ಶಾಸಕರ ಅನುದಾನ ತಾರತಮ್ಯ ಸಮರ: ಕೋರ್ಟ್​ನಲ್ಲೇ ತೀರ್ಮಾನವಾಗಲಿ ಎಂದ ಸಿಎಂ ಸಿದ್ದರಾಮಯ್ಯ

ವಿಪಕ್ಷ ಶಾಸಕರು ಮತ್ತು ಆಡಳಿತ ಪಕ್ಷದ ಶಾಸಕರಿಗೆ ನೀಡಲಾಗುತ್ತಿರುವ ಅನುದಾನದಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್​ ಶಾಸಕ ವೆಂಕಟಶಿವಾರೆಡ್ಡಿ ಕೋರ್ಟ್​ ಮೊರೆ ಹೋಗಿದ್ದರೆ, ನಿಖಿಲ್​ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಮಾತ್ರ ಈ ಬಗ್ಗೆ ಕೋರ್ಟ್​ನಲ್ಲೇ ತೀರ್ಮಾನವಾಗಲಿ ಎಂದಿದ್ದಾರೆ.

ಶಾಸಕರ ಅನುದಾನ ತಾರತಮ್ಯ ಸಮರ: ಕೋರ್ಟ್​ನಲ್ಲೇ ತೀರ್ಮಾನವಾಗಲಿ ಎಂದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಕೌಂಟರ್​
Edited By:

Updated on: Oct 15, 2025 | 6:43 PM

ಬೆಂಗಳೂರು, ಅಕ್ಟೋಬರ್​ 15: ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವರೆಡ್ಡಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ​ ಸಲ್ಲಿರುವ ಬೆನ್ನಲ್ಲೇ ಅನುದಾನ ತಾರತಮ್ಯದ ವಿರುದ್ಧ JDS ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಕಳೆದ ಎರಡು ವರ್ಷಗಳಿಂದ ಶಾಸಕರಿಗೆ ಅಭಿವೃದ್ಧಿ ಕೆಲಸಕ್ಕೆ ನಿಧಿ ಇಲ್ಲ ಎಂದು ಆರೋಪಿಸಿದ್ದಾರೆ.

ಎಕ್ಸ್​ ಖಾತೆಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ನಿಖಿಲ್, 5 ಗ್ಯಾರಂಟಿ ಯೋಜನೆಗಳಿಗಾಗಿ ಈ ವರ್ಷ 56,000 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ 5,229 ಕೋಟಿ ರೂ. ಮೂಲಸೌಕರ್ಯ ವೆಚ್ಚದಲ್ಲಿ ಕಡಿತವಾಗಿರುವ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ರೂ. ಅನುದಾನ ನೀಡಿ, ವಿಪಕ್ಷ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂ. ನೀಡಲಾಗುತ್ತಿದೆ. ಈ ತಾರತಮ್ಯದ ವಿರುದ್ಧ ನಮ್ಮ ಶಾಸಕ ವೆಂಕಟಶಿವರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೈ ನಾಯಕರು ರ್ಯಾಲಿಗಳಲ್ಲಿ ನ್ಯಾಯ, ಸಮಾನತೆ ಅಂತಾರೆ. ಆದ್ರೆ, ಅವರ ಸಿಎಂ ವಿಧಾನಸೌಧದಲ್ಲಿ ಅದನ್ನ ಮರೆತುಬಿಡ್ತಾರೆ ಎಂದು ನಿಖಿಲ್​ ಆರೋಪಿಸಿದ್ದಾರೆ.

ನಿಖಿಲ್​ ಕುಮಾರಸ್ವಾಮಿ ಆರೋಪವೇನು?

ಇನ್ನು ಅನುದಾನ ವಿಚಾರವಾಗಿ JDS ಶಾಸಕ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಕೋರ್ಟ್​ನಲ್ಲೇ ತೀರ್ಮಾನ ಆಗಲಿ ಎಂದಿದ್ದಾರೆ. ಎಷ್ಟು ಅನುದಾನ ಕೊಡಬೇಕೋ ಕೊಟ್ಟಿದ್ದೇವೆ, ಕೊಟ್ಟಿಲ್ಲ ಅಂದ್ರೆ ಹೇಗೆ? ಸುಮ್ಮನೇ‌ ಸುಳ್ಳು ಆರೋಪ ಮಾಡಬಾರದು. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಅನುದಾನ ಕೊಟ್ಟಿದ್ದರಾ? ಅಧಿಕಾರದಲ್ಲಿದ್ದಾಗ ಏನೂ ಮಾಡದ ಅವರು ಈಗ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿಎಂ ಹಾಸನದಲ್ಲಿ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.