ಮುಂಬೈ: ನನ್ನ ಜೊತೆ ಮತ್ತು ಬಿಜೆಪಿ ನಾಯಕರ ಜೊತೆ ಶರದ್ ಪವಾರ್ (Sharad Pawar) ವೇದಿಕೆ ಹಂಚಿಕೊಂಡಿರುವುದನ್ನು ನೋಡಿರುವ ಕೆಲವರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಲೇವಡಿ ಮಾಡಿದ್ದಾರೆ. ಯಾರ ಹೆಸರನ್ನೂ ಅವರು ಪ್ರಸ್ತಾಪಿಸಿಲ್ಲವಾದರೂ ಉದ್ಧವ್ ಠಾಕ್ರೆ ಅವರನ್ನೇ ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಚುನಾವಣೆಯ ಹಿಂದಿನ ದಿನ ನಡೆದ ವಿಶೇಷ ಭೋಜನಕೂಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಬಿಜೆಪಿ ನಾಯಕ ಆಶಿಶ್ ಶೆಲಾರ್ ಬುಧವಾರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಬೈಕ್ಗಳು, ಇನ್ನೂ ಮೂರು ದಿನಕ್ಕೆ ಯೆಲ್ಲೊ ಅಲರ್ಟ್
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ಶರದ್ ಪವಾರ್ ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳುವುದರಿಂದ ಕೆಲವರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಶಿವಸೇನೆ ನಾಯಕತ್ವದ ವಿರುದ್ಧ ಏಕನಾಥ್ ಶಿಂಧೆ ಬಂಡಾಯವೆದ್ದಿದ್ದರು. ಇದು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾಯಿತು. ಈ ವೇಳೆ ಶಿವಸೇನೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. ಈ ವರ್ಷದ ಜೂನ್‌ನಲ್ಲಿ ಶಿವಸೇನೆಯ 55 ಶಾಸಕರ ಪೈಕಿ 39 ಶಾಸಕರೊಂದಿಗೆ ಏಕನಾಥ್ ಶಿಂಧೆ ಬಂಡಾಯವೆದ್ದು ಶಿವಸೇನೆ ಪಕ್ಷದಲ್ಲಿ ಬಿರುಕು ಮೂಡಲು ಕಾರಣವಾಯಿತು.