ಮುಂಬೈ, ಜನವರಿ 14: ಕಾಂಗ್ರೆಸ್ ನಾಯಕರ ಪ್ರತಿಷ್ಠಿತ ಕುಟುಂಬವೊಂದಕ್ಕೆ ಸೇರಿದ ಮಿಲಿಂದ್ ದೇವರಾ (Milind Deora) ಪಕ್ಷ ತ್ಯಜಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಕುಟುಂಬ ಹೊಂದಿದ್ದ 55 ವರ್ಷದಷ್ಟು ಹಳೆಯ ಸಂಬಂಧ ಅಂತ್ಯವಾಗುತ್ತಿದೆ ಎಂದು ಮಾಜಿ ಸಂಸದರಾದ ಅವರು ಹೇಳಿದ್ದಾರೆ. ಏಕನಾಥ್ ಶಿಂಧೆ ಬಣದ ಶಿವಸೇನಾ ಪಕ್ಷಕ್ಕೆ ದೇವರಾ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿಗಳ ಮಧ್ಯೆ ಈ ಬೆಳವಣಿಗೆ ಆಗಿದೆ. ತಾನು ರಾಜೀನಾಮೆ ಕೊಟ್ಟಿರುವ ಸಂಗತಿಯನ್ನು ಅವರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
‘ನಮ್ಮ ರಾಜಕೀಯ ಪ್ರಯಾಣದಲ್ಲಿ ಇವತ್ತಿಗೆ ಒಂದು ಪ್ರಮುಖ ಘಟ್ಟ ಮುಕ್ತಾಯವಾಗಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಇದರೊಂದಿಗೆ ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷದ ಸಂಬಂಧ ಅಂತ್ಯಗೊಳಿಸುತ್ತಿದ್ದೇನೆ. ಹಲವು ವರ್ಷಗಳಿಂದ ಅಚಲವಾಗಿ ಬೆಂಬಲ ನೀಡುತ್ತಾ ಬಂದ ಎಲ್ಲಾ ನಾಯಕರು, ಸಹವರ್ತಿಗಳು ಹಾಗೂ ಕಾರ್ಯಕರ್ತರಿಗೆ ನಾನು ಋಣಿಯಾಗಿದ್ದೇನೆ’ ಎಂದು ಮಿಲಿಂದ್ ದೇವರಾ ತಮ್ಮ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Today marks the conclusion of a significant chapter in my political journey. I have tendered my resignation from the primary membership of @INCIndia, ending my family’s 55-year relationship with the party.
I am grateful to all leaders, colleagues & karyakartas for their…
— Milind Deora | मिलिंद देवरा ☮️ (@milinddeora) January 14, 2024
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ
ಮಿಲಿಂದ್ ದೇವರಾ ಅವರು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ನ ಅತ್ಯಂತ ಹಿರಿಯ ತಲೆಗಳಲ್ಲಿ ಒಂದಾಗಿದ್ದ ಮುರಳಿ ದೇವರಾ ಅವರ ಮಗ. ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಲವು ದಶಕಗಳು ದೇವರಾ ಕುಟುಂಬದವರೇ ಚುನಾಯಿತರಾಗಿದ್ದಾರೆ. ಮಿಲಿಂದ್ ದೇವರಾ 2004 ಮತ್ತು 2009ರಲ್ಲಿ ಜಯಿಸಿದ್ದರು. ಆದರೆ, ನಂತರದ ಎರಡು ಚುನಾವಣೆಗಳಲ್ಲಿ ಅಂದಿನ ಅವಿಭಜಿತ ಶಿವಸೇನಾ ಪಕ್ಷದ ಅರವಿಂದ್ ಸಾವಂತ್ ಅವರೆದುರು ಸೋತಿದ್ದರು.
ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ವಿಚಾರವು ಮಿಲಿಂದ್ ದೇವರಾ ಅವರನ್ನು ಪಕ್ಷದಿಂದ ದೂರಗೊಳಿಸುವಂತೆ ಮಾಡಿದೆ ಎನ್ನುವುದು ಇನ್ನೂ ದೃಢಪಡದ ವಿಚಾರ. ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯೇ ಕಣಕ್ಕಿಳಿಯುತ್ತಾರೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನಾ ಹೇಳಿಕೊಂಡಿದೆ. ಶಿವಸೇನೆಯು ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಭಾಗವಾಗಿದ್ದರೂ ಯಾರೊಂದಿಗೆ ಸಮಾಲೋಚನೆ ಮಾಡದೆಯೇ ಏಕಪಕ್ಷೀಯವಾಗಿ ಮುಂಬೈ ದಕ್ಷಿಣ ಕ್ಷೇತ್ರದ ತಮ್ಮದೆಂದು ಹೇಳಿಕೊಂಡಿದ್ದು ಮಿಲಿಂದ್ ದೇವರಾಗೆ ಇರಿಸುಮುರುಸು ತಂದಿದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಪಕ್ಷ ತೊರೆದಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಮಿತ್ ಶಾ, ಜೆಪಿ ನಡ್ಡಾಗೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ನೀಡಿದ VHP
ಅವೇ ವದಂತಿಗಳ ಪ್ರಕಾರ ಮಿಲಿಂದ್ ದೇವರಾ ಜೊತೆ ಕನಿಷ್ಠ 10 ಮಾಜಿ ಕಾರ್ಪೊರೇಟರ್ಗಳು, 25 ಕಾಂಗ್ರೆಸ್ ಪದಾಧಿಕಾರಿಗಳು, 20 ವರ್ತಕ ಒಕ್ಕೂಟಗಳು ಹಾಗೂ ನೂರಾರು ಕಾರ್ಯಕರ್ತರು ಆಡಳಿತಾರೂಢ ಏಕನಾಥ್ ಶಿಂಧೆ ಬಣದ ಶಿವಸೇನಾ ಪಕ್ಷವನ್ನು ಸೇರಲಿದ್ದಾರೆ.
ಆದರೆ, ಈ ಸುದ್ದಿಯನ್ನು ಮಿಲಿಂದ್ ದೇವರಾ ತಳ್ಳಿಹಾಕಿದ್ದಾರೆ. ತಾನು ಶಿಂಧೆ ಪಕ್ಷ ಸೇರಲಿರುವ ಸುದ್ದಿ ಸತ್ಯಕ್ಕೆ ದೂರವಾದುದು. ಕ್ಷೇತ್ರದ ಜನರ ಅಭಿಪ್ರಾಯಗಳನ್ನು ಪಡೆಯುತ್ತಿದ್ದೇನೆ. ಮುಂದಿನ ನಡೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Sun, 14 January 24