ಫೆ.27ರಂದು ಬೆಳಗ್ಗೆ 9 ಗಂಟೆಗೆ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭ: ಡಿಕೆ ಸುರೇಶ್
DK Suresh: ಫೆಬ್ರವರಿ 27ರಿಂದ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಸಂಸದ ಡಿ.ಕೆ.ಸುರೇಶ್ ಯಾತ್ರೆ ಸಾಗುವ ಮಾರ್ಗ, ಬೆಂಗಳೂರಿನಲ್ಲಿ ಪಾದಯಾತ್ರೆ ಮಾರ್ಗ ಬದಲಾವಣೆ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಮನಗರ: ಫೆ.27ರಂದು ಬೆಳಗ್ಗೆ 9 ಗಂಟೆಗೆ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಪ್ರಾರಂಭವಾಗಲಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (DK Suresh) ಮಾಹಿತಿ ನೀಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಪಾದಯಾತ್ರೆಯ ಪೂರ್ವಭಾವಿ ಸಭೆಯ ನಂತರ ಅವರು ಮಾತನಾಡಿದರು. ಒಟ್ಟು 5 ದಿನಗಳ ಕಾಲ ಪಾದಯಾತ್ರೆ (Mekedatu Padayatre) ನಡೆಯಲಿದೆ. ಬೆಂಗಳೂರಿನಲ್ಲೇ 5 ದಿನ ಪಾದಯಾತ್ರೆಗೆ ನಿರ್ಧರಿಸಿದ್ದೆವು. ಬಜೆಟ್ ಹಿನ್ನೆಲೆ ಬೆಂಗಳೂರಲ್ಲಿ 3 ದಿನ ಮಾತ್ರ ಪಾದಯಾತ್ರೆ ಮಾಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಪಾದಯಾತ್ರೆಯ ಕೆಲ ಮಾರ್ಗ ಬದಲಿಸುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಹೇಳಿದ್ದಾರೆ. ಸಿದ್ದರಾಮಯ್ಯ (Siddaramaiah), ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಮೊದಲ ದಿನ ರಾಮನಗರದಿಂದ ಬಿಡದಿಯವರೆಗೆ, ಎರಡನೇ ದಿನ ಬಿಡದಿಯಿಂದ ಕೆಂಗೇರಿವರೆಗೆ ಪಾದಯಾತ್ರೆ ನಡೆಯಲಿದೆ. ಕಳೆದ ಬಾರಿ ರಾಜ್ಯದ ಮೂಲೆಗಳಿಂದ ಬಂದ ಜನರಿಗೆ ಜಿಲ್ಲೆಯ ಜನ ಆತಿಥ್ಯ ಮಾಡಿದ್ದೆವು. ಈಗಲೂ ಸಹ ಅದರ ಸಿದ್ಧತೆಗಾಗಿ ಸಭೆ ಮಾಡುತ್ತಿದ್ದೇವೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆ ಬಗ್ಗೆ ಹೆಚ್‌ಡಿಕೆ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಸುರೇಶ್, ಹೆಚ್.ಡಿ.ಕುಮಾರಸ್ವಾಮಿ ಪ್ರಧಾನಮಂತ್ರಿ ಕುಟುಂಬದವರು. ಅವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಹೆಚ್ಡಿಕೆಗಿರುವಷ್ಟು ಬುದ್ಧಿ, ತಿಳುವಳಿಕೆ ರಾಜ್ಯದಲ್ಲಿ ಯಾರಿಗೂ ಇಲ್ಲ. ಅವರು ಏನು ಮಾತನಾಡಿದರೂ ಕೇಳಬೇಕಷ್ಟೇ, ಪ್ರಶ್ನಿಸಬಾರದು. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಏನು ಹೇಳುತ್ತಾರೋ ಕೇಳಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರದ ನಿಧಾನಗತಿ ಧೋರಣೆ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್, ‘‘ಸಿಎಂ ದೆಹಲಿಗೆ ಬಂದಾಗ ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮಾಡಿದ್ದೆ. ಅವರು ನಾವು ಮಾಡ್ತೇವೆಂದಿದ್ದರು. ಆದರೆ ಇದುವರೆಗೆ ಯಾವುದೇ ಚಕಾರ ಎತ್ತಿಲ್ಲ. ಕೇಂದ್ರ ಸರ್ಕಾರದ ಅನುಮತಿ ತರುವುದು ರಾಜ್ಯದ ಜವಾಬ್ದಾರಿ. ಹಾಗಾಗಿ ರಾಜ್ಯ-ಕೇಂದ್ರ ಸರ್ಕಾರಕ್ಕೆ ಪಾದಯಾತ್ರೆ ಮೂಲಕ ಒತ್ತಾಯ ಮಾಡುತ್ತಿದ್ದೇವೆ. ಯಾವುದೇ ಅಡೆತಡೆ ಬಂದರೂ ಸಹ ಪಾದಯಾತ್ರೆ ಮುಂದುವರೆಸುತ್ತೇವೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬೆಂಬಲ ಪಾದಯಾತ್ರೆಗೆ ಸಿಗಲಿದೆ. ಬೆಂಗಳೂರಿನ ಜನರು ಈ ಪಾದಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ಕೊಡುತ್ತಾರೆ ಎಂದು ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಯಲ್ಲಿ ತಾಂತ್ರಿಕ ಸಮಸ್ಯೆ ಏನು ಇಲ್ಲ. ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಿದೆ. ಇವತ್ತು ರಾಜ್ಯ – ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇವತ್ತು ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಕೊಡಲು ಅವಕಾಶ ಇರುವುದು ಕೇಂದ್ರ ಸರ್ಕಾರಕ್ಕೆ. ಕಾವೇರಿ ಪ್ರಾಧಿಕಾರ ರಚನೆಯಾಗಿದೆ. ಅದರಲ್ಲಿ ಕುಡಿಯುವ ನೀರಿನ ಯೋಜನೆ ಎಂದು ಕೇಂದ್ರ ಸರ್ಕಾರ ಅನುಮೋದನೆ ಕೊಡಬೇಕಿದೆ. ಎರಡೂ ಕಡೆ ಬಿಜೆಪಿ ಸರ್ಕಾರ ಇರುವುದರಿಂದ ಒತ್ತಡ ಮಾಡುತ್ತಿದ್ದೇವೆ. ಜನರ ಒತ್ತಾಯದ ಮುಂದೆ ಬೇರೆ ಏನು ಇಲ್ಲ, ಮಾಡಲೇಬೇಕಾಗುತ್ತದೆ ಎಂದು ಡಿ.ಕೆ ಸುರೇಶ್ ನುಡಿದಿದ್ದಾರೆ.
ಇದನ್ನೂ ಓದಿ:
ಟ್ರೆಕಿಂಗ್ಗೆ ಬಂದು ದುರ್ಗಮ ಕಮರಿಗೆ ಜಾರಿಬಿದ್ದ ಯುವಕ: ರಕ್ಷಣೆಗೆ ಬಂತು ವಾಯುಪಡೆ ಹೆಲಿಕಾಪ್ಟರ್
SBI SCO Recruitment 2022: SBI ನಲ್ಲಿ 48 ಹುದ್ದೆಗಳಿಗೆ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ