ಅಹಿಂದ ಮುಖವಾಡ ಹೊತ್ತು ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ: ಪರೋಕ್ಷವಾಗಿ ಸಿದ್ದುಗೆ ಶ್ರೀರಾಮುಲು ಗುದ್ದು
ಅಹಿಂದ ಮುಖವಾಡ ಹೊತ್ತು ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೊಪ್ಪಳದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.
ಕೊಪ್ಪಳ: ಅಹಿಂದ ಮುಖವಾಡ ಹೊತ್ತು ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಕೊಪ್ಪಳದಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು (Sriramulu) ಟೀಕಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ನಮಗೆ ಆಶೀರ್ವಾದ ಮಾಡಿ. ವಾಲ್ಮೀಕಿ ಸಮಾಜದವರು ಆ ಕಡೆ ಈ ಕಡೆ ಇದ್ದಾರೆ ಎನ್ನುತ್ತಿದ್ದಾರೆ. ಯಾರೂ ಕೂಡ ಬೇರೆ ಪಕ್ಷಗಳ ಕಡೆ ಸಮಾಜದವರು ವಾಲಬೇಡಿ. ನಾನು ಬದುಕಿರುವವರೆಗೂ ನಿಮ್ಮ ಸೇವೆಗೆ ಬದ್ಧನಾಗಿದ್ದೇನೆ ಎಂದು ವಿಶ್ವಾಸ ನೀಡಿದರು.
ನಮ್ಮ ಪಕ್ಷದ ದೊಡ್ಡನಗೌಡ ಪಾಟೀಲ್ ಬಹಳ ಸಂಭಾವಿತ ವ್ಯಕ್ತಿ. ಕುಷ್ಟಗಿಯಲ್ಲಿ ಅವರು ಗೆದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಭಾರತೀಯ ಜನತಾ ಪಕ್ಷ ಎಲ್ಲಾ ವರ್ಗದವರನ್ನ ಸಮನಾಗಿ ಕಾಣುತ್ತೆ. ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿದ್ದಾರೆ. 2018ರಲ್ಲಿ ಎರಡೂ ಕಡೆ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿತ್ತು. ಹೀಗಾಗಿ ಬಾದಾಮಿ ಮತ್ತು ಮೊಣಕಾಲು ಮೂರಲ್ಲಿ ನಿಂತು ಸ್ಪರ್ಧೆ ಮಾಡಿದ್ದೆ. ಆದರೆ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪ ಮತಗಳಿಂದ ಸೋತೆ ಎಂದು ಹೇಳಿದರು.
PFI ಸಂಘಟನೆ ಸಿದ್ದರಾಮಯ್ಯರ ಕೂಸು: ನಳಿನ್ ಕುಮಾರ್ ಕಟೀಲ ಆರೋಪ
ಗದಗ: ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ. ಪಿಎಫ್ಐ ಸಂಘಟನೆ ವಿಪಕ್ಷ ನಾಯಕ ಸಿದ್ದರಾಮಯ್ಯರ ಕೂಸು ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್ ಕುಮಾರ್ ಕಟೀಲ ಗದಗನಲ್ಲಿ ಆರೋಪ ಮಾಡಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿ ಕೂಸು ನಮ್ಮದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ಹಿಂದೆ ಸಿದ್ದರಾಮಯ್ಯ ಅಹಿಂದ ಚಳವಳಿ ಮಾಡಿದರು. ಅಧಿಕಾರದಲ್ಲಿದ್ದಾಗ SC, ST, ಒಬಿಸಿಗೆ ನ್ಯಾಯ ಕೊಡಿಸಲಿಲ್ಲ. ಇಂದು ಸಿಎಂ ಬೊಮ್ಮಾಯಿ SC, STಗಳ ಬೇಡಿಕೆ ಈಡೇರಿಸಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಮೇಲೆ ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ವಿಶ್ವಾಸ ಬಂದಿತ್ತು. ಐದು ವರ್ಷ ಯಾವುದೇ ಸಮಸ್ಯೆ ಇಲ್ದೇ ಸಿಎಂ ಆದರು. ಆದರೆ ಹಿಂದುಳಿದ ವರ್ಗಗಳಿಗೆ, ಎಸ್ಸಿ ಎಸ್ಟಿ ಜನರಿಗೆ ನ್ಯಾಯ ಕೊಡಲು ವಿಫಲರಾದರು. ಎಲ್ಲ ಬೇಡಿಕೆಗಳಿಗೆ ಕಮಿಟಿ ಮಾಡಿ ಮುಚ್ಚಿ ಹಾಕುವ ಕೆಲಸ ಮಾಡಿದರು ಎಂದು ವಾಗ್ದಾಳಿ ಮಾಡಿದ್ದಾರೆ.
ಇವತ್ತು ಎಸ್ಸಿ, ಎಸ್ಟಿ ಬೇಡಿಕೆಗೆ ಗೌರವ ಕೊಟ್ಟಿದ್ದರೇ ಅದು ಬೊಮ್ಮಾಯಿ ಅವರ ಸರ್ಕಾರ. ಐದು ವರ್ಷ ಸಿಎಂ ಆಗಿದ್ದರು, ಶಕ್ತಿ ಇತ್ತು ಆಗ ಮಾಡದೇ ಕಾಲಹರಣ ಮಾಡಿದರು. ಯಾರೋ ಹುಟ್ಟಿಸಿದ ಮಗುವಿಗೆ ಇವ್ರು ಹೇಗೆ ಅಪ್ಪ ಆಗುತ್ತಾರೆ ಅಂತ ಕಿಡಿಕಾರಿದರು.
ಸಿದ್ದರಾಮಯ್ಯರದ್ದು ಅನೈತಿಕ ಸಂಬಂಧದ ರಾಜಕಾರಣ ಮಾಡಿದ್ದಾರೆ. H.D.ದೇವೇಗೌಡರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಗುರುಗಳನ್ನೇ ಮೆಟ್ಟಿ ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋದರು. ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಡಾ.ಪರಮೇಶ್ವರ್ ಅವರನ್ನು ಮುಗಿಸಿದರು. ಕಾಂಗ್ರೆಸ್ ನಾಯಕರನ್ನು ಮುಗಿಸಿ ಸಿದ್ದರಾಮಣ್ಣ ಅಧಿಕಾರ ಹಿಡಿದರು ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Wed, 12 October 22