಿಯಂತ್ರಿಸಿ: ಕೇಂದ್ರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಭಾರತವು ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ನೀವು ನಿರಂಕುಶಾಧಿಕಾರಿ ಅಲ್ಲ ಎಂಬುದನ್ನು ಪ್ರಧಾನಿ ಮೋದಿ ಅವರಿಗೆ ನಾವು ಮನವರಿಕೆ ಮಾಡಿಕೊಡುತ್ತೇವೆ. ಪ್ರಧಾನಿ ಮೋದಿ ಅವರು ಜನರಿಂದ ಆಯ್ಕೆಯಾಗಿದ್ದಾರೆಯೇ ಹೊರತು, ಅವರು ಸರ್ವಾಧಿಕಾರಿ ಅಲ್ಲ. ನಿಮ್ಮ ಸರ್ವಾಧಿಕಾರಿ ವರ್ತನೆಗೆ ಈ ದೇಶದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಖರ್ಗೆ ಹರಿಹಾಯ್ದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನd ರಕ್ಷಣೆಗೆ ನಾವು ಒಂದಾಗಲೇಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಹೇಳಿದರು. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಬರಲಿದೆ. ನಾವು ಈಗಾಗಲೇ ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ಆರಂಭಿಸಿದ್ದೇವೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ